Heavy Rain | ಮಲೆನಾಡು ಭಾಗದಲ್ಲಿ ಅವಾಂತರ ಸೃಷ್ಟಿಸಿದ ಮುಂಗಾರು ಮಳೆ…!

0 0

ಚಿಕ್ಕಮಗಳೂರು : ಮಲೆನಾಡಿನಲ್ಲಿ ಗಾಳಿಯೊಂದಿಗೆ ಮುಂಗಾರು ಮಳೆ ಅಬ್ಬರ ಜೋರಾಗಿದ್ದು ಹಲವು ಕಡೆ ಅನಾಹುತಗಳು ಸಂಭವಿಸಿದ ಘಟನೆ ವರದಿಯಾಗಿದೆ.


ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ, ತರುವೆ, ಬಣಕಲ್, ಬಾಳೂರು, ದೇವರಮನೆ, ಗುತ್ತಿ, ಕುಂದೂರು, ಮತ್ತಿಕಟ್ಟೆ, ಜಾಣಿಗೆ ಸೇರಿದಂತೆ ಹಲವೆಡೆ ಬಿರುಗಾಳಿ ಸಹಿತ ಭಾರಿ ಮಳೆಯಾಗಿದ್ದು ಕೆಲವು ಕಡೆ ಮನೆಯ ಮೇಲೆ ಮರಗಳು ಉರುಳಿ ಬಿದ್ದು ಸಾಕಷ್ಟು ನಷ್ಟ ಸಂಭವಿಸಿದೆ, ಅಲ್ಲದೆ ಬಿರುಗಾಳಿಯ ಹೊಡೆತಕ್ಕೆ ವಿದ್ಯುತ್ ಕಂಬಗಳು ಧರಾಶಾಹಿಯಾಗಿದ್ದು ವಿದ್ಯುತ್ ತಂತಿಗಳು ನದಿಗೆ ಬಿದ್ದು ಸಾರ್ವಜನಿಕರ ಸಮಯ ಪ್ರಜ್ಞೆಯಿಂದ ಭಾರಿ ಅನಾಹುತ ತಪ್ಪಿದೆ.

ಭಾರಿ ಮಳೆಯಿಂದ ಜನ ಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಮೆಸ್ಕಾಂ ಸಿಬ್ಬಂದಿಗಳು ವಿದ್ಯುತ್ ಕಂಬಗಳನ್ನು ತೆರವುಗೊಳಿಸುವ ಕಾರ್ಯ ನಡೆಸುತ್ತಿದ್ದಾರೆ. ಹಲವು ಗ್ರಾಮೀಣ ಭಾಗಗಳಲ್ಲಿ ವಿದ್ಯುತ್ ಪೂರೈಕೆ ಸಂಪೂರ್ಣ ಸ್ಥಗಿತಗೊಂಡಿದೆ.

ಇನ್ನೊಂದೆಡೆ ಭಾರಿ ಗಾತ್ರದ ಮರವೊಂದು ಮನೆಯ ಮೇಲೆ ಬಿದ್ದ ಪರಿಣಾಮ ಅಡುಗೆ ಕೋಣೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬರು ಪ್ರಾಣಾಪಾಯದಿಂದ ಪಾರಾದ ಘಟನೆ ಕಳಸ ತಾಲೂಕಿನ ಹಿರೇಬೈಲ್ ನ ಇಡಕಣಿ ಗ್ರಾಮದಲ್ಲಿ ನಡೆದಿದೆ. ಘಟನೆಯಿಂದ ಮನೆಯಲ್ಲಿದ್ದ ದಿನಸಿ ಪದಾರ್ಥ, ಪಾತ್ರೆಗಳು ಸಂಪೂರ್ಣ ನಾಶವಾಗಿದೆ.

ಮಂಗಳವಾರ ರಾತ್ರಿ ಉಂಟಾದ ಗಾಳಿ, ಮಳೆಗೆ ಕೊಪ್ಪ ಪಟ್ಟಣದ ಬಸ್ ನಿಲ್ದಾಣದ ಆವರಣದಲ್ಲಿನ ಆಟೋ ನಿಲ್ದಾಣ ಬಳಿ ಇದ್ದ ಹೊಂಗೆ ಮರ ಉರುಳಿ ರಸ್ತೆಗೆ ಬಿದ್ದಿದೆ.

ಮಳೆ ಇಲ್ಲದೆ ಬತ್ತಿದ ಕೆರೆಗಳಲ್ಲಿ ನೀರು ಸಂಗ್ರಹವಾಗುತ್ತಿದೆ. ಹಳ್ಳಗಳಲ್ಲಿ ನೀರಿನ ಹರಿವಿನ ಪ್ರಮಾಣ ಸ್ವಲ್ಪ ಏರಿಕೆಯಾಗುತ್ತಿದೆ. ಅಡಿಕೆ ತೋಟಗಳಲ್ಲಿ ಬದುಗಳನ್ನು ಸ್ವಚ್ಚಗೊಳಿಸುವ ಕೆಲಸ ಭರದಿಂದ ನಡೆಯುತ್ತಿದೆ.

ಕೊಪ್ಪದಲ್ಲಿ 5.32 ಸೆಂ.ಮೀ, ಹರಿಹರಪುರದಲ್ಲಿ 5.1 ಸೆಂ.ಮೀ, ಜಯಪುರದಲ್ಲಿ 5.74 ಸೆಂ.ಮೀ, ಬಸರೀಕಟ್ಟೆಯಲ್ಲಿ 5.98 ಸೆಂ.ಮೀ, ಕಮ್ಮರಡಿಯಲ್ಲಿ 7.36 ಸೆಂ.ಮೀ. ಮಳೆ ದಾಖಲಾಗಿದೆ.

Leave A Reply

Your email address will not be published.

error: Content is protected !!