ಕೊಲೆ ಮಾಡಿ ಪ್ರವಾಸಿ ತಾಣದ ಬಳಿ ಶವ ಎಸೆದು ಹೋಗಿದ್ದ ಆರೋಪಿಗಳು ಅಂದರ್…!!

0 1

ಮೂಡಿಗೆರೆ : ಯುವಕನೋರ್ವನನ್ನು ಕೊಲೆ ಮಾಡಿ ತಾಲ್ಲೂಕಿನ ಪ್ರಸಿದ್ಧ ಪ್ರವಾಸಿ ತಾಣ ದೇವರಮನೆ ಸಮೀಪ ಶವವನ್ನು ಎಸೆದು ಹೋಗಿದ್ದ ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.


ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಮೂಲದ ಮಹಮ್ಮದ್ ಸಾವದ್ ಎಂಬ ಯುವಕನ ಕೊಲೆಗೆ ಸಂಬಂಧಿಸಿದಂತೆ ಬಂಟ್ವಾಳ ಮೂಲದ ರಿಜ್ವಾನ್ ಮತ್ತು ಝೈನುಲ್ಲಾ ಎಂಬುವವರನ್ನು ಬಂಧಿಸಲಾಗಿದೆ.

ಗಾಂಜಾ ವ್ಯವಹಾರದಲ್ಲಿ ಕೊಲೆ :
ಪೊಲೀಸರ ಪ್ರಾಥಮಿಕ ತನಿಖೆಯಿಂದ ಈ ಕೊಲೆ ಮಾದಕವಸ್ತು ಗಾಂಜಾ ವ್ಯವಹಾರಕ್ಕೆ ಸಂಬಂಧಿಸಿದಂತೆ ಉಂಟಾದ ಗಲಾಟೆಯಿಂದ ಸಂಭವಿಸಿದೆ ಎಂದು ತಿಳಿದುಬಂದಿದೆ. ಪಡುಬಿದ್ರೆಯ ಬೆಂಗ್ರೇ ಎಂಬಲ್ಲಿ ಸಾವದ್ ನನ್ನು ಕೊಲೆ ಮಾಡಿ ಹೆಣವನ್ನು ತಂದು ದೇವರಮನೆ ಗುಡ್ಡದಲ್ಲಿ ಎಸೆದು ಹೋಗಿದ್ದರು ಎಂದು ತಿಳಿದುಬಂದಿದೆ.

ಪ್ರಕರಣದ ತನಿಖೆ ಕೈಗೊಂಡಿದ್ದ ಮೂಡಿಗೆರೆ ವೃತ್ತ ನಿರೀಕ್ಷಕ ಸೋಮಶೇಖರ್ ಮತ್ತು ಬಣಕಲ್ ಎಸ್.ಐ. ಜಂಜೂರಾಜ್ ಮಹಾಜನ್ ನೇತೃತ್ವದ ಪೊಲೀಸ್ ತಂಡ ನಿನ್ನೆ ಆರೋಪಿಗಳನ್ನು ದಕ್ಷಿಣ ಕನ್ನಡ ಜಿಲ್ಲೆಯ ಗುರುವಾಯನಕೆರೆ ಎಂಬಲ್ಲಿ ಬಂಧಿಸಿ ಇಂದು ಮೂಡಿಗೆರೆ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಇನ್ನೂ ಮೂವರು ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರ ಸೆರೆಗೆ ಪೊಲೀಸರು ಬಲೆ ಬೀಸಿದ್ದಾರೆ.

ಜೂನ್ 8 ರಂದು ದೇವರಮನೆ ಸಮೀಪ ರಸ್ತೆಯಂಚಿನಲ್ಲಿ ಕೊಳೆತ ಸ್ಥಿತಿಯಲ್ಲಿ ಅಪರಿಚಿತ ಶವ ಪತ್ತೆಯಾಗಿತ್ತು. ಆ ಶವ ತಮ್ಮ ಮಗನದೆಂದು ಬಂಟ್ವಾಳ ಮೂಲದ ಕುಟುಂಬ ಗುರುತಿಸಿತ್ತು.

ಕೊಲೆಗೀಡಾದ ಸಾವದ್ ಮಾದಕವಸ್ತು ವ್ಯಸನಿಯಾಗಿದ್ದ ಮತ್ತು ಮಾದಕವಸ್ತು ಮಾರಾಟ ದಂಧೆಯಲ್ಲಿ ತೊಡಗಿಸಿಕೊಂಡಿದ್ದ ಎಂದು ತಿಳಿದು ಬಂದಿತ್ತು. ಕೊನೆಗೆ ಆತ ತನ್ನ ಮಾದಕವಸ್ತು ಮಾರಾಟದ ಗ್ಯಾಂಗ್ ನಿಂದಲೇ ಕೊಲೆಗೀಡಾಗಿದ್ದಾನೆ.

ಪ್ರಕರಣವನ್ನು ಶೀಘ್ರವಾಗಿ ಭೇದಿಸಿ ಆರೋಪಿಗಳನ್ನು ಬಂಧಿಸಿದ ಪೊಲೀಸರ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Leave A Reply

Your email address will not be published.

error: Content is protected !!