ಚಿಕ್ಕಮಗಳೂರು: ರಾಗಿ ಬೆಳೆದಿದ್ದಂತ ರೈತ, ಬೆಂಬಲ ಬೆಲೆಯಡಿ ಖರೀದಿಗೆ ಬೆಲೆ ನಿಗದಿ ಮಾಡುವಂತೆ ಆ ಅಧಿಕಾರಿಯನ್ನು ಕೋರಿದ್ದರು. ಆದ್ರೇ ಬೆಂಬಲ ಬೆಲೆಯಡಿ ರಾಗಿ ಖರೀದಿಸಲು ಬೆಲೆ ನಿಗದಿ ಮಾಡಲು ಲಂಚಕ್ಕೆ ಬೇಡಿಕೆ ಇಟ್ಟು, ಈಗ ಸಹಾಯಕ ಮ್ಯಾನೇಜರ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಚಿಕ್ಕಮಗಳೂರಿನ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ಸಹಾಯ ವ್ಯವಸ್ಥಾಪಕಿ ಅನುಸೂಯಮ್ಮ ಎಂಬುವರಲ್ಲಿ ಮರ್ಲೆ ಗ್ರಾಮದ ತಿಮ್ಮನಹಳ್ಳಿಯ ಮಂಜುನಾಥ್ ಎನ್ನುವಂತ ರೈತ, ತನ್ನ ಪತ್ನಿ, ತಾಯಿಯ ಹೆಸರಿನಲ್ಲಿ 35 ಕ್ವಿಂಟಾಲ್ ರಾಗಿಯನ್ನು ಬೆಂಬಲ ಬೆಲೆ ಯೋಜನೆಯಡಿ ನೀಡಿದ್ದರು.
ರಾಗಿಗೆ ಸೂಕ್ತ ಬೆಂಬಲ ಬೆಲೆ ನೀಡುವಂತೆ ಅನೇಕ ಬಾರಿ ಕಚೇರಿಗೆ ಭೇಟಿಯಾಗಿದ್ದರು. ಈ ವೇಳೆ ಸಹಾಯಕ ವ್ಯವಸ್ಥಾಪಕಿ ಅನಸೂಯಮ್ಮ ಪ್ರತಿ ಚೀಲಕ್ಕೆ 30 ರೂ. ನಂತೆ 362 ಚೀಲಕ್ಕೆ ರೂ.9,050 ಲಂಚಕ್ಕೆ ಬೇಡಿಕೆ ಇಟ್ಟಿದ್ದರು.
ಈ ಹಿನ್ನಲೆಯಲ್ಲಿ ರೈತ ಮಂಜುನಾಥ್ ಮುಂಗಡವಾಗಿ ರೂ.4000 ಲಂಚ ನೀಡಿದ ಬಳಿಕ, ಬಾಕಿ ಲಂಚ ನೀಡಲಾಗದೇ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಇಂದು ಬಾಕಿ ಲಂಚದ ಹಣವನ್ನು ನೀಡುವ ವೇಳೆಯಲ್ಲಿ ಲೋಕಾಯುಕ್ತ ಡಿವೈಎಸ್ಪಿ ತಿರುಮಲೇಶ್, ಇನ್ಸ್‌ಪೆಕ್ಟರ್ ಮಲ್ಲಿಕಾರ್ಜನ್ ಹಾಗೂ ಅನಿಲ್ ರಾಥೋಡ್ ನೇತೃತ್ವದಲ್ಲಿ ದಾಳಿ ನಡೆಸಿ, ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ.