ನೂತನ ಶಾಲೆ ಉದ್ಘಾಟನೆ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮ

0 302

ಎನ್.ಆರ್.ಪುರ: ಶ್ರೀ ಜಗದ್ಗುರು ರಂಭಾಪುರಿ ಪೀಠದಲ್ಲಿ (Rambhapuri Peeta) ನ.27ರಂದು ಶ್ರೀ ಜಗದ್ಗುರು ರೇಣುಕಾಚಾರ್ಯ ಶಿಕ್ಷಣ ಪ್ರತಿಷ್ಠಾನದ ವೀರಭದ್ರಸ್ವಾಮಿ ವಸತಿ ಹಿರಿಯ ಪ್ರಾಥಮಿಕ ಶಾಲೆ (School) ಹಾಗೂ ಜಗದ್ಗುರು ರುದ್ರಮುನೀಶ್ವರ ವಸತಿ ಪ್ರೌಢಶಾಲೆಯ ನೂತನ ಕಟ್ಟಡದ ಉದ್ಘಾಟನೆ ನಡೆಯುವ ಹಿನ್ನೆಲೆಯಲ್ಲಿ ಗುರುವಾರ ನೂತನ ಕಟ್ಟಡದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು.


ರಂಭಾಪುರಿ ಪೀಠದ ಜಗದ್ಗುರು ರೇಣುಕಾಚಾರ್ಯ ಗುರುಕುಲದ ಅರ್ಚಕ ಸಿದ್ದಲಿಂಗಯ್ಯ ಶಾಸ್ತ್ರೀ ನೇತೃತ್ವದಲ್ಲಿ ಗುರುಕುಲದ ಸಾಧಕರು ಗಣಪತಿ ಹೋಮ, ವಾಸ್ತುಪೂಜೆ, ವಾಸ್ತುಹೋಮ, ಮಕ್ಕಳ ವಿದ್ಯಾಭ್ಯಾಸ ಪ್ರಾಪ್ತಿಗಾಗಿ ದಕ್ಷಿಣಾಮೂರ್ತಿ ಮಂಡಲಾರಾಧನೆ, ದಕ್ಷಿಣಾಮೂರ್ತಿ ಹೋಮ, ಶತಾಕ್ಷರಿ ಸರಸ್ವತಿ ಮಂಡಲಾರಾಧನೆ ಮತ್ತು ಹೋಮ ನಡೆಸಲಾಯಿತು.


ಕಟ್ಟಡದ ಗುತ್ತಿಗೆದಾರ ಬೆಂಗಳೂರು ಎವಿಎಸ್ ಪ್ರಾಜೆಕ್ಟ್‌ನ ಬಾಳಯ್ಯ ಶಿ ಇಂಡಿಮಠ ಉದ್ಘಾಟನಾ ಸಮಾರಂಭದ ಕುರಿತು ಮಾಹಿತಿ ನೀಡಿ, ರಂಭಾಪುರಿ ಪೀಠದ ಆಶ್ರಯದಲ್ಲಿ ನಡೆಯುತ್ತಿರುವ ಜಗದ್ಗುರು ರೇಣುಕಾಚಾರ್ಯ ಶಿಕ್ಷಣ ಪ್ರತಿಷ್ಠಾನದ ರುದ್ರಮುನೀಶ್ವರ ವಸತಿ ಪ್ರೌಢಶಾಲೆ, ವೀರಭದ್ರಸ್ವಾಮಿ ಪ್ರಾಥಮಿಕ ಶಾಲೆಯ ನೂತನ ಕಟ್ಟಡವನ್ನು ವಿಶೇಷ ತಂತ್ರಜ್ಞಾನಗಳನ್ನು ಬಳಸಿ ವಿನೂತನ ಶೈಲಿಯಲ್ಲಿ ನಿರ್ಮಿಸಿದ್ದು, ವಿದ್ಯಾರ್ಥಿಗಳ ಕಲಿಕೆಗೆ ಪೂರಕ ವಾತಾವರಣ ತಯಾರು ಮಾಡಲಾಗಿದೆ. ನ.27ರಂದು ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳ ಸಾನ್ನಿಧ್ಯದಲ್ಲಿ ನಡೆಯುವ ಉದ್ಘಾಟನೆ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಜೆ.ಜಾರ್ಜ್, ಸಚಿವ ಮಧು ಬಂಗಾರಪ್ಪ, ಎಚ್.ಕೆ.ಪಾಟೀಲ್, ಈಶ್ವರ್ ಖಂಡ್ರೆ ಸೇರಿದಂತೆ ಗಣ್ಯರು ಭಾಗವಹಿಸಲಿದ್ದಾರೆ.

ಸಮಾರಂಭವನ್ನು ರಂಭಾಪುರಿ ಜಗದ್ಗುರುಗಳ ಆಶಯದಂತೆ ಅಚ್ಚುಕಟ್ಟಾಗಿ ನೆರವೇರಿಸಲು ಸಕಲ ಸಿದ್ಧತೆ ಕೈಗೊಳ್ಳಲಾಗಿದೆ. ವಿಶಾಲ ವೇದಿಕೆಯನ್ನು ನಿರ್ಮಾಣ ಮಾಡಿ ಸಭಾ ಕಾರ್ಯಕ್ರಮ ನಡೆಸಲಾಗುವುದು. ಸಮಾರಂಭಕ್ಕೆ ಆಗಮಿಸಿದ ಗಣ್ಯರು, ಭಕ್ತರು ಹಾಗೂ ವಿದ್ಯಾರ್ಥಿಗಳಿಗೆ ವಿಶೇಷ ಭೋಜನದ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ತಿಳಿಸಿದರು.


ಶ್ರೀಪೀಠದ ಅರ್ಚಕರಾದ ಶಿವಪ್ರಕಾಶ್ ಶಾಸ್ತ್ರಿ, ಶಿಕ್ಷಕ ವೀರೇಶ ಕುಲಕರ್ಣಿ ಮತ್ತು ಶಿಕ್ಷಕರು ಹಾಜರಿದ್ದರು.

Leave A Reply

Your email address will not be published.

error: Content is protected !!