ಪರೀಕ್ಷೆಯಲ್ಲಿ ಫೇಲ್ ಆಗಿದಕ್ಕೆ ವಿದ್ಯಾರ್ಥಿನಿ ಆತ್ಮಹತ್ಯೆ ; ಗೆಳತಿಯ ಸಾವಿನ ವಿಷಯ ತಿಳಿದು ವಿಷ ಸೇವಿಸಿದ ಆಕೆಯ ಸ್ನೇಹಿತೆ !
ಕಳಸ: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅನುತ್ತೀರ್ಣವಾಗಿದ್ದಕ್ಕೆ ಮನನೊಂದು ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆಗೆ ಶರಣಾಗಿದ್ದು, ತನ್ನ ಗೆಳತಿಯ ಸಾವಿನ ಸುದ್ದಿ ತಿಳಿದು ಅನುತ್ತೀರ್ಣಳಾಗಿದ್ದ ಮತ್ತೋರ್ವ ವಿದ್ಯಾರ್ಥಿನಿಯು ವಿಷ ಸೇವಿಸಿ ಸಾವು ಬದುಕಿನ ನಡುವೆ ಹೋರಾಡುತ್ತಿರುವ ಘಟನೆ ತಾಲೂಕಿನಲ್ಲಿ ಬುಧವಾರ ನಡೆದಿದೆ.
ಕಳಸ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದ ಸಮೀಪದ ಎಸ್.ಕೆ. ಮೇಗಲ್ ಗ್ರಾಮದ ಚಂದ್ರರಾಜಯ್ಯ ಎಂಬುವವರ ಪುತ್ರಿ ಸ್ಪರ್ಶ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಅದೇ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದ ಜಾಂಬ್ಳೆ ಗ್ರಾಮದ ಸವಿತಾ ಎಂಬುವವರ ಪುತ್ರಿ ದೀಕ್ಷಿತಾ (18), ಸ್ಪರ್ಶ ಸಾವಿನ ಸುದ್ದಿ ಕೇಳಿ, ಆತ್ಮಹತ್ಯೆಗೆ ಯತ್ನಿಸಿದ್ದು, ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಜೀವಶಾಸ್ತ್ರ ವಿಭಾಗದಲ್ಲಿ ಅನುತ್ತೀರ್ಣಗಳಾಗಿದ್ದ ಸ್ಪರ್ಶ ಏ.21 ರಂದು ಮನೆಯಲ್ಲಿ ವಿಷ ಸೇವಿಸಿ ತನ್ನ ತಂದೆಗೆ ತಿಳಿಸಿದ್ದಳು. ಅಸ್ವಸ್ಥಗೊಂಡಿದ್ದ ವಿದ್ಯಾರ್ಥಿನಿಯನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಬುಧವಾರ ಬೆಳಿಗ್ಗೆ ಮೃತಪಟ್ಟಿದ್ದಾಳೆ. ಗೆಳತಿ ಸ್ಪರ್ಶ ಸಾವಿನ ಸುದ್ದಿ ತಿಳಿದು ದೀಕ್ಷಿತ ಮನೆಯಲ್ಲಿದ್ದ ಕಳೆನಾಶಕ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾಳೆ.
ದೀಕ್ಷಿತಾ ಸಹ ಅನುತ್ತೀರ್ಣಳಾಗಿದ್ದು ಮರುಪರೀಕ್ಷೆಗೆ ಕಟ್ಟಿಬಂದಿದ್ದಳು ಎಂದು ತಿಳಿದು ಬಂದಿದೆ. ಆದರೆ ಬುಧವಾರ ಮಧ್ಯಾಹ್ನ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ವಿಷ ಸೇವಿಸಿದ್ದು ತೀವ್ರ ಅಸ್ವಸ್ಥಳಾಗಿದ್ದು, ವಿಷಯ ತಿಳಿದ ಪೋಷಕರು ಮಂಗಳೂರಿನ ಆಸ್ಪತ್ರೆಗೆ ರವಾನಿಸಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.