ಪ್ರಾಥಮಿಕ ಆರೋಗ್ಯ ಕೇಂದ್ರ ನಿರ್ಮಿಸಲು ಸಚಿವರಿಗೆ ಒತ್ತಾಯ

0 40ಚಿಕ್ಕಮಗಳೂರು : ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವವರ ನಿವಾಸಿಗಳಿಗೆ ವಾರ್ಡ್ ನಲ್ಲೇ ಪ್ರಾಥಮಿಕ ಆರೋಗ್ಯ ಕೇಂದ್ರ ನಿರ್ಮಿಸುವ ಮೂಲಕ ತುರ್ತು ಚಿಕಿತ್ಸೆ ಪಡೆದುಕೊಳ್ಳಲು ಅನುಕೂಲ ಕಲ್ಪಿಸಿ ಕೊಡಬೇಕು ಎಂದು ನಗರಸಭಾ ಸದಸ್ಯರು ಆರೋಗ್ಯ ಸಚಿವ ದಿನೇಶ್‌ಗುಂಡುರಾವ್ ಅವರನ್ನು ಗುರುವಾರ ಒತ್ತಾಯಿಸಿದರು.
ಈ ವೇಳೆ ಮಾತನಾಡಿದ ಉಪ್ಪಳ್ಳಿ ನಗರಸಭಾ ಸದಸ್ಯ ಮುನೀರ್ ಅಹ್ಮದ್ ನಗರದ ಉಪ್ಪಳ್ಳಿ, ಕಲ್ಲುದೊಡ್ಡಿ, ಶಾಂತಿನಗರ , ಇಂದಿರಾಗಾಂಧಿ ಹಾಗೂ ರಾಜೀವ್‌ಗಾಂಧಿ ಬಡಾವಣೆಯಲ್ಲಿ 18 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಹೊಂದಿದ್ದು ಆರೋಗ್ಯ ಸಮಸ್ಯೆ ಎದುರಾದರೆ 5 ಕಿ.ಮೀ. ಸಂಚರಿಸಿ ಚಿಕಿತ್ಸೆ ಪಡೆಯುವ ಸ್ಥಿತಿ ನಿರ್ಮಾಣವಾಗಿದೆ ಎಂದರು.


ಪ್ರಸ್ತುತ ಈ ಬಡಾವಣೆಗಳಲ್ಲಿ ಅತಿಹೆಚ್ಚು ಕೂಲಿಕಾರ್ಮಿಕರು, ಡೊಂಗ್ರಿ ಗೇರೇಷಿಯಾ ಹಾಗೂ ಹಕ್ಕಿಪಿಕ್ಕಿ ಜನಾಂಗ ಸೇರಿದಂತೆ ಮಧ್ಯಮ ವರ್ಗದವರೇ ವಾಸಿಸುತ್ತಿರುವ ಹಿನ್ನೆಲೆಯಲ್ಲಿ ರೋಗ ರುಜಿನಿಗಳಿಗೆ ತುತ್ತಾಗುವ ಸಂದರ್ಭವಿರುವುದರಿಂದ ಚಿಕಿತ್ಸೆ ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು.
ಆ ನಿಟ್ಟಿನಲ್ಲಿ ಉಪ್ಪಳ್ಳಿ ವಾರ್ಡ್ಗಳಲ್ಲಿಯೇ ಪ್ರಾಥಮಿಕ ಆರೋಗ್ಯ ಕೇಂದ್ರ ನಿರ್ಮಿಸಿದರೆ ಸ್ಥಳೀಯ ಹಾಗೂ ಸುತ್ತಮುತ್ತಲಿನ ನರಗನಹಳ್ಳಿ, ಬ್ಯಾಗದಹಳ್ಳಿ ಗ್ರಾಮಸ್ಥರಿಗೂ ಬಹಳಷ್ಟು ಅನುಕೂಲವಾಗುವ ಜೊತೆಗೆ ಸಣ್ಣಪುಟ್ಟ ಆರೋಗ್ಯ ಸಮಸ್ಯೆ ಎದುರಾಗಲು ತಕ್ಷಣವೇ ಚಿಕಿತ್ಸೆ ಪಡೆದುಕೊಳ್ಳಬಹುದು ಎಂದು ತಿಳಿಸಿದರು.


ಈ ಸಂದರ್ಭದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯೆ ಗಾಯತ್ರಿ ಶಾಂತೇಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಪಿ.ಮಂಜೇಗೌಡ, ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ನಯಾಜ್ ಅಹ್ಮದ್, ನಗರಸಭಾ ಸದಸ್ಯರಾದ ಖಜಂಧರ್ ಮೋನು, ಜಾವೀದ್, ಶಾದಂ ಅಲಂ, ಪರಮೇಶ್ ಮತ್ತಿತರರು ಹಾಜರಿದ್ದರು.


ರೋಗಿಗಳಿಗೆ ಸಕಾಲದಲ್ಲಿ ಚಿಕಿತ್ಸೆ ಒದಗಿಸಲು ಸಚಿವರಿಗೆ ಒತ್ತಾಯ
ಚಿಕ್ಕಮಗಳೂರು : ಜಿಲ್ಲಾ ಸರ್ಕಾರಿ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವ ಮೂಲಕ ತುರ್ತು ಸಂದರ್ಭದಲ್ಲಿ ಬರುವಂತಹ ರೋಗಿಗಳಿಗೆ ಸಕಾಲದಲ್ಲಿ ಚಿಕಿತ್ಸೆ ನೀಡಲು ವ್ಯವಸ್ಥೆ ಕಲ್ಪಿಸಬೇಕು ಎಂದು ಸರ್ವಧರ್ಮ ಸೇವಾ ಸಮಿತಿ ಮುಖಂಡರು ಆರೋಗ್ಯ ಸಚಿವ ದಿನೇಶ್ ಗುಂಡುರಾವ್ ಅವರನ್ನು ಗುರುವಾರ ಒತ್ತಾಯಿಸಿದರು.


ಈ ವೇಳೆ ಮಾತನಾಡಿದ ಸಮಿತಿ ಜಿಲ್ಲಾಧ್ಯಕ್ಷ ಕೆ.ಭರತ್ ಜಿಲ್ಲಾಸ್ಪತ್ರೆಗೆ ಒಳಪಡುವಂತಹ ಕಾಮಗಾರಿ ಹಾಗೂ ತುರ್ತು ಸಂದರ್ಭದಲ್ಲಿ ಬೇಕಾಗುವಂತಹ ಸೌಕರ್ಯಗಳನ್ನು ಕಳೆದ ಸರ್ಕಾರವು ಹಾಗೂ ಹಿಂದಿನ ಶಾಸಕರು ಯಾವುದೇ ರೀತಿಯ ವ್ಯವಸ್ಥೆಗೊಳಿಸದೇ ಅಸಡ್ಡೆ ಮಾಡಲಾಗಿದೆ ಎಂದು ಹೇಳಿದರು.


ಹಿಂದಿನ ಶಾಸಕರು ಕೇವಲ ಆಶ್ವಾಸನೆಗಳ ಹೊರತುಪಡಿಸಿದರೆ ರೋಗಿಗಳಿಗೆ ಅವಶ್ಯಕವಿರುವಂತಹ ಚಿಕಿತ್ಸೆಗಳ ಬಗ್ಗೆ ಕಳೆದ ಎರಡು ದಶಕದಂದಲೂ ತಲೆಕೆಡಿಸಿಕೊಂಡಿರದ ಪರಿಣಾಮ ಅಪಘಾತ, ತುರ್ತು ಚಿಕಿತ್ಸೆ ಸೇರಿದಂತೆ ಸಣ್ಣಪುಟ್ಟ ಆರೋಗ್ಯ ಸಮಸ್ಯೆಗೂ ಪಕ್ಕದ ಜಿಲ್ಲೆಗೆ ರೋಗಿಗಳು ತೆರಳಬೇಕಾದ ಸ್ಥಿತಿ ನಿರ್ಮಾಣವಾಗಿದೆ ಎಂದರು.


ಬಹುತೇಕ ಎಲ್ಲಾ ತಾಲ್ಲೂಕಿನಿಂದ ಜಿಲ್ಲಾಸ್ಪತ್ರೆಗೆ ಆಗಮಿಸುವಂತಹ ಗ್ರಾಮೀಣ ಪ್ರದೇಶದ ರೋಗಿಗಳಿಗೆ ಸಮ ಯಕ್ಕೆ ಸರಿಯಾಗಿ ವೈದ್ಯರು ಸಿಗದೇ ಅಲೆದಾಡುವಂತಾಗಿದೆ. ಅದಲ್ಲದೇ ತಾಲ್ಲೂಕು ಮಟ್ಟದ ಆಸ್ಪತ್ರೆಯಲ್ಲಿ ಶುಶ್ರೂಕಿ ಯರ ಕೊರತೆಯಿಂದ ಜಿಲ್ಲಾಸ್ಪತ್ರೆಗೆ ಬಂದರೂ ಸೂಕ್ತ ಚಿಕಿತ್ಸೆ ದೊರೆಯದಂತಾಗಿದೆ ಎಂದರು.
ಕೂಡಲೇ ಜಿಲ್ಲಾ ಹಾಗೂ ತಾಲ್ಲೂಕು ಸರ್ಕಾರಿ ಆಸ್ಪತ್ರೆಗಳನ್ನು ಮೇಲ್ದಜೇಗೇರಿಸಬೇಕು. ಸೂಕ್ತ ವೈದ್ಯರು ಹಾಗೂ ಸಿಬ್ಬಂದಿಗಳನ್ನು ನೇಮಿಸಿ ಜಿಲ್ಲೆಯ ಜನತೆಗೆ ಅನುಕೂಲ ಕಲ್ಪಿಸಿಕೊಡಬೇಕು ಎಂದು ಒತ್ತಾಯಿಸಿದರು.


ಈ ಸಂದರ್ಭದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯೆ ಗಾಯತ್ರಿ ಶಾಂತೇಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಪಿ.ಮಂಜೇಗೌಡ, ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ನಯಾಜ್ ಅಹ್ಮದ್, ಮುಖಂಡರಾದ ಕುಸುಮ ಭರತ್, ಯಶೋಧಮ್ಮ ಮತ್ತಿತರರು ಹಾಜರಿದ್ದರು.


ಟೀಶರ್ಟ್ ಮತ್ತು ಶಾರ್ಟ್ಸ್ ವಿತರಣೆ :
ಚಿಕ್ಕಮಗಳೂರು ; ನಗರದ ಜ್ಯೂನಿಯರ್ ಕಾಲೇಜು ಪಿಯುಸಿ ವಿದ್ಯಾರ್ಥಿಗಳು ಪುಟ್ ಬಾಲ್ ಕ್ರೀಡೆಯಲ್ಲಿ ಜಿಲ್ಲಾ ಮಟ್ಟದಿಂದ ರಾಜ್ಯಮಟ್ಟಕ್ಕೆ ಆಯ್ಕೆಯಾದ ಹಿನ್ನೆಲೆಯಲ್ಲಿ ನಗರಸಭಾ ಸದಸ್ಯ ಮುನೀರ್ ಅಹ್ಮದ್ ಅವರು ಆಟಗಾರರಿಗೆ ಟೀಶರ್ಟ್ ಮತ್ತು ಶಾರ್ಟ್ಸ್ ನ್ನು ಉಚಿತವಾಗಿ ವಿತರಿಸಿದರು.
ಈ ಸಂದರ್ಭದಲ್ಲಿ ರಾಷ್ಟ್ರೀಯ ಮಾನವ ಹಕ್ಕುಗಳ ಮಾಹಿತಿ ಸಮಿತಿ ರಾಜ್ಯಾಧ್ಯಕ್ಷೆ ವಿನುತ, ವಿದ್ಯಾರ್ಥಿಗಳಾದ ಸುಮಿತ್, ಶ್ರೇಯಸ್, ವಿಷ್ಣು, ಅಲ್ತಾಫ್, ಇರ್ಷಾದ್ ಮತ್ತಿತರರು ಹಾಜರಿದ್ದರು.

Leave A Reply

Your email address will not be published.

error: Content is protected !!