ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರವೂ ಮುಖ್ಯ ; ರಂಭಾಪುರಿ ಶ್ರೀಗಳು

0 418

ಎನ್.ಆರ್.ಪುರ: ಧಾರ್ಮಿಕ ಕ್ಷೇತ್ರದಲ್ಲಿ ಶಿಕ್ಷಣದ (Education) ಜೊತೆಗೆ ಸಂಸ್ಕಾರವೂ ಮಕ್ಕಳಿಗೆ (Children’s) ಸಿಗಬೇಕೆಂಬ ಲಿಂ.ಶ್ರೀ ರಂಭಾಪುರಿ ವೀರರುದ್ರಮುನಿ ಜಗದ್ಗುರುಗಳವರ ಸತ್ಯ ಸಂಕಲ್ಪ ಸಾಕಾರಗೊಂಡಿದೆ. ಇದೇ ಉದ್ದೇಶದಿಂದ ಪ್ರಾರಂಭಿಸಲ್ಪಟ್ಟ ಶಾಲೆ ಇಂದು ನೂತನ ಕಟ್ಟಡವನ್ನು ಹೊಂದಿ ಮಕ್ಕಳಿಗೆ ಹೆಚ್ಚಿನ ಅನುಕೂಲ ಮಾಡಿಕೊಡುತ್ತಿದೆ. ಗ್ರಾಮೀಣ ಭಾಗದ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕೆಂಬ ಗುರಿಯೊಂದಿಗೆ ಶ್ರೀ ಜಗದ್ಗುರು ರೇಣುಕಾಚಾರ್ಯ ಶಿಕ್ಷಣ ಪ್ರತಿಷ್ಠಾನ ಮುನ್ನಡೆಯುತ್ತಿರುವುದು ತಮಗೆ ಸಮಾಧಾನ ತಂದಿದೆ ಎಂದು ಶ್ರೀ ರಂಭಾಪುರಿ (Rambhapuri) ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.


ಅವರು ಸೋಮವಾರ ಶ್ರೀ ಜಗದ್ಗುರು ರೇಣುಕಾಚಾರ್ಯ ಶಿಕ್ಷಣ ಪ್ರತಿಷ್ಠಾನದ ಶ್ರೀ ವೀರಭದ್ರಸ್ವಾಮಿ ವಸತಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಶ್ರೀ ಜಗದ್ಗುರು ರುದ್ರಮುನೀಶ್ವರ ವಸತಿ ಪ್ರೌಢ ಶಾಲೆಯ ನೂತನ ಕಟ್ಟಡದ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.


ಶ್ರೀ ಜಗದ್ಗುರು ರಂಭಾಪುರಿ ಪೀಠದಲ್ಲಿ ಜಾತಿ ಮತ ಪಂಥ ಎನ್ನದೇ ಎಲ್ಲ ಗ್ರಾಮೀಣ ಬಡ ಮಕ್ಕಳಿಗೆ ವಸತಿಯುತ ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣದ ಜೊತೆಗೆ ನೈತಿಕ ಶಿಕ್ಷಣವನ್ನು ನೀಡಲಾಗುತ್ತಿದೆ. 1992-93ನೇ ಸಾಲಿನಲ್ಲಿ ಎಸ್.ಬಂಗಾರಪ್ಪನವರು ಮುಖ್ಯಮಂತ್ರಿಗಳಾಗಿದ್ದಾಗ ಅಂದಿನ ಶಿಕ್ಷಣ ಸಚಿವ ವೀರಪ್ಪ ಮೊಯಿಲಿಯವರಿಂದ ಉದ್ಘಾಟನೆಗೊಂಡಿದ್ದ ಶಾಲಾ ಕಟ್ಟಡದಲ್ಲಿ ಮಕ್ಕಳು ಓದುತ್ತಿದ್ದು ಇನ್ನೂ ಹೆಚ್ಚಿನ ಅನುಕೂಲ ಮಾಡಿಕೊಡುವ ಉದ್ದೇಶದಿಂದ ನೂತನ ಶಾಲಾ ಕಟ್ಟಡ ನಿರ್ಮಾಣಗೊಂಡಿದೆ. ಕಾರ್ತಿಕ ಮಾಸದ ದೀಪ ಜ್ಞಾನದ ಸಂಕೇತ. ಅಂಥ ಜ್ಞಾನ ದೇಗುಲವನ್ನು ಕಾರ್ತಿಕ ಮಾಸದಲ್ಲಿಯೇ ನೂತನ ಕಟ್ಟಡದಲ್ಲಿ ಆರಂಭಿಸಿರುವುದು ಸಮಾಧಾನ ತಂದಿದೆ. ಶಿಕ್ಷಣ ಸಚಿವ ಮಧು ಬಂಗಾರಪ್ಪನವರು ಶಿಕ್ಷಣಕ್ಕೆ ಹೊಸ ರೂಪ ಕೊಡುವ ಸಂಕಲ್ಪದೊಂದಿಗೆ ಉತ್ತೇಜನ ನೀಡುವ ಕಾರ್ಯ ನಿರ್ವಹಿಸುತ್ತಿದ್ದು ನೂತನ ಕಟ್ಟಡ ಅವರಿಂದ ಉದ್ಘಾಟನೆಗೊಂಡಿದ್ದು ಸಂತೋಷದ ಸಂಗತಿ. ಗಡಿ ಭಾಗದಲ್ಲಿರುವ ಕನ್ನಡ ಸರ್ಕಾರಿ ಶಾಲೆಗಳಿಗೆ ಹೊಸ ಶಿಕ್ಷಣ ನೀತಿಯನ್ನು ಜಾರಿಗೆ ತರುವಲ್ಲಿ ಸರ್ಕಾರ ಗಟ್ಟಿ ನಿರ್ಧಾರವನ್ನು ಕೈಗೊಳ್ಳಬೇಕಾಗಿದೆ. ಶ್ರೀ ಪೀಠದಲ್ಲಿ ಇಂದು ಸರ್ಕಾರದ ಯಾವುದೇ ಅನುದಾನವಿಲ್ಲದೇ ಹೊಸ ಕಟ್ಟಡ ನಿರ್ಮಾಣಗೊಂಡಿದೆ. ಗ್ರಾಮೀಣ ಭಾಗದ ಅನುದಾನಿತ ಶಾಲೆಗಳಲ್ಲಿ ನಿವೃತ್ತಿಯ ಮೂಲಕ ತೆರವಾಗುವ ಶಿಕ್ಷಕರ ಸ್ಥಾನಗಳನ್ನು ತುಂಬುವ ಕೆಲಸ ಸರ್ಕಾರದಿಂದ ಆಗಬೇಕು. ಇಂಧನ ಖಾತೆ ಸಚಿವ ಕೆ.ಜೆ.ಜಾರ್ಜ ಅವರು ಸದ್ಭಾವನೆ ಹೊಂದಿದವರಾಗಿದ್ದಾರೆ. ಗಾಮೀಣ ಭಾಗಕ್ಕೆ ವಿದ್ಯುತ್ತಿನ ಅವಶ್ಯಕತೆ ಇದ್ದು ಹೆಚ್ಚಿನ ಸಮಯದ ವಿದ್ಯುತ್ತನ್ನು ಪೂರೈಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಬೇಕೆಂಬುದು ನಾಡಿನ ಗ್ರಾಮೀಣರ ನಿರೀಕ್ಷೆಯಾಗಿದೆ. ಕೇವಲ 4 ತಿಂಗಳ ಅವಧಿಯಲ್ಲಿ ಹೊಸ ಶಾಲಾ ಕಟ್ಟಡ ನಿರ್ಮಾಣಗೊಂಡಿರುವುದು ಎ.ವಿ.ಎಸ್.ಪ್ರೊಜೆಕ್ಟಿನ ಬಾಳಯ್ಯ ಇಂಡಿಮಠರ ಶ್ರಮ ಮತ್ತು ಶ್ರದ್ಧೆಗೆ ಸಾಕ್ಷಿಯಾಗಿದೆ ಎಂದರು.


ನೂತನ ಶಾಲಾ ಕಟ್ಟಡ ಉದ್ಘಾಟಿಸಿದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಾತನಾಡಿ, ಇಂದು ಉದ್ಘಾಟನೆಗೊಂಡಿರುವ ಶಾಲಾ ಕಟ್ಟಡ ಅಲ್ಪಾವಧಿಯಲ್ಲಿ ಸುಂದರವಾಗಿ ನಿರ್ಮಾಣಗೊಂಡಿರುವುದು ತಮಗೆ ಸಂತೋಷ ಮೂಡಿಸಿದೆ. ಶ್ರೀ ರಂಭಾಪುರಿ ಪೀಠ ಧಾರ್ಮಿಕತೆಯ ಜೊತೆಗೆ ಶಿಕ್ಷಣಕ್ಕೂ ಒತ್ತು ನೀಡುತ್ತಿರುವುದು ಅಭಿಮಾನದ ಸಂಗತಿಯಾಗಿದೆ. ರಾಜ್ಯದಲ್ಲಿ 1 ಕೋಟಿ 25 ಲಕ್ಷ ಮಕ್ಕಳು ಓದುತ್ತಿದ್ದು ಅವರೆಲ್ಲರಿಗೂ ಮೌಲ್ಯಯುತ ಉತ್ತಮ ಮಟ್ಟದ ಶಿಕ್ಷಣ ನೀಡಬೇಕೆಂಬುದು ತಮ್ಮ ಗುರಿಯಾಗಿದೆ. ಇಲಾಖೆಯಲ್ಲಿ ಹಲವು ಸಮಸ್ಯೆಗಳು ಇದ್ದು ಅವೆಲ್ಲವುಗಳನ್ನು ಸರಿಪಡಿಸಿ ಬದಲಾವಣೆ ತರುವ ಪ್ರಯತ್ನ ನಡೆದಿದೆ ಎಂದರು.


ಸಸಿಗೆ ನೀರೆರೆಯುವ ಮೂಲಕ ಸಮಾರಂಭವನ್ನು ಉದ್ಘಾಟಿಸಿದ ಇಂಧನ ಖಾತೆ ಸಚಿವ ಮತ್ತು ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಮಾತನಾಡಿ, ಜಾತಿ, ಮತ, ಪಂಥ ಎನ್ನದೇ ಗ್ರಾಮೀಣ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕೆನ್ನುವುದು ಸರ್ಕಾರದ ಗುರಿಯಾಗಿದ್ದು ಅದಕ್ಕೆ ಪೂರಕವಾಗಿ ಶ್ರೀ ರಂಭಾಪುರಿ ಪೀಠ ಕಾರ್ಯ ನಿರ್ವಹಿಸುತ್ತಿದೆ. ಶ್ರೀ ಪೀಠ ಕೈಗೊಳ್ಳುವ ಜನಪರ ಕಾರ್ಯಕ್ರಮಗಳಿಗೆ ತಮ್ಮ ಬೆಂಬಲ ಸದಾ ಇದೆ ಎಂದರು.


ಅ.ಭಾ.ವೀರಶೈವ ಶಿವಾಚಾರ್ಯ ಸಂಸ್ಥೆ ಗೌರವಾಧ್ಯಕ್ಷರಾದ ಎಡೆಯೂರು ಕ್ಷೇತ್ರದ ರೇಣುಕ ಶಿವಾಚಾರ್ಯ ಸ್ವಾಮಿಗಳು ಹಾಗೂ ಅಧ್ಯಕ್ಷರಾದ ಮುಕ್ತಿಮಂದಿರ ಕ್ಷೇತ್ರದ ವಿಮಲ ರೇಣುಕ ಮುಕ್ತಿಮುನಿ ಶಿವಾಚಾರ್ಯ ಸ್ವಾಮಿಗಳು ಉಪದೇಶಾಮೃತ ನೀಡಿದರು.
ಹೂಲಿ ಶಿವಸಿದ್ಧರಾಮೇಶ್ವರ ಶಿವಾಚಾರ್ಯರು, ಸಂಗೊಳ್ಳಿ ಗುರುಲಿಂಗ ಶಿವಾಚಾರ್ಯರು ಹಾಗೂ ಸಿಂದಗಿ ಶ್ರೀಗಳು ಉಪಸ್ಥಿತರಿದ್ದರು.


ಅಧ್ಯಕ್ಷತೆ ವಹಿಸಿದ ಶಾಸಕ ಟಿ.ಡಿ.ರಾಜೇಗೌಡರು ಶ್ರೀ ಪೀಠದ ಮುಖವಾಣಿ ರಂಭಾಪುರಿ ಬೆಳಗು ಬಿಡುಗಡೆ ಮಾಡಿ ಮಾತನಾಡಿದರು. ಮಾಜಿ ಶಾಸಕ ಜಿ.ಎಸ್.ಗಡ್ಡದ್ದೇವರಮಠ, ಜಿ.ಪಂಚಾಯತ ಮಾಜಿ ಉಪಾಧ್ಯಕ್ಷ ಎಂ.ಎಸ್.ಚನ್ನಕೇಶವ, ಸಾಮಾಜಿಕ ಕಾರ್ಯಕರ್ತರಾದ ಕು||ಬಿ.ಸಿ.ಗೀತಾ ಹಾಗೂ ಬಿ.ಕಣಬೂರು ಗ್ರಾಮ ಪಂಚಾಯತ ಅಧ್ಯಕ್ಷರು ಉಪಾಧ್ಯಕ್ಷರು ಹಾಗೂ ಸರ್ವ ಸದಸ್ಯರು ಪಾಲ್ಗೊಂಡಿದ್ದರು.

ಎ.ವಿ.ಎಸ್.ಪ್ರೊಜೆಕ್ಟಿನ ಗುತ್ತಿಗೆದಾರ ಬಾಳಯ್ಯ ಇಂಡಿಮಠ ಸೇರಿದಂತೆ ಹಲವಾರು ಗಣ್ಯರಿಗೆ ಶ್ರೀ ರಂಭಾಪುರಿ ಜಗದ್ಗರುಗಳು ಗುರುರಕ್ಷೆ ನೀಡಿ ಆಶೀರ್ವದಿಸಿದರು. ಶ್ರೀ ಪೀಠದ ಆಡಳಿತಾಧಿಕಾರಿ ಎಸ್.ಬಿ.ಹಿರೇಮಠ ಸ್ವಾಗತಿಸಿದರು.


ವೇ.ಗಂಗಾಧರ ಶಾಸ್ತ್ರಿಗಳು ಭಕ್ತಿ ಗೀತೆ ಹಾಡಿದರು. ಶಿಕ್ಷಕ ವೀರೇಶ ಕುಲಕರ್ಣಿ ನಿರೂಪಿಸಿದರು.
ಸಾಯಂಕಾಲ ನೂತನ ರಥದ ಉದ್ಘಾಟನೆ, ಕಾರ್ತಿಕ ದೀಪೋತ್ಸವ ಹಾಗೂ ಶ್ರೀ ವೀರಭದ್ರಸ್ವಾಮಿ ರಥೋತ್ಸವ ಉಪಸ್ಥಿತ ಶಿವಾಚಾರ್ಯರ ಮತ್ತು ನಾಡಿನ ಭಕ್ತ ಸಮೂಹದೊಂದಿಗೆ ಅದ್ದೂರಿಯಾಗಿ ಜರುಗಿತು.

Leave A Reply

Your email address will not be published.

error: Content is protected !!