ಮಾವನ ಮನೆಗೆ ಮಾಟ ಮಾಡಿದ ಅಳಿಯ !

0 29

ಮೂಡಿಗೆರೆ : ಪತಿಯೊಂದಿಗೆ ಜಗಳವಾಡಿಕೊಂಡು ಪತ್ನಿ ತವರು ಮನೆ ಸೇರಿದ್ದು, ಇದರಿಂದ ಸಿಟ್ಟುಗೊಂಡ ಪತಿ ಪತ್ನಿಯ ತವರು ಮನೆಗೆ ಮಾಟ ಮಾಡಿಸಿರುವ ವಿಚಿತ್ರಕಾರಿ ಘಟನೆ ತಾಲೂಕಿನ ಮತ್ತಿಕಟ್ಟೆ ಗ್ರಾಮದಲ್ಲಿ ನಡೆದಿದೆ.

ಮೂಡಿಗೆರೆ ತಾಲೂಕಿನ ಮರಗಣಸೆ ಗ್ರಾಮದ ಗುರುಮೂರ್ತಿ ಕಳೆದ 12 ವರ್ಷಗಳ ಹಿಂದೆ ಸುಮಿತ್ರ ಎಂಬುವರನ್ನು ಮದುವೆಯಾಗಿದ್ದರೂ ಮದುವೆಯಾದ ದಿನದಿಂದ ಗಂಡ ಹೆಂಡತಿ ನಡುವೆ ಜಗಳ ನಡೆಯುತ್ತಿತ್ತು. ಹಿರಿಯರು ಅನೇಕ ಬಾರಿ ರಾಜೀ ಪಂಚಾಯಿತಿ ಮಾಡಿದ್ದರು.

ಕಳೆದ ಒಂದು ತಿಂಗಳ ಹಿಂದೆ ಗಂಡ- ಹೆಂಡತಿ ಮಧ್ಯೆ ಮತ್ತೆ ಜಗಳವಾದ ಕಾರಣ ಸುಮಿತ್ರ ಅಣ್ಣನ ಮನೆ ಸೇರಿದ್ದಳು. ಇದರಿಂದ ಕೋಪಗೊಂಡ ಪತಿ ಗುರುಮೂರ್ತಿ ಸೋಮವಾರ ಬೆಳಗಿನ ಜಾವ 4 ಗಂಟೆಗೆ ಸುಮಿತ್ರ ಅವರ ಅಣ್ಣ ಸತೀಶ್ ಮನೆಗೆ ಬಂದು ನನ್ನ ಹೆಂಡತಿಯನ್ನು ಕರೆದುಕೊಂಡು ಬಂದಿದ್ದೀಯಾ. ನಿನ್ನನ್ನು ಬಿಡುವುದಿಲ್ಲ ಎಂದು ಚಾಕು ತೋರಿಸಿ ಕೊಲೆ ಬೆದರಿಕೆ ಹಾಕಿದ್ದನು. ಸತೀಶ್ ಕಿಟಕಿ ತೆಗೆದು ನೋಡಿದಾಗ ಗುರುಮೂರ್ತಿಯ ಕೂಗಾಟ ಕಾಣಿಸುತ್ತಿತ್ತು. ಕೂಡಲೇ ಸತೀಶ್ ಬಾಗಿಲು ತೆಗೆದು ಹೊರ ಬಂದಾಗ ಗುರುಮೂರ್ತಿ ಅಲ್ಲಿಂದ ಹೋಗಿದ್ದನು.

ಮತ್ತೆ ಬೆಳಗಿನ ಜಾವ 6 ಗಂಟೆಗೆ ಮನೆಯಿಂದ ಹೊರ ಬಂದಾಗ ಮನೆ ಮುಂದೆ ಯಾವುದೋ ಪ್ರಾಣಿಯ ರಕ್ತ ಚೆಲ್ಲಿ ವಾಮಾಚಾರ ಮಾಡಿರುವುದು ಕಂಡು ಬಂದಿದೆ. ಗುರುಮೂರ್ತಿ ತೋರಿಸಿದ್ದ ಚಾಕುವನ್ನೂ ಅಲ್ಲೆ ಬಿಸಾಡಿ ಹೋಗಿದ್ದನು.

ಮನೆಗೆ ವಾಮಾಚಾರ ಮಾಡಿಸಿ, ಕೊಲೆ ಬೆದರಿಕೆ ಹಾಕಿರುವ ತಂಗಿಯ ಗಂಡ ಗುರುಮೂರ್ತಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸತೀಶ್ ಬಣಕಲ್ ಠಾಣೆಗೆ ದೂರು ನೀಡಿದ್ದಾರೆ. ದೂರು ಸ್ವೀಕರಿಸಿಕೊಂಡ ಪೊಲೀಸರು ಆರೋಪಿ ಗುರುಮೂರ್ತಿಯನ್ನು ಬಂಧಿಸಿದ್ದಾರೆ.

Leave A Reply

Your email address will not be published.

error: Content is protected !!