ಮೌಲ್ಯಗಳ ಪುನರುತ್ಥಾನಕ್ಕೆ ಮಹಾತ್ಮರ ಕೊಡುಗೆ ಅಪಾರ ; ಶ್ರೀ ರಂಭಾಪುರಿ ಜಗದ್ಗುರುಗಳು

0 0


ಚಿಕ್ಕಮಗಳೂರು : ಭಾರತೀಯ ಸಂಸ್ಕೃತಿಯಲ್ಲಿ ಆಧ್ಯಾತ್ಮ ಮತ್ತು ಧರ್ಮಕ್ಕೆ ವಿಶೇಷ ಮಹತ್ವವಿದೆ. ಧಾರ್ಮಿಕ ಮತ್ತು ಸಾಮಾಜಿಕ ಮೌಲ್ಯಗಳ ಪುನರುತ್ಥಾನಕ್ಕೆ ಶ್ರೀ ಜಗದ್ಗುರು ರೇಣುಕಾಚಾರ್ಯರ ಹಾಗೂ ಬಸವಣ್ಣನವರ ಕೊಡುಗೆ ಅಪಾರವಾದುದೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.


ಅವರು ಬುಧವಾರ ನಗರದ ಶ್ರೀ ಜಗದ್ಗುರು ರೇಣುಕಾಚಾರ್ಯ ಸಮುದಾಯ ಭವನದಲ್ಲಿ ಜರುಗಿದ ಶ್ರೀ ಜಗದ್ಗುರು ರೇಣುಕ-ಶ್ರೀ ಬಸವ ಜಯಂತ್ಯುತ್ಸವ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ಸುಖ ಶಾಂತಿಯ ಬದುಕಿಗೆ ಧರ್ಮಾಚರಣೆ ಮುಖ್ಯ. ಸಂಸ್ಕಾರದಿಂದ ಸಂಸ್ಕೃತಿ ಬೆಳೆಯಲು ಸಾಧ್ಯ. ಆರೋಗ್ಯ ಪೂರ್ಣ ಸಮಾಜ ನಿರ್ಮಾಣಕ್ಕೆ ಶ್ರೀ ಜಗದ್ಗುರು ರೇಣುಕಾಚಾರ್ಯರು ಮತ್ತು ಬಸವಣ್ಣನವರ ವಿಚಾರ ಧಾರೆಗಳು ಆಶಾಕಿರಣ. ಸತ್ಯ ಶುದ್ಧವಾದ ಜೀವನ ಮಾರ್ಗ ಅನುಸರಿಸಿ ಬಾಳುವಂತಾಗಲು ಶ್ರೀ ಗುರುವಿನ ಮಾರ್ಗದರ್ಶನ ಹಾಗೂ ಬೋಧಾಮೃತ ಅವಶ್ಯಕ. ವೀರಶೈವ ಧರ್ಮದಲ್ಲಿ ಜೀವ ಶಿವನಾಗುವ, ಅಂಗ ಲಿಂಗವಾಗುವ, ನರ ಹರನಾಗುವ, ಭವಿ ಭಕ್ತನಾಗುವ ಆದರ್ಶ ದಾರಿಯನ್ನು ತೋರಿದವರು ಶ್ರೀ ಜಗದ್ಗುರು ರೇಣುಕಾಚಾರ್ಯರು. ಇದೇ ದಾರಿಯಲ್ಲಿ ಬಸವಣ್ಣನವರು ಮುನ್ನಡೆದು ಸಕಲ ಜೀವಾತ್ಮರ ಒಳಿತಿಗಾಗಿ ಶ್ರಮಿಸಿದ್ದಾರೆ. ನೀರು ಎರೆಯ ಬಂದವರಿಗೂ ಕಡಿಯ ಬಂದವರಿಗೂ ಮರ ನೆರಳು ಹಣ್ಣು ಕೊಡುವಂತೆ ಮಹಾತ್ಮರು ನೋವು ನುಂಗಿ ಸಮಾಜಕ್ಕೆ ಬೆಳಕು ತೋರಿದರು. ಮನುಷ್ಯ ಜೀವನದಲ್ಲಿ ಯಾವ ವಿಶ್ವಾಸ ಹೋದರೂ ಚಿಂತಿಸಬೇಕಾಗಿಲ್ಲ. ಆದರೆ ಆತ್ಮ ವಿಶ್ವಾಸವನ್ನು ಕಳೆದುಕೊಳ್ಳಬಾರದು. ಶ್ರೀ ಜಗದ್ಗುರು ರೇಣುಕಾಚಾರ್ಯರ ತತ್ವ ಸಿದ್ಧಾಂತ ಬಸವಣ್ಣನವರ ಸಾಮಾಜಿಕ ನಿಲುವು ಸಮಾಜದ ಉನ್ನತಿಗೆ ಭದ್ರ ಬುನಾದಿಯಾಗಿದೆ ಎಂದು ಹರುಷ ವ್ಯಕ್ತಪಡಿಸಿದರು.


ಚಿಕ್ಕಮಗಳೂರು ಶಾಸಕರಾದ ಹೆಚ್.ಡಿ.ತಮ್ಮಯ್ಯ ಪೂಜಾ ಸಮಾರಂಭ ಉದ್ಘಾಟಿಸಿ ಧರ್ಮ ಪರಿಪಾಲನೆಯಿಂದ ಶಾಂತಿ ನೆಲೆಸಲು ಸಾಧ್ಯ. ಶ್ರೀ ಗುರುವಿನ ಕಾರುಣ್ಯದ ಬಲ ಭಕ್ತ ಸಮುದಾಯಕ್ಕೆ ಸಂಜೀವಿನಿ. ಶ್ರೀ ರಂಭಾಪುರಿ ಜಗದ್ಗುರುಗಳ ಆಶೀರ್ವಾದ ಶ್ರೀ ರಕ್ಷೆ ನಮ್ಮೆ ನಿಮ್ಮೆಲ್ಲರ ಮೇಲಿರಲೆಂದು ಬಯಸಿದರು.


ಸಮಾರಂಭದ ಅಧ್ಯಕ್ಷತೆಯನ್ನು ಹುಲಿಕೆರೆ ವಿರೂಪಾಕ್ಷಲಿಂಗ ಶಿವಾಚಾರ್ಯ ಸ್ವಾಮಿಗಳು ವಹಿಸಿ ಮಾತನಾಡಿದರು.
ಶಂಕರದೇವರಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು, ಬೇರುಗಂಡಿ ರೇಣುಕ ಮಹಂತ ಶಿವಾಚಾರ್ಯ ಸ್ವಾಮಿಗಳು ಪಾಲ್ಗೊಂಡು ಉಪದೇಶಾಮೃತವನ್ನಿತ್ತರು.
ವಿಶೇಷ ಆಹ್ವಾನಿತರಾಗಿ ಮಾಜಿ ವಿಧಾನ ಪರಿಷತ್ ಸದಸ್ಯೆ ಗಾಯತ್ರಿ ಶಾಂತೇಗೌಡ ಹಾಗೂ ನಗರ ವೀರಶೈವ ಸಮಾಜದ ಅಧ್ಯಕ್ಷ ಮಲ್ಲೇಗೌಡರು ಪಾಲ್ಗೊಂಡಿದ್ದರು. ಮಾಜಿ ಶಾಸಕ ಸಿ.ಟಿ. ರವಿ ಆಗಮಿಸಿ ಶ್ರೀ ರಂಭಾಪುರಿ ಜಗದ್ಗುರುಗಳ ದರ್ಶನಾಶೀರ್ವಾದ ಪಡೆದರು.


ಟ್ರಸ್ಟ್‌ನ ಸದಸ್ಯ ಬಿ.ಎ.ಶಿವಶಂಕರ ಪ್ರಾಸ್ತಾವಿಕ ಮಾತನಾಡಿದರು. ಟ್ರಸ್ಟಿನ ಸದಸ್ಯರಾದ ಎಂ.ಡಿ.ಪುಟ್ಟಸ್ವಾಮಿ, ಎಸ್.ಎಂ.ದೇವಣ್ಣಗೌಡ, ಹೆಚ್.ಎಸ್.ನಂಜೇಗೌಡ, ಜೆ.ಬಿ. ಶಿವಪ್ಪಗೌಡ ಉಪಸ್ಥಿತರಿದ್ದರು.


ಟ್ರಸ್ಟ್‌ನ ಖಜಾಂಚಿ ಯು.ಎಂ.ಬಸವರಾಜ ಸ್ವಾಗತಿಸಿದರು. ಟ್ರಸ್ಟಿನ ಸದಸ್ಯ ಬಿ.ಬಿ.ರೇಣುಕಾರ್ಯ ನಿರೂಪಿಸಿದರು.
ಸಮಾರಂಭಕ್ಕೂ ಮುನ್ನ ಶ್ರೀ ರಂಭಾಪುರಿ ಜಗದ್ಗುರುಗಳವರ ಇಷ್ಟಲಿಂಗ ಮಹಾಪೂಜೆ ಜರುಗಿತು. ಇದೇ ಸಂದರ್ಭದಲ್ಲಿ 15 ಜನ ವೀರಮಾಹೇಶ್ವರ ವಟುಗಳಿಗೆ ಶಿವದೀಕ್ಷಾ ಸಂಸ್ಕಾರ ನೆರವೇರಿತು.

Leave A Reply

Your email address will not be published.

error: Content is protected !!