ಅರಣ್ಯ ಪ್ರದೇಶದಲ್ಲಿ ನಾಪತ್ತೆಯಾಗಿದ್ದ ಟ್ರೆಕ್ಕಿಂಗ್‌ಗೆ ತೆರಳಿದ್ದ ವ್ಯಕ್ತಿ ಪತ್ತೆ ; ಹೇಗಿತ್ತು ರೋಚಕ ಕಾರ್ಯಾಚರಣೆ ?

0 0

ಮೂಡಿಗೆರೆ: ಚಾರ್ಮಾಡಿ ಘಾಟ್ ಅರಣ್ಯ ಪ್ರದೇಶದಲ್ಲಿ ಟ್ರೆಕ್ಕಿಂಗ್‌ಗೆ ತೆರಳಿ ನಾಪತ್ತೆಯಾಗಿದ್ದ ವ್ಯಕ್ತಿಯನ್ನು ಪತ್ತೆ ಹಚ್ಚಲಾಗಿದೆ.

ನಿನ್ನೆ ಸಂಜೆ ರಾಣಿಝರಿ ಫಾಲ್ಸ್‌ಗೆ ತೆರಳಿ ಅಲ್ಲಿಂದ ಟ್ರೆಕ್ಕಿಂಗ್‌ಗೆ ಹೋಗಿದ್ದ ಈ ವ್ಯಕ್ತಿ ಬೆಂಗಳೂರಿನವನು. ಬೆಂಗಳೂರಿನ ಜೆ.ಪಿ ನಗರದ ಪರೋಸ್ ಅಗರ್‌ವಾಲ್ ಎಂಬಾತನೇ ಈ ವ್ಯಕ್ತಿ. ಮೂಡಿಗೆರೆ ತಾಲೂಕಿನಲ್ಲಿರುವ ರಾಣಿಝರಿ ಫಾಲ್ಸ್‌ನ ಆಸುಪಾಸು ದಟ್ಟವಾದ ಅರಣ್ಯವಿದ್ದು, ಇಲ್ಲಿ ದಾರಿ ತಿಳಿಯದವರು ಚಾರಣ ಹೋಗಿ ಸಂಕಷ್ಟಕ್ಕೆ ಸಿಲುಕಿದ ಹಲವು ಪ್ರಕರಣಗಳು ನಡೆದಿವೆ.

ನಿನ್ನೆ ರಾತ್ರಿಯಿಂದ ನಾಪತ್ತೆಯಾಗಿದ್ದ ವ್ಯಕ್ತಿಯ ಶೋಧಕ್ಕೆ ಸ್ಥಳೀಯರು ಹಾಗೂ ಪೊಲೀಸರು ತಂಡ ರಚಿಸಿ ಮುಂದಾಗಿದ್ದರು. ಬೆಳ್ತಂಗಡಿ ವ್ಯಾಪ್ತಿಯ ಬಾಳೂರು ಕಾಡಿನಲ್ಲಿ ಪೊಲೀಸರು ಹಾಗೂ ಬೆಳ್ತಂಗಡಿಯ ಅರಣ್ಯ ಇಲಾಖೆ ಸಿಬ್ಬಂದಿ, ಸ್ಥಳೀಯರಿಂದ ಶೋಧ ಕಾರ್ಯ ನಡೆದ ಸಂದರ್ಭದಲ್ಲಿ ಈತ ಪತ್ತೆಯಾಗಿದ್ದಾನೆ. ಪತ್ತೆಯಾದ ಪರೋಸ್ ಅಗರ್‌ವಾಲ್‌ನನ್ನು ಬಾಳೂರು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಕೆಲವು ವರ್ಷಗಳ ಹಿಂದೆ ಶಿರಾಡಿ ಘಾಟಿಯ ಕೆಂಪುಹೊಳೆ ಪ್ರದೇಶದಲ್ಲಿ ಚಾರಣಕ್ಕೆ ತೆರಳಿ ಅಡವಿಪಾಲಾಗಿದ್ದ ಮೂವರು ಬಳಿಕ ಶವವಾಗಿ ಪತ್ತೆಯಾಗಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

ಕಾರ್ಯಾಚರಣೆ ಹೇಗಿತ್ತು ?

ರಾಣಿಝರಿ ಫಾಲ್ಸ್ ಕಡೆಯಿಂದ ಬಂಡಾಜೆ ಎರ್ಮಾಯಿ ಫಾಲ್ಸ್ ಅರಣ್ಯದ ಕಡೆಗೆ ಇಳಿದು, ರಾತ್ರಿಯಾಗುತ್ತಿದ್ದಂತೆ ಹಸಿವಿನಿಂದ ನಿತ್ರಾಣಕ್ಕೊಳಗಾಗಿ ದಾರಿ ಕಾಣದೆ ಅರಣ್ಯದಲ್ಲಿ ಬಾಕಿಯಾಗಿದ್ದ ಟೆಕ್ಕಿ. ದಾರಿ ಕಾಣದೆ ಬೆಂಗಳೂರಿನ‌ ಸಹೋದ್ಯೋಗಳಿಗೆ ತಾನಿರುವ ಲೊಕೇಶನ್ ಕಳಿಸಿದ್ದ. ಅವರು ಪೊಲೀಸ್ ಕಂಟ್ರೋಲ್ ರೂಂ ಗೆ ಮಾಹಿತಿ ನೀಡಿದ್ದಲ್ಲದೆ ಆ ಸಂದೇಶವನ್ನು ಬೆಂಗಳೂರಿನ ಗ್ರೂಪಿನಲ್ಲಿ‌ ಹಂಚಿಕೊಂಡಿದ್ದರು. ಅದು ಸಂಜೆ ವೇಳೆಗೆ ಚಾರ್ಮಾಡಿಯ ಹೊಟೇಲ್ ಹನೀಫ್ ಅವರಿಗೆ ಗೊತ್ತಾಗಿ ಅವರು ಚಾರ್ಮಾಡಿಯ ಗ್ರೂಪಿಗೆ ಹಾಕಿದ್ದರು. ಇದನ್ನು ‌ನೋಡಿದ ಸಿನಾನ್ ಚಾರ್ಮಾಡಿ ಅವರು ಬಾಳೂರು ಪೊಲೀಸರು ಹಾಗೂ ಬೆಳ್ತಂಗಡಿಯ ಅರಣ್ಯ ಇಲಾಖೆಯವರ ಸಹಕಾರದೊಂದಿಗೆ ಚಾರ್ಮಾಡಿ ವ್ಯಾಪ್ತಿಯ ಸ್ಥಳೀಯರಾದ ಮುಬಶ್ಶಿರ್, ಕಾಜೂರಿನ ಎರ್ಮಾಲ್‌ಪಲ್ಕೆ,ಅಶ್ರಫ್, ಕಾಜೂರಿನ ಶಂಸು, ನಾಸೀರ್ ಇವರ ತಂಡ ಸೇರಿ ಹುಡುಕಾಟ ಕಾರ್ಯಾಚರಣೆ ನಡೆಸಿದರು.

ಇತ್ತ ಸುಧೀರ್ ವಳಂಬ್ರ, ಜನಾರ್ದನ, ಪೊಲೀಸ್ ಇಲಾಖೆಯ ಶಶಿಧರ, ಆಸಿಫ್ ಸೋಮಂತಡ್ಕ, ಜೀವರಕ್ಷಕ ಆಂಬುಲೆನ್ಸ್ ಚಾಲಕ ಜಲೀಲ್ ಬಾಬಾ ಇವರುಗಳು ಸೇರಿ ಪತ್ತೆಗೆ ಸಾಥ್ ಕೊಟ್ಟಿದ್ದಾರೆ.

ರಾತ್ರಿಯಿಡೀ ಕಾರ್ಯಾಚರಣೆ:

ಸಿನಾನ್ ಚಾರ್ಮಾಡಿ ನೇತೃತ್ವದ ಒಂದು ತಂಡ ಮತ್ತು ಜಲೀಲ್, ಶಶಿಧರ ಅವರ ನೇತೃತ್ವದ ಎರಡು ತಂಡಗಳಾಗಿ ಪತ್ತೆ ಕಾರ್ಯಾಚರಣೆ ನಡೆದಿದೆ. ಸಂಜೆ 5 ಗಂಟೆಗೆ ಹೊರಟ ತಂಡ 12 ಗಂಟೆ ರಾತ್ರಿಗೆ ದಟ್ಟ ಅರಣ್ಯದಲ್ಲಿ ಆತ ನನ್ನು ಪತ್ತೆ ಹಚ್ಚಿದೆ. ಆವರಿಸಿದ ಕತ್ತಲೆ, ಜಾರುವ ಬಂಡೆಕಲ್ಲುಗಳ ಅಪಾಯಕಾರಿ ಇಳಿಜಾರು ಪ್ರದೇಶ, ಇಂಬಳಗಳ ತೀವ್ರ ಕಾಟ. ಇದರ ಮಧ್ಯೆ ಮರಗಳ ಮೇಲೆ ಹತ್ತಿಕೊಂಡು ಸಾಹಸಮಯವಾಗಿ ತಂಡ ಅಲ್ಲಿ ತಲುಪುವಷ್ಟರಲ್ಲಿ ಟೆಕ್ಕಿ ಹಸಿವು ಮತ್ತು ಭಯದಿಂದ ತತ್ತರಿಸಿ ತೀವ್ರ ಬಸವಳಿದು ಹೋಗಿದ್ದ. ಬಿಸ್ಕೆಟ್ ಮತ್ತು ಪಾನೀಯ ಕುಡಿಸಿ ಸ್ವಲ್ಪ ಸುಧಾರಿಸಿಕೊಂಡು ಅಲ್ಲಿಂದ ಆತನನ್ನು ಹೊತ್ತುಕೊಂಡು ಬೆಳಗ್ಗೆ 4.30 ರ ವೇಳೆಗೆ ಕಾಜೂರಿಗೆ ಕರೆತರಲಾಯಿತು. ತಂಡಕ್ಕೆ ಅಲ್ಲಿ ಊಟದ ವ್ಯವಸ್ಥೆ ಮಾಡಲಾಗಿತ್ತು. ಅಷ್ಟರಲ್ಲಿ ಎಲ್ಲರೂ ದೈಹಿಕವಾಗಿ ಸೋತುಹೋಗಿದ್ದರು.

ಟೆಕ್ಕಿ ಸಿಲುಕಿಕೊಂಡಿದ್ದ‌ ಪ್ರದೇಶ‌ದಲ್ಲಿ ಸಮರ್ಪಕ ನೆಟ್‌ವರ್ಕ್ ಕೂಡ ಇರಲಿಲ್ಲ. ಆಗಾಗ ಅಲ್ಪ ಸ್ವಲ್ಪ ಸಂಪರ್ಕ ಬಳಸಿ ಕೊನೆಗೂ ಆತನನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

ಎದುರಿಗೆ ಸಿಕ್ಕ ಕಾಡಾನೆಯಿಂದ ತಂಡ ಪಾರು:

ಟೆಕ್ಕಿಯನ್ನು ಸುರಕ್ಷಿತವಾಗಿ ಕರೆತರುವ ಮಧ್ಯೆ ಕಡಿರುದ್ಯಾವರ, ಮಿತ್ತಬಾಗಿಲು ಗ್ರಾಮದ ವ್ಯಾಪ್ತಿಗೆ ಬರುತ್ತಿದ್ದಂತೆ ಬೆಳಗ್ಗಿನ ಜಾವ 4 ಗಂಟೆಗೆ ಕಾಡಾನೆಯೊಂದು ತಂಡಕ್ಕೆ ಎದುರಾಯಿತು. ತಂಡದಲ್ಲಿದ್ದ ಜನಾರ್ದನ ಅವರಿಗೆ ಪೂರ್ವ ಮಾಹಿತಿ ಇದ್ದುದರಿಂದ ಸಂಭಾವ್ಯ ಅಪಾಯ ತಪ್ಪದೆ. ಇಳಿಜಾರಿಗೆ ಇಳಿದು ಆನೆಯಿಂದ ರಕ್ಷಿಸಿಕೊಂಡೆವು ಎಂದು ತಂಡದಲ್ಲಿದ್ದ ಜಲೀಲ್ ಪ್ರತಿಕ್ರಿಯಿಸಿದ್ದಾರೆ.

ಆಂಬುಲೆನ್ಸ್ ಮೂಲಕ ಬಾಳುಪೇಟೆ ಠಾಣೆಗೆ ರವಾನೆ:

ಪತ್ತೆಯಾದ ಚಾರಣಿಗ ಟೆಕ್ಕಿಯನ್ನು ಜಲೀಲ್ ಅವರು ತಂಗಿದ್ದ ರೆಸಾರ್ಟ್‌ ನಲ್ಲಿ ಉಪಚರಿಸಿದ ಬಳಿಕ ಆಂಬುಲೆನ್ಸ್ ಮೂಲಕ ಬಾಳುಪೇಟೆ ಠಾಣೆಗೆ ಕರೆದೊಯ್ಯಲಾಯಿತು. ಒಬ್ಬಂಟಿಯಾಗಿ ಚಾರಣಕ್ಕೆ ಬಂದಿದ್ದ ಟೆಕ್ಕಿ ಬೆಳಗ್ಗೆ ತಿಂಡಿ ತಿಂದು ಕಾಡಿನ ಕಡೆಗೆ ಬಂದಿದ್ದ. ಕೆಳಗೆ ಇಳಿದವನಿಗೆ ಮತ್ತೆ ಮೇಲೆ ಹೋಗಲು ದಾರಿ ಗೊತ್ತಾಗಿರಲಿಲ್ಲ ಸಂಜೆಯಾಗುತ್ತಿದ್ದಂತೆಯೇ ಹಸಿವಿನಿಂದ ಬಳಲಿ ದಾರಿ ಕಾಣದೆ ತೊರೆಯ ನೀರು ಸೇವಿಸಿದ್ದ ಎಂದು ತಿಳಿದು ಬಂದಿದೆ.

Leave A Reply

Your email address will not be published.

error: Content is protected !!