ನಿರ್ಜನ ಪ್ರದೇಶದಲ್ಲಿ ಕೊಳೆತ ಸ್ಥಿತಿಯಲ್ಲಿ ಯುವಕನ ಶವ ಪತ್ತೆ ! ಕೊಲೆ ಶಂಕೆ

0 0

ಮೂಡಿಗೆರೆ : ಯುವಕನ ಮೃತದೇಹವು ಮೂಡಿಗೆರೆಯ ಚಾರ್ಮಾಡಿ ಘಾಟ್ ಸಮೀಪದ ಪ್ರಸಿದ್ಧ ಪ್ರವಾಸಿ ತಾಣ ದೇವರಮನೆ ರಸ್ತೆ ತಿರುವು ಬಳಿಯ ನಿರ್ಜನ ಪ್ರದೇಶದಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾದ ಮೃತದೇಹವನ್ನು ಬಂಟ್ವಾಳ ತಾಲೂಕಿನ ಇರಾ ಗ್ರಾಮದ ಕುಕ್ಕಾಜೆ – ಕಾಫಿಕಾಡ್ ನಿವಾಸಿ ದಿ ಅಬ್ಬಾಸ್ ಎಂಬವರ ಪುತ್ರ ಸವಾದ್ (35) ಎಂದು ಗುರುತಿಸಲಾಗಿದೆ.

ಘಟನಾ ಸ್ಥಳಕ್ಕೆ ಬಣಕಲ್ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತ ಶರೀರವನ್ನು ಮರಣೋತ್ತರ ಪರೀಕ್ಷೆಗೆ ಚಿಕ್ಕಮಗಳೂರು ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿದೆ.

ಮಾದಕ ವ್ಯಸನಿ ತಂಡದಿಂದ ಕೊಲೆ ಶಂಕೆ

ಮೃತ ಸವಾದ್ 10 ದಿನಗಳಿಂದ ಕಾಣೆಯಾಗಿದ್ದು, ಮೊಬೈಲ್ ಸಂಪರ್ಕಕ್ಕೂ ಸಿಗುತ್ತಿರಲಿಲ್ಲ. ಈ ಹಿಂದೆ ಕೂಡಾ ಈತ ಇದೇ ತರಹ ಸಂಪರ್ಕಕ್ಕೆ ಸಿಗದೆ ಕೆಲವು ದಿನಗಳ ಬಳಿಕ ಮನೆಗೆ ಬರುತ್ತಿದ್ದ ಎನ್ನಲಾಗಿದ್ದು, ಮನೆಯವರು ಈ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ. ಈತನ ಅಣ್ಣನಿಗೆ ಸವಾದ್ ನ ಕೊಲೆಯಾಗಿರುವ ಬಗ್ಗೆ ವ್ಯಕ್ತಿಯೋರ್ವ ಮಾಹಿತಿ ನೀಡಿದ್ದು, ಮಾಹಿತಿ ಆಧರಿಸಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಮೃತ ಶರೀರದ ಗುರುತು ಪತ್ತೆ ಹಚ್ಚಿದ್ದಾರೆ.

ಮೃತ ದೇಹದ ಗುರುತು ಸಿಗದ ರೀತಿಯಲ್ಲಿ ಮುಖಕ್ಕೆ ಬೆಂಕಿ ಹಚ್ಚಿ ಸುಟ್ಟು ಹಾಕಲಾಗಿದ್ದು, ಮಾದಕ ವ್ಯಸನಿಗಳ ತಂಡ ಈ ಕೃತ್ಯ ಎಸಗಿದ್ದಾರೆ ಎಂದು ದೂರಲಾಗಿದೆ.

ಹಂತಕರು ಕಾವಳಕಟ್ಟೆ – ವಗ್ಗ ಮೂಲದ ಪೆಡ್ಲರ್ ತಂಡದವರು ಎಂಬ ಬಗ್ಗೆ ಪೊಲೀಸರಿಗೆ ಈಗಾಗಲೇ ಮಾಹಿತಿ ಲಭ್ಯವಾಗಿದೆ ಎನ್ನಲಾಗಿದ್ದು, ಶೋಧಕಾರ್ಯ ಮುಂದುವರೆದಿದೆ.

Leave A Reply

Your email address will not be published.

error: Content is protected !!