ಮೂಡಿಗೆರೆ : ತಾಲೂಕಿನ ಬಣಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನೈತಿಕ ಪೊಲೀಸ್ ಗಿರಿ ಘಟನೆ ನಡೆದಿದೆ. ಬಿಜೆಪಿ, ಭಜರಂಗದಳದ ಹಿಂದೂ ಕಾರ್ಯಕರ್ತ ಅಜಿತ್ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ.
ಮುಸ್ಲಿಂ ಯುವತಿಯ ಜೊತೆ ಸ್ನೇಹ ಬೆಳೆಸಿದ ಹಿನ್ನೆಲೆ 30 ಜನ ಮುಸ್ಲಿಂ ಯುವಕರ ಗುಂಪು ಹಲ್ಲೆ ಮಾಡಿದೆ. ಯುವತಿಯ ಜೊತೆ ರಸ್ತೆಯಲ್ಲಿ ಹೋಗುವಾಗ 30 ಯುವಕರ ಗುಂಪು ಹಿಂದೂ ಕಾರ್ಯಕರ್ತನ ಮೇಲೆ ದಾಳಿ ಮಾಡಿ ಹಿಗ್ಗಾಮುಗ್ಗ ಹಲ್ಲೆ ನಡೆಸಿದ್ದಾರೆ. ಗಾಯಗೊಂಡ ಅಜಿತ್ ಮೂಡಿಗೆರೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಈ ಬಗ್ಗೆ ಅನ್ಯಕೋಮಿನ ಯುವತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ರಾಜ್ಯದಲ್ಲಿ ಇನ್ಮುಂದೆ ನೈತಿಕ ಪೊಲೀಸ್ಗಿರಿಗೆ ಅವಕಾಶ ಇಲ್ಲ, ಹೀಗೆ ಮಾಡುವವರ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇತ್ತೀಚೆಗೆ ಪೊಲೀಸ್ ಇಲಾಖೆಗೆ ಖಡಕ್ ಸೂಚನೆ ನೀಡಿದ್ದರು. ಬಳಿಕ ಅಧಿಕಾರಿಗಳು ಕೂಡ ನೈತಿಕ ಪೊಲೀಸ್ ಗಿರಿ ನಡೆಸುವವರಿಗೆ ಖಡಕ್ ವಾರ್ನಿಂಗ್ ಕೊಟ್ಟಿದ್ದರು. ಇದಾದ ಬೆನ್ನಲ್ಲೆ ಚಿಕ್ಕಬಳ್ಳಾಪುರ ನಗರದ ಗೋಪಿಕಾ ಚಾಟ್ಸ್ ಬಳಿ ಹಿಂದೂ ಯುವಕನ ಜೊತೆ ಮುಸ್ಲಿಂ ಯುವತಿ ಹೋಟೆಲ್‌ಗೆ ಹೋಗಿದಕ್ಕೆ ಮುಸ್ಲಿಂ ಯುವಕರ ಗುಂಪು ನೈತಿಕ ಪೊಲೀಸ್ ಗಿರಿ ನಡೆಸಿತ್ತು. ಈಗ ಇದೇ ರೀತಿಯ ಮತ್ತೊಂದು ಘಟನೆ ನಡೆದಿದೆ. ಸಿಎಂ ಸಿದ್ದರಾಮಯ್ಯ ವಾರ್ನಿಂಗ್ ಕೊಟ್ಟ ದಿನದಿಂದ ಇದು ಎರಡನೇ ಘಟನೆಯಾಗಿದೆ.