ಕಡೂರು: ಮೊಬೈಲ್ ಕಿತ್ತುಕೊಳ್ಳಲು ಬಂದ ವ್ಯಕ್ತಿಯನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಹತ್ಯೆ ಮಾಡಿದ ಆರೋಪಿಯನ್ನು ಕಡೂರು ಪೊಲೀಸರು ಗುರುವಾರ ಬಂಧಿಸಿದ್ದಾರೆ.
ಕಡೂರು ಪಟ್ಟಣ ಸಮೀಪದ ಮರವಂಜಿ ವೃತ್ತದ ಬಳಿ ಫೆ.14ರಂದು ರಾತ್ರಿ ಕೆಂಚಪ್ಪ ಎಂಬಾತ ಮಲ್ಲೇ ದೇವರಹಳ್ಳಿ ಗ್ರಾಮದ ಮೋಹನ್(60) ಎಂಬವರನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿ ಪರಾರಿಯಾಗಿದ್ದ, ಘಟನೆ ಸಂಬಂಧ ತನಿಖೆ ನಡೆಸಿದ ಪೊಲೀಸರು ಆರೋಪಿ ಕೆಂಚಪ್ಪನನ್ನು ಗುರುವಾರ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಫೆ.14ರ ರಾತ್ರಿ ಮೋಹನ್ ಮತ್ತು ಕೆಂಚಪ್ಪ ನಡುವೆ ಮೊಬೈಲ್ ವಿಚಾರಕ್ಕೆ ಗಲಾಟೆ ನಡೆದಿದೆ. ಈ ವೇಳೆ ಮೋಹನ್ ಕೆಂಚಪ್ಪ ಅವರ ಮೊಬೈಲ್ ಕಿತ್ತುಕೊಳ್ಳಲು ಮುಂದಾಗಿದ್ದಾನೆ. ಇದರಿಂದ ಕೋಪಗೊಂಡ ಕೆಂಚಪ್ಪ ಅಲ್ಲೇ ಇದ್ದ ಸಿಮೆಂಟ್ ಇಟ್ಟಿಗೆಯಲ್ಲಿ ಮೋಹನ್ ಮೇಲೆ ಹಲ್ಲೆ ಮಾಡಿದ್ದಾನೆ. ಹಲ್ಲೆಯಿಂದ ತೀವ್ರ ಅಸ್ವಸ್ಥನಾದ ಮೋಹನ್ ಸ್ಥಳದಲ್ಲೇ ಕುಸಿದು ಬಿದ್ದಿದ್ದು, ಇಷ್ಟಕ್ಕೆ ಸುಮ್ಮನಾಗದ ಕೆಂಚಪ್ಪ ಇಟ್ಟಿಗೆಯಿಂದ ಮೋಹನ್ ತಲೆಗೆ ಮನಬಂದಂತೆ ಜಜ್ಜಿದ್ದಾರೆ. ಹಲ್ಲೆಯಿಂದಾಗಿ ಮೋಹನ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಘಟನೆ ಬಳಿಕ ಕೆಂಚಪ್ಪ ತಲೆಮರೆಸಿಕೊಂಡಿದ್ದ ಎಂದು ತಿಳಿದುಬಂದಿದೆ. ಈ ಸಂಬಂಧ ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕಾರ್ಯಪ್ರವೃತ್ತರಾದ ಪೊಲೀಸರು ಆರೋಪಿ ಕೆಂಚಪ್ಪ ಅವರನ್ನು ಬಂಧಿಸಿದ್ದಾರೆ.