ಸ್ವತಃ ತಾವೇ ಹಿಡಿದು ಬ್ಯಾಗ್‌ನಲ್ಲಿ ಇಟ್ಟಿದ್ದ ಹಾವು ಕಚ್ಚಿ ಉರಗ ತಜ್ಞ ಸಾವು !

0 70

ಚಿಕ್ಕಮಗಳೂರು : ಕಾಫಿನಾಡು ಚಿಕ್ಕಮಗಳೂರಿನಲ್ಲಿ ನೂರಾರು ಹಾವುಗಳನ್ನು ಹಿಡಿದು ಜನರಿಗೆ ಜಾಗೃತಿ ಮೂಡಿಸುತ್ತಿದ್ದ ಉರಗ ತಜ್ಞ ಸ್ನೇಕ್‌ ನರೇಶ್‌ ಅವರು ಸ್ವತಃ ತಾವೇ ಹಿಡಿದು ಬ್ಯಾಗ್‌ನಲ್ಲಿ ಇಟ್ಟಿದ್ದ ನಾಗರಹಾವು ಕಚ್ಚಿ ಸಾವನ್ನಪ್ಪಿದ್ದಾರೆ.

ಚಿಕ್ಕಮಗಳೂರಿನಲ್ಲಿ ಹಾವು ಕಚ್ಚಿ ಉರಗತಜ್ಞ ದುರಂತ ಸಾವನ್ನಪ್ಪಿದ್ದಾರೆ. ಸೆರೆ ಹಿಡಿದ ಹಾವಿನಿಂದಲೇ ಸಾವನ್ನಪ್ಪಿದ್ದಾರೆ. ಮೃತ ದುರ್ದೈವಿಯನ್ನು ಸ್ನೇಕ್ ನರೇಶ್ (51) ಎಂದು ಗುರುತಿಸಲಾಗಿದೆ.

ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಸ್ನೇಕ್ ನರೇಶ್ ಎಂದೇ ಖ್ಯಾತಿಯಾಗಿದ್ದರು. ಸಾವಿರಾರು ಹಾವುಗಳನ್ನ ಸೆರೆ ಹಿಡಿದು, ಕಾಡಿಗೆ ಬಿಟ್ಟು ಸಂರಕ್ಷಣೆ ಮಾಡಿದ್ದರು. ಇನ್ನು ಜಿಲ್ಲೆಯಾದ್ಯಂತ ಖ್ಯಾತಿ ಗಳಿಸಿದ್ದ ಹಿನ್ನೆಲೆಯಲ್ಲಿ 2013ರಲ್ಲಿ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿದ್ದರು. ಆದರೆ, ಸೋಲನುಭವಿಸಿದ್ದರು. ಇನ್ನು ಜಿಲ್ಲಾದ್ಯಂತ ಶಾಲಾ ಮಕ್ಕಳಿಗೆ ಹಾವಿಗಳ ಬಗ್ಗೆ ಜಾಗೃತಿ ಮೂಡಿಸುತ್ತಿದ್ದರು. ಆದರೆ, ಈಗ ತಾವು ಸಂರಕ್ಷಣೆ ಮಾಡಿ ಬ್ಯಾಗ್‌ನಲ್ಲಿಟ್ಟಿದ್ದ ನಾಗರಹಾವಿನಿಂದಲೇ ಕಚ್ಚಿಸಿಕೊಂಡು ಸಾವನ್ನಪ್ಪಿದ್ದಾರೆ.

ತಾವೇ ಹಿಡಿದ ಹಾವಿನಿಂದ ಕಚ್ಚಿ ಸಾವು:

ಕೆಲವು ದಿನಗಳ ಹಿಂದೆ ಚಿಕ್ಕಮಗಳೂರು ನಗರದ ಹೌಸಿಂಗ್ ಬೋರ್ಡ್ ನಲ್ಲಿ ಬೆಳಗ್ಗೆ ನಾಗರಹಾವು ಹಿಡಿದು ಸ್ಕೂಟಿಯಲ್ಲಿ ಇಟ್ಟಿದ್ದ ಸ್ನೇಕ್‌ ನರೇಶ್ ಅವರು, ಮತ್ತೊಂದು ಹಾವಿದೆ ಎಂದು ಹಿಡಿಯಲು ಹೊರಟ್ಟಿದ್ಧರು. ಈ ವೇಳೆ ಸ್ಕೂಟಿಯ ಸೀಟ್ ತೆಗೆದು ಹಾವಿದ್ದ ಚೀಲ ಸರಿಪಡಿಸಲು ಮುಂದಾದಾಗ ನಾಗರಹಾವು ನರೇಶ್‌ ಅವರ ಕೈಗೆ ಕಚ್ಚಿದೆ. ಇನ್ನು ಹಾವು ಕಚ್ಚಿದ ತಕ್ಷಣವೇ ಸ್ಥಳೀಯರು ನರೇಶ್‌ನನ್ನು ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಉರಗತಜ್ಞ ನರೇಶ್ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ವೃತ್ತಿಯಲ್ಲಿ ಟೈಲರ್, ಪ್ರವೃತ್ತಿಯಲ್ಲಿ ಹಾವು ಹಿಡಿಯವುದು:

ಮೂಲತಃ ವೃತ್ತಿಯಲ್ಲಿ ಟೈಲರ್ ಆಗಿ ಜೀವನ ನಡೆಸುತ್ತಿದ್ದ ಸ್ನೇಕ್ ನರೇಶ್, ಪ್ರವೃತ್ತಿಯಲ್ಲಿ ಹಾವು ಹಿಡಿಯುವುದನ್ನು ರೂಢಿಸಿಕೊಂಡಿದ್ದರು. ಕಾಫಿನಾಡಿನಲ್ಲಿ ಕಾಳಿಂಗ ಸೇರಿದಂತೆ ಸಾವಿರಾರು ಹಾವುಗಳನ್ನ ಸೆರೆಹಿಡಿದಿದ್ದ ನರೇಶ್ ಅವರ ಮನೆಯಿರುವ ಚಿಕ್ಕಮಗಳೂರು ನಗರದ ಹೊಸಮನೆ ಬಡಾವಣೆ ಸಮೀಪವೇ ಹಾವು ಕಚ್ಚಿದ ಘಟನೆ ನಡೆದಿದೆ.

ಕೆಲವು ದಿನಗಳಿಂದ ನರೇಶ್‌ಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುತ್ತಿದ್ದರೂ, ಹಾವಿನ ವಿಷ ದೇಹವನ್ನು ಸೇರಿದ್ದರಿಂದ ಚಿಕಿತ್ಸೆಗೆ ಸ್ಪಂದಿಸದೇ ಇಂದು ಮಧ್ಯಾಹ್ನ 2:30ರ ಸಮಯದಲ್ಲಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

Leave A Reply

Your email address will not be published.

error: Content is protected !!