Chikkamagaluru | ದಿಢೀರ್ ಸ್ಥಗಿತಗೊಂಡ ಕಾಡಾನೆ ಸೆರೆ ಕಾರ್ಯಾಚರಣೆ !

0 461

ಚಿಕ್ಕಮಗಳೂರು: ಮೈಸೂರು ದಸರಾದಲ್ಲಿ (Mysore Dasara) 08 ಬಾರಿ ಅಂಬಾರಿ ಹೊತ್ತು ಇತಿಹಾಸ ಸೃಷ್ಟಿಸಿದ ಅರ್ಜುನ ಆನೆ (Arjuna Elephant) ಮೃತಪಟ್ಟ ಹಿನ್ನೆಲೆ ಕಾಫಿನಾಡಲ್ಲಿ ಕಾಡಾನೆ ಸೆರೆ ಕಾರ್ಯಾಚರಣೆ ದಿಢೀರ್ ಸ್ಥಗಿತಗೊಂಡಿದೆ.

ಮೈಸೂರು ದಸರಾದಲ್ಲಿ ಅಂಬಾರಿ ಹೊತ್ತು ನಾಡಿನ ಜನರ ಗಮನ ಸೆಳೆದಿದ್ದ ಅರ್ಜುನ ಆನೆ ಸಾವಿನಿಂದ ತೀವ್ರ ದುಃಖದಲ್ಲಿರುವ ಜಿಲ್ಲೆಯ ಮಾವುತರು ಹಾಗೂ ಕಾವಡಿಗರು ಕರ್ತವ್ಯಕ್ಕೆ ಗೈರಾಗಿರುವ ಹಿನ್ನೆಲೆಯಲ್ಲಿ ಮೂಡಿಗೆರೆಯ (Mudigere) ಕಾಡಾನೆ ಸೆರೆ ಕಾರ್ಯಾಚರಣೆ ಸ್ಥಗಿತವಾಗಿದೆ.

ಇದೇ ರೀತಿ ಕಾಡಾನೆ ಸೆರೆ ಕಾರ್ಯಚರಣೆ ವೇಳೆ ಅರ್ಜುನ ಸಾವಿನಿಂದ ಆತಂಕದಲ್ಲಿರುವ ಅರಣ್ಯ ಇಲಾಖೆ ಸಿಬ್ಬಂದಿಗಳು ಕೆಲಸಕ್ಕೆ ತೆರಳದೆ ತೀವ್ರ ಬೇಸರದಲ್ಲಿದ್ದಾರೆ. ಇದರಿಂದಾಗಿ ಮೂಡಿಗೆರೆ ತಾಲೂಕಿನ ಬೈರಾಪುರ ಬಳಿ ನಡೆಯುತ್ತಿದ್ದ ಕಾಡಾನೆ ಸೆರೆ ಕಾರ್ಯಚರಣೆ ದಿಢೀರ್ ನಿಂತು ಹೋಗಿದೆ.

ಕಾಡಾನೆ ಸೆರೆ ಕಾರ್ಯಚರಣೆಗಾಗಿ ಶಿಬಿರದಿಂದ ಬಂದಿದ್ದ 6 ಸಾಕಾನೆಗಳು ಸಹಾ ಮಾವುತರಿಲ್ಲದೆ ಇಂದು ತಮ್ಮ ಕರ್ತವ್ಯವನ್ನು ಮಾಡದಂತಾಗಿದೆ. 6 ಸಾಕಾನೆಗಳ ಬಳಸಿ ಕಾಡಾನೆ ಸೆರೆಗೆ ಚಿಕ್ಕಮಗಳೂರು ಅರಣ್ಯ ಇಲಾಖೆ ಮುಂದಾಗಿತ್ತು ಇದರಲ್ಲಿ ದಸರಾ ಗಜಪಡೆಯ ಮಹೇಂದ್ರ, ಗಜೇಂದ್ರ, ನೇತೃತ್ವ ವಹಿಸಿದ್ದವು.

ಮೂಡಿಗೆರೆ ಸುತ್ತಮುತ್ತ ತೀವ್ರ ಉಪಟಳ ನೀಡುತ್ತಿದ್ದ ಆನೆಗಳ ಹಾವಳಿಯಿಂದಾಗಿ ಬೈರಾಪುರದ ಬಳಿ 3 ಕಾಡಾನೆಗಳ ಸೆರೆಗಾಗಿ ಕಾರ್ಯಾಚರಣೆ ನಡೆಯುತ್ತಿದ್ದು ಅರ್ಜುನನ ಅಕಾಲಿಕ ಮರಣದಿಂದ ಸದ್ಯ ಎಲ್ಲಾ ಚಟುವಟಿಕೆಗಳು ಸ್ಥಗಿತಗೊಂಡಿದೆ.

ಉಪ ಅರಣ್ಯ ಸಂರಕ್ಷಣಾಧಿಕಾರಿ (ಡಿ.ಸಿ.ಎಫ್.) ರಮೇಶ್ ಬಾಬು ಮಾತನಾಡಿ ಮೂಡಿಗೆರೆ ಅರಣ್ಯ ವಲಯದಲ್ಲಿ ಕೈಗೊಂಡಿರುವ ಕಾಡಾನೆ ಸೆರೆ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ತಿಳಿಸಿದರು

ಸುದ್ದಿಗಾರರೊಂದಿಗೆ ಮಾತನಾಡಿ, ಕಾರ್ಯಾಚರಣೆ ವೇಳೆ ಕಾಡಾನೆಯೊಂದು ಸಾವನ್ನಪ್ಪಿದ್ದು ಮತ್ತು ಸಕಲೇಶಪುರ ಭಾಗದಲ್ಲಿ ಕಾರ್ಯಾಚರಣೆ ವೇಳೆ ದಸರಾ ಆನೆ ಅರ್ಜುನ ಮೃತಪಟ್ಟಿರುವ ಹಿನ್ನಲೆಯಲ್ಲಿ ಸದ್ಯಕ್ಕೆ ಆನೆ ಕಾರ್ಯಾಚರಣೆ ಸ್ಥಗಿತಗೊಳಿಸಬಹುದು ಎಂದು ಸಾರ್ವಜನಿಕ ವಲಯದಲ್ಲಿ ಚರ್ಚೆಗಳು ನಡೆಯುತ್ತಿದ್ದವು. ಈ ಬಗ್ಗೆ ಡಿ.ಸಿ.ಎಫ್. ಅವರು ಸ್ಪಷ್ಟನೆ ನೀಡಿದ್ದು ಈ ಘಟನೆಗಳ ಕಾರಣದಿಂದ ಎರಡು ದಿನಗಳ ಕಾಲ ಕಾರ್ಯಾಚರಣೆಗೆ ಬಿಡುವು ನೀಡಿದ್ದೆವು. ಇದೀಗ ಕಾರ್ಯಾಚರಣೆ ಎಂದಿನಂತೆ ಮುಂದುವರಿಯಲಿದೆ ಎಂದರು

ಮೇಕನಗದ್ದೆ ಸಮೀಪ ನಡೆದ ಕಾರ್ಯಾಚರಣೆಯಲ್ಲಿ ಕಾಡಾನೆ ಸಾವನ್ನಪ್ಪಿದ ಘಟನೆಯ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಡಿ.ಸಿ.ಎಫ್. ಕಾರ್ಯಾಚರಣೆಯಲ್ಲಿ ಯಾವುದೇ ಉದ್ದೇಶಪೂರ್ವಕ ತಪ್ಪುಗಳು ನಡೆದಿಲ್ಲ. ಮೃತ ಆನೆಯ ಮರಣೋತ್ತರ ಪರೀಕ್ಷೆ ವರದಿ ಬಂದ ನಂತರ ಆನೆ ಸಾವಿಗೆ ನಿಖರ ಕಾರಣ ತಿಳಿದುಬರಲಿದೆ ಎಂದಿದ್ದಾರೆ.

Leave A Reply

Your email address will not be published.

error: Content is protected !!