ಮಾಜಿ ಶಾಸಕ ಸಿ.ಟಿ.ರವಿ ಹೇಳಿಕೆಗೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜೇಗೌಡ ತಿರುಗೇಟು

0 0

ಚಿಕ್ಕಮಗಳೂರು : ಸಿದ್ದರಾಮಯ್ಯ ಮುಖ್ಯಮಂತ್ರಿ ಆದಾಗಲೆಲ್ಲಾ ಬರಗಾಲ ಬರುವುದು ಸತ್ಯ. ಹಿಂದಿನವರು ತಂದಿದ್ದ ಅನುದಾನಕ್ಕೆ ಈಗ ಗುದ್ದಲಿ ಪೂಜೆ ನಡೆಸುತ್ತಿದ್ದಾರೆ ಎಂದು ಮಾಜಿ ಶಾಸಕ ಸಿ.ಟಿ.ರವಿ ಹೇಳಿಕೆಯನ್ನು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಪಿ.ಮಂಜೇಗೌಡ ಖಂಡಿಸಿದ್ದಾರೆ.

ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿ, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ನೂರು ದಿನಗಳಲ್ಲಿ ಚುನಾವಣೆಗೂ ಮುಂಚೆ ಘೋಷಿಸಿದ್ದ 5 ಗ್ಯಾರಂಟಿಗಳಲ್ಲಿ ನಾಲ್ಕು ಗ್ಯಾರಂಟಿಗಳನ್ನು ಜಾರಿಗೊಳಿಸಿದ್ದು, ಉಳಿದ ಒಂದು ಗ್ಯಾರಂಟಿಯನ್ನು ಕೆಲವೇ ದಿನಗಳಲ್ಲಿ ಜಾರಿಯಾಗಲಿದೆ ಎಂದು ಹೇಳಿದ್ದಾರೆ.

ಮಾಜಿ ಶಾಸಕ ಸಿ.ಟಿ.ರವಿ ಸಮಾಜದ ಪರಿವರ್ತನೆಗಾಗಿ ರಾಜಕೀಯ ಪಕ್ಷವನ್ನು ಕಟ್ಟಿದ್ದೇವೆ ಎಂದು ಹೇಳಿದ್ದಾರೆ. ಆದರೆ ಅವರು ಪಕ್ಷ ಕಟ್ಟಿರುವುದು ಸಮಾಜ ಪರಿವರ್ತನೆಗಾಗಿ ಅಲ್ಲ ಬದಲಾಗಿ ಸಮಾಜವನ್ನು ಹೊಡೆಯಲು ಪಕ್ಷ ಕಟ್ಟಿದ್ದಾರೆ ಎಂದು ವ್ಯಂಗ್ಯ ಮಾಡಿದ್ದಾರೆ.

ಸಾಮಾನ್ಯ ಜನರು ಉಪಯೋಗಿಸುವ ದಿನಬಳಕೆಯ ವಸ್ತುಗಳ ಬೆಲೆಯನ್ನು ಏರಿಸಿದ್ದು, ಕೇಂದ್ರ ಸರ್ಕಾರ ಅದರ ಬಗ್ಗೆ ಚಕಾರವೆತ್ತದ ಮಾಜಿ ಶಾಸಕರು ಕೆಲವೇ ತಿಂಗಳುಗಳಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಅನಿಲ ಬೆಲೆಯನ್ನು 200 ರೂ. ಕಡಿತಗೊಳಿಸಿರುವುದನ್ನು ದೊಡ್ಡದಾಗಿ ಬಿಂಬಿಸಲಾಗುತ್ತಿದೆ ಎಂದು ಟೀಕಿಸಿದ್ದಾರೆ.

ಮಾಜಿ ಶಾಸಕರಿಗೆ ಜಿಲ್ಲೆಯ ಜನರ ಸಮಸ್ಯೆ ಬಗೆಹರಿಸಲು ಸಾಧ್ಯವಾಗಿಲ್ಲ. ಜನರನ್ನು ಎತ್ತಿ ಕಟ್ಟಿ ಕೋಮು ದ್ವೇಷವನ್ನು ಬಿತ್ತುವ ಕೆಲಸವನ್ನು ಮಾಜಿ ಶಾಸಕರು ಮಾಡುತ್ತಿದ್ದು, ಅಧಿಕಾರ ಕಳೆದುಕೊಂಡು ವಿಚಲಿತರಾಗಿದ್ದಾರೆ. ಕಾಂಗ್ರೆಸ್ ಎಲ್ಲಾ ವರ್ಗದ ಜನರನ್ನು ತನ್ನೊಂದಿಗೆ ಕರೆದುಕೊಂಡು ಹೋಗುತ್ತಿದೆ ಎಂದು ಹೇಳಿದ್ದಾರೆ.

ರಾಜ್ಯ ಮತ್ತು ದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಲ್ಲಿ ಭ್ರಷ್ಟಾಚಾರವನ್ನು ತುಂಬಿಕೊಂಡು ಬರುವುದರ ಜೊತೆಗೆ ರೈತರನ್ನು ಗುಂಡಿಕ್ಕಿ ಕೊಲ್ಲುವುದು ಮತ್ತು ಗುತ್ತಿಗೆದಾರರು ನೇಣು ಹಾಕಿಕೊಳ್ಳುವ ಸನ್ನಿವೇಶವನ್ನು ಬಿಜೆಪಿ ಸರ್ಕಾರ ಮಾಡುತ್ತಿದೆ ಎಂದು ತಿಳಿಸಿದ್ದಾರೆ.

ರಾಜ್ಯದ ಜನರು ದಡ್ಡರಲ್ಲ ಜನವಿರೋಧಿ ನೀತಿಯನ್ನು ಮನಗಂಡು ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ತಕ್ಕ ಪಾಠ ಕಲಿಸಿದ್ದು, ಮುಂದಿನ ದಿನಗಳಲ್ಲೂ ತಾಲ್ಲೂಕು, ಜಿಲ್ಲಾ ಪಂಚಾಯಿತಿ ಹಾಗೂ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ತಿಳಿಸಿದ್ದಾರೆ.

Leave A Reply

Your email address will not be published.

error: Content is protected !!