Crime News | ಕುಡಿದ ಮತ್ತಿನಲ್ಲಿ ಹೆತ್ತ ತಾಯಿಯನ್ನೇ ಹತ್ಯೆ ಮಾಡಿದ ಪಾಪಿ ಪುತ್ರ !
ಕಡೂರು : ಹೆತ್ತ ತಾಯಿಯನ್ನು ಮಗನೇ ಹತ್ಯೆ ಮಾಡಿರುವ ಘಟನೆ ತಾಲೂಕಿನ ಪಂಚನಹಳ್ಳಿ ಗ್ರಾಮದಲ್ಲಿ ಶನಿವಾರ ರಾತ್ರಿ ನಡೆದಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಪಂಚನಹಳ್ಳಿ ಗ್ರಾಮದ ಕಲ್ಲೇಶಪ್ಪ ಎಂಬಪವವರ ಪತ್ನಿ ಕಮಲಮ್ಮ (50) ಮಗನಿಂದಲೇ ಹತ್ಯೆಯಾದ ಮಹಿಳೆಯಾಗಿದ್ದು, ಕಲ್ಲೇಶಪ್ಪ, ಕಮಲಮ್ಮ ದಂಪತಿ ಮಗ ಸಂತೋಷ್ (30) ಆರೋಪಿಯಾಗಿದ್ದಾನೆ ಎಂದು ತಿಳಿದುಬಂದಿದೆ.
ಕಳೆದ ಶನಿವಾರ ರಾತ್ರಿ ಸಂತೋಷ್ ಕುಡಿದು ಮನೆಗೆ ಬಂದಿದ್ದು, ಇದನ್ನು ಪ್ರಶ್ನಿಸಿದ ತಾಯಿ ಕಮಲಮ್ಮ ಅವರೊಂದಿಗೆ ವಾಗ್ವಾದ ನಡೆಸಿ ಜಗಳವಾಡಿದ್ದಾನೆ. ತಾಯಿ, ಮಗನ ನಡುವೆ ಮಾತಿನ ಚಕಮಕಿ ನಡೆಯುತ್ತಿದ್ದ ವೇಳೆ ಕುಪಿತನಾದ ಸಂತೋಷ್ ದೊಣ್ಣೆಯೊಂದರಿಂದ ಕಮಲಮ್ಮ ಅವರ ತಲೆಗೆ ಹಲ್ಲೆ ಮಾಡಿದ್ದಾನೆ ಎಂದು ಹೇಳಲಾಗಿದೆ.

ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡ ಕಮಲಮ್ಮ ಸ್ಥಳದಲ್ಲೇ ಮೃತಪಟ್ಟಿದ್ದಾರೆಂದು ತಿಳಿದು ಬಂದಿದ್ದು, ಘಟನೆಯ ಸುದ್ದಿ ತಿಳಿದ ಕಡೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಹತ್ಯೆ ಮಾಡಿದ ಆರೋಪಿ ಸಂತೋಷ್‍ನನ್ನು ಬಂಧಿಸಿದ್ದಾರೆ.

ಸ್ಥಳಕ್ಕೆ ವಿಧಿ ವಿಜ್ಞಾನ ಹಾಗೂ ಎಫ್‍ಎಸ್‍ಎಲ್ ತಜ್ಞರ ತಂಡ ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದಾರೆ. ಭಾನುವಾರ ಬೆಳಗ್ಗೆ ಸ್ಥಳಕ್ಕೆ ಎಸ್ಪಿ ಡಾ.ವಿಕ್ರಮ್ ಆಮ್ಟೆ ಭೇಟಿ ನೀಡಿ ಪರಿಶೀಲಿಸಿದರು.