Karnataka Assembly Election 2023 | Chikkamagaluru | ಕರಪತ್ರ, ಬ್ಯಾನರ್, ಪೋಸ್ಟರ್ ಮುದ್ರಿಸಲು ಆರ್ ಒ ಅನುಮತಿ ಕಡ್ಡಾಯ ; ಡಿಸಿ

0 8


ಚಿಕ್ಕಮಗಳೂರು: ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ 2023 ರ ನೀತಿ ಸಂಹಿತೆ ಜಾರಿಯಾಗಿರುವ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳ ಮತ್ತು ರಾಜಕೀಯ ಅಭ್ಯರ್ಥಿಗಳ ಕರಪತ್ರ, ಪೋಸ್ಟರ್ ಮತ್ತು ಬ್ಯಾನರ್‌ಗಳನ್ನು ಮುದ್ರಿಸುವ ಮೊದಲ ಆಯಾ ವಿಧಾನಸಭಾ ಮತ ಕ್ಷೇತ್ರಗಳ ಚುನಾವಣಾಧಿಕಾರಿ (ಆರ್ ಒ) ರವರ ಅನುಮತಿ ಪಡೆಯುವುದು ಕಡ್ಡಾಯವಾಗಿರುತ್ತದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿ ಕೆ.ಎನ್. ರಮೇಶ್ ತಿಳಿಸಿದರು.


ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ನಡೆದ ಮುದ್ರಣ ಮಾಲೀಕರ ಸಭೆಯ ಮಾತನಾಡಿದ ಅವರು, ಯಾವುದೇ ರೀತಿಯ ಅಪಪ್ರಚಾರ, ಸುಳ್ಳು ಮಾಹಿತಿ, ಕೋಮು ಗಲಭೆ ಸೃಷ್ಠಿಸುವಂತಹ ಕರಪತ್ರ ಪೋಸ್ಟರ್ ಮತ್ತು ಬ್ಯಾನರ್‌ಗಳನ್ನು ಮುದ್ರಿಸಲು ಅವಕಾಶವಿರುವುದಿಲ್ಲ ಎಂದು ತಿಳಿಸಿದ ಅವರು, ಮುದ್ರಕರು ಪಾಂಪ್ಲೇಟ್‌ಗಳು ಮತ್ತು ಪೋಸ್ಟರ್‌ಗಳನ್ನು ಮುದ್ರಿಸುವ ಮೊದಲು ಪ್ರಕಾಶನದ ಗುರುತಿನ ಬಗ್ಗೆ ದೃಢೀಕರಣವನ್ನು ಇಬ್ಬರು ಅನುಮೋದಕರೊಂದಿಗೆ ಪಡೆದಿರಬೇಕು. ಗುರುತಿನ ದೃಢೀಕರಣವಿಲ್ಲದೇ ಮುದ್ರಣ ಮಾಡಬಾರದು. ತಾವು ಮುದ್ರಿಸುವ ಒಂದು ಪ್ರತಿಯ ಮಾಹಿತಿಯನ್ನು ನಿಗದಿತ ನಮೂನೆಯಲ್ಲಿ ಪ್ರಿಟಿಂಗ್ ಪ್ರೆಸ್ ಮಾಲೀಕರು ಆರ್ ಒಗಳಿಗೆ ಸಲ್ಲಿಸಬೇಕು. ಯಾವುದೇ ಜಾತ್ರೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳಿಗೆ ಮುದ್ರಣವಾಗುವ ಕರಪತ್ರಗಳಲ್ಲಿ ಅರ್ಭ್ಯರ್ಥಿಗಳ ಭಾವಚಿತ್ರ ಹಾಕಬಾರದು ಎಂದು ಸೂಚಿಸಿದರು.


ಪ್ರತಿ ಪುಟದ ಮುದ್ರಣಕ್ಕೆ ಈಗಾಗಲೇ ಹಣ ನಿಗದಿಪಡಿಸಲಾಗಿದೆ. ಕರಪತ್ರ, ಪೋಸ್ಟರ್, ಬ್ಯಾನರ್ ಮುಂಭಾಗದಲ್ಲಿ ಮುದ್ರಕರ ಹೆಸರು ಪ್ರಕಾಶಕರ ಹೆಸರು, ಮೊಬೈಲ್ ಸಂಖ್ಯೆ ಮತ್ತು ಮುದ್ರಣ ಪ್ರತಿಗಳ ಸಂಖ್ಯೆ ಕಡ್ಡಾಯವಾಗಿ ನಮೂದಿಸಬೇಕು ಎಂದು ತಿಳಿಸಿದರು.


ಭಾರತ ಚುನಾವಣಾ ಆಯೋಗದ ಮಾರ್ಗಸೂಚಿಯನುಸಾರ ನಿಯಮಗಳನ್ನು ಉಲ್ಲಂಘಿಸಿದ್ದಲ್ಲಿ ಪ್ರಜಾಪ್ರತಿನಿಧಿ ಕಾಯ್ದೆ ಅನ್ವಯ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ. ಚುನಾವಣೆ ಬಹಿಷ್ಕಾರದಂತಹ ಪೋಸ್ಟರ್, ಕರಪತ್ರ ಮತ್ತು ಬ್ಯಾನರ್ ಮುದ್ರಿಸುವುದು ಕಾಯ್ದೆಯ ಉಲ್ಲಂಘನೆಯಾಗುತ್ತದೆ ಎಂದು ಹೇಳಿದರು.


ಸಭೆಯಲ್ಲಿ ಮಾಧ್ಯಮ ಪ್ರಮಾಣೀಕರಣ ಮತ್ತು ಕಣ್ಗಾವಲು ಸಮಿತಿಯ ನೋಡಲ್ ಅಧಿಕಾರಿ ಶಿವಪ್ರಕಾಶ್ ಭಟ್ ಹಾಗೂ ಪ್ರಿಂಟಿಂಗ್ ಪ್ರೆಸ್ ಮಾಲೀಕರು ಹಾಜರಿದ್ದರು.

Leave A Reply

Your email address will not be published.

error: Content is protected !!