ಮಲೆನಾಡಿನಾದ್ಯಂತ ಭಾರಿ ಪ್ರಮಾಣದ ಮಳೆ ; ಹೊರನಾಡು ಸಂಪರ್ಕಿಸುವ ಹೆಬ್ಬಾಳೆ ಸೇತುವೆ ಮುಳುಗಡೆ – ಹಲವೆಡೆ ಅನಾಹುತ
ಚಿಕ್ಕಮಗಳೂರು : ಮಲೆನಾಡಿನ ಭಾಗದಲ್ಲಿ ಸುರಿಯುತ್ತಿರುವ ಭಾರೀ ಮಳೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಗಾಳಿ-ಮಳೆ ಅಬ್ಬರಕ್ಕೆ ಬೃಹತ್ ಮರ ರಸ್ತೆಗೆ ಉರುಳಿಬಿದ್ದು ಟ್ರಾಫಿಕ್ ಜಾಮ್ ಆದ ಘಟನೆ ತಾಲೂಕಿನ ವಸ್ತಾರೆ ಬಳಿ ನಡೆದಿದೆ.
ಘಟನೆಯ ಪರಿಣಾಮ ಕಡೂರು-ಮಂಗಳೂರು, ರಾ.ಹೆ.173 ಕಡಿತಗೊಂಡಿದ್ದು, ವಾಹನಗಳು ರಸ್ತೆಯಲ್ಲಿ ಸಾಲಾಗಿ ನಿಂತಿದ್ದು, ಚಿಕ್ಕಮಗಳೂರು-ಮಂಗಳೂರು ಸಂಪರ್ಕ ಕಡಿತಗೊಂಡಿದ್ದರಿಂದ ಬೇರೆ ದಾರಿಯಿಂದಾಗಿ 20 ಕಿ.ಮೀ. ಸುತ್ತಿಕೊಂಡು ವಾಹನಗಳು ಹೋಗುತ್ತಿದೆ.
ಜಿಲ್ಲೆಯ ಕಳಸ ಕುದುರೆಮುಖ, ಹೊರನಾಡು, ಮೂಡಿಗೆರೆ, ಶೃಂಗೇರಿ, ಕೊಪ್ಪ, ಜಯಪುರ, ಕೆರೆಕಟ್ಟೆ, ಕಿಗ್ಗಾ, ಮಾಗುಂಡಿ, ಬಾಳೆಹೊನ್ನೂರು, ಚಾರ್ಮಾಡಿಘಾಟಿ ಪ್ರದೇಶದಲ್ಲಿ ನಿರಂತರವಾಗಿ ಮಳೆಯಾಗುತ್ತಿದ್ದು, ಮಲೆನಾಡು ಭಾಗದಲ್ಲಿ ಹರಿಯುವ ತುಂಗಾ, ಭದಾ, ಹೇಮಾವತಿ ನದಿಗಳ ನೀರಿನ ಮಟ್ಟದಲ್ಲಿ ಮತ್ತಷ್ಟು ಏರಿಕೆಯಾಗಿದೆ. ಶೃಂಗೇರಿ, ಕೊಪ್ಪ, ನರಸಿಂಹರಾಜಪುರ, ಬಾಳೆಹೊನ್ನೂರು, ಕೆರೆಕಟ್ಟೆ ಭಾಗದಲ್ಲಿ ಭಾರಿ ಮಳೆಯಾಗುತ್ತಿರುವುದರಿಂದ ತುಂಗಾನದಿ ನೀರಿನ ಮಟ್ಟ ಏರಿಕೆಯಾಗಿದೆ.

ಹೆಬ್ಬಾಳೆ ಸೇತುವೆ ಮುಳುಗಡೆ
ಇನ್ನು ಧಾರಾಕಾರ ಮಳೆ ಸುರಿಯುತ್ತಿರುವ ಪರಿಣಾಮ ಕಳಸ ತಾಲೂಕಿನ ಹೆಬ್ಬಾಳೆ ಸೇತುವೆ ಮುಳುಗಡೆಯಾಗಿದೆ. ಕಾಫಿನಾಡಲ್ಲಿ ಎಡೆಬಿಡದೆ ಮಳೆ ಸುರಿಯುತ್ತಿರುವ ಹಿನ್ನೆಲೆ ಸೇತುವೆ ಮುಳುಗಡೆಯಾಗಿದ್ದು, ಸೇತುವೆ ಮೇಲೆ 2 ಅಡಿಯಷ್ಟು ನೀರು ಹರಿಯುತ್ತಿದೆ. ಇದರ ಪರಿಣಾಮ ಕಳಸ – ಹೊರನಾಡು ಸಂಪರ್ಕ ಕಡಿತಗೊಂಡಿದೆ. ಭಾರೀ ಮಳೆಯಿಂದಾಗಿ ಸುತ್ತ ಹತ್ತಾರು ಹಳ್ಳಿಯ ಜನರು ಸಂಪರ್ಕವನ್ನು ಕಳೆದುಕೊಂಡಿದ್ದಾರೆ. ಅನ್ಯ ಮಾರ್ಗವಿದ್ದರೂ 8ರಿಂದ 10 ಕಿಲೋ ಮೀಟರ್ ಸುತ್ತಿಕೊಂಡು ಬರಬೇಕಾದ ಪರಿಸ್ಥಿತಿ ಎದುರಾಗಿದೆ.
ಗೋಡೆ ಕುಸಿತ !
ಮಲೆನಾಡು ಭಾಗದಲ್ಲಿ ನಿರಂತರವಾಗಿ ಮಳೆಯಾಗುತ್ತಿರುವುದರಿಂದ ಚಿಕ್ಕಮಗಳೂರು ತಾಲೂಕಿನ ಹೊಸಪೇಟೆ ಸಮೀಪದ ಶಿವಪುರ ಗ್ರಾಮದಲ್ಲಿ ಮನೆಯ ಗೋಡೆ ಕುಸಿದು ಬಿದ್ದಿದೆ. ಗ್ರಾಮದ ರಾಜೇಂದ್ರ ಎಂಬುವವರಿಗೆ ಸೇರಿದ ಮನೆ ಇದಾಗಿದ್ದು, ಸ್ಥಳಕ್ಕೆ ಕಂದಾಯ, ಗ್ರಾಪಂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮೈ ಮೇಲೆ ಬಿದ್ದ ಮರ !
ಕಳಸ ತಾಲೂಕಿನ ಸಂಪಿಖಾನ್ ಗ್ರಾಮದಲ್ಲಿ ಜಾನುವಾರುಗಳಿಗೆ ಹುಲ್ಲು ಕೊಯ್ಯುವಾಗ ಬೃಹತ್ ಮರ ಮೈಮೇಲೆ ಬಿದ್ದ ಪರಿಣಾಮ ಶಂಕರಗೌಡ ಎಂಬುವರಿಗೆ ಗಂಭೀರ ಗಾಯವಾಗಿದೆ. ಅವರನ್ನು ಕಳಸದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ನಂತರ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ರವಾನಿಸಲಾಗಿದೆ. ಬಾಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಕಾರಿನ ಮೇಲೆ ಬಿದ್ದ ಮರ !
ಕಾರಿನ ಮೇಲೆ ಮರ ಬಿದ್ದ ಪರಿಣಾಮ ಕಾರು ಫುಲ್ ಜಖಂಗೊಂಡ ಘಟನೆ ಮೂಡಿಗೆರೆ ತಾಲೂಕಿನ ದುರ್ಗದಹಳ್ಳಿ ಕಾಲಬೈರವೇಶ್ವರ ದೇವಸ್ಥಾನದ ಬಳಿ ನಡೆದಿದೆ.
ಬೆಂಗಳೂರು ಮೂಲದವರು ಬೆಂಡಾಜೆ ಬೆಟ್ಟಕ್ಕೆ ಟ್ರಕ್ಕಿಂಗ್ ಹೋಗಿದ್ದರು. ಆ ವೇಳೆ ಬೃಹತ್ ಗಾತ್ರದ ಮರ ಬಿದ್ದ ಪರಿಣಾಮ ಕಾರೊಂದು ಸಂಪೂರ್ಣ ಜಖಂ ಆಗಿದ್ದು, ಆದರೆ, ಅದೃಷ್ಟವಶಾತ್ ಕಾರಿನಲ್ಲಿ ಯಾರು ಇಲ್ಲದ ಕಾರಣ ಭಾರೀ ಅನಾಹುತ ತಪ್ಪಿದಂತಾಗಿದೆ. ಟ್ರಕ್ಕಿಂಗ್ ಹೋದವರಿಗೆ ಕಾರ್ ಮೇಲೆ ಮರ ಬಿದ್ದಿರೋದು ಗೊತ್ತೇ ಇಲ್ಲ. ಬಾಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇತ್ತ ಶಿವಮೊಗ್ಗ ಜಿಲ್ಲೆಯ ಹೊಸನಗರ, ತೀರ್ಥಹಳ್ಳಿ ಮತ್ತು ಸಾಗರ ತಾಲೂಕಿನಾದ್ಯಂತ ಬಿರುಗಾಳಿಯೊಂದಿಗೆ ಧಾರಾಕಾರವಾಗಿ ಮಳೆ ಬೀಳುತ್ತಿದೆ. ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ.