8 ಚೆಕ್ ಬೌನ್ಸ್ ಪ್ರಕರಣ ; ಮೂಡಿಗೆರೆ ಬಿಜೆಪಿ ಶಾಸಕ ಎಂ.ಪಿ ಕುಮಾರಸ್ವಾಮಿಗೆ 4 ವರ್ಷ ಜೈಲು ಶಿಕ್ಷೆ ವಿಧಿಸಿದ ಕೋರ್ಟ್‌ !

0 45

ಮೂಡಿಗೆರೆ : ಬಿಜೆಪಿ ಶಾಸಕ ಎಂ.ಪಿ.ಕುಮಾರಸ್ವಾಮಿಗೆ ಸಂಕಷ್ಟ ಎದುರಾಗಿದ್ದು, ಚೆಕ್‌ ಬೌನ್ಸ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್‌ನಿಂದ 4 ವರ್ಷ ಶಿಕ್ಷೆ ವಿಧಿಸಲಾಗಿದೆ.

ಏನಿದು ಪ್ರಕರಣ ?

ಮೂಡಿಗೆರೆ ಶಾಸಕ ಎಂ.ಪಿ. ಕುಮಾರಸ್ವಾಮಿ ಅವರು ಹೂವಪ್ಪ ಗೌಡ ಎಂಬವರಿಂದ ಸಾಲ ಪಡೆದಿದ್ದು ಅದರ ಮರುಪಾವತಿಗಾಗಿ ಕೊಟ್ಟಿರುವ ಎಂಟು ಚೆಕ್‌ಗಳು ಬೌನ್ಸ್‌ ಆಗಿದ್ದವು. ಹೂವಪ್ಪ ಗೌಡ ಅವರು ಇದರ ವಿರುದ್ಧ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದರು.

ಹೂವಪ್ಪ ಗೌಡರಿಂದ ಪಡೆದ ಸಾಲದಲ್ಲಿ ಒಟ್ಟು 1,38,65,000 ರೂ.ಸಾಲ‌ ಬಾಕಿ ಇತ್ತು. ಇದಕ್ಕೆ ಪ್ರತಿಯಾಗಿ ಸಾಲದ ಕಂತುಗಳೆಂಬಂತೆ ಕುಮಾರಸ್ವಾಮಿ ಅವರು ಎಂಟು ಚೆಕ್‌ಗಳನ್ನು ನೀಡಿದ್ದರು. ಆದರೆ, ಅವೆಲ್ಲವೂ ಬೌನ್ಸ್‌ ಆಗಿದ್ದವು.

ಈ ಎಂಟು ಚೆಕ್ ಬೌನ್ಸ್ ಪ್ರಕರಣಗಳ ವಿಚಾರಣೆ ನಡೆಸಿದ ಜನಪ್ರತಿನಿಧಿ ನ್ಯಾಯಾಲಯದ ನ್ಯಾಯಾಧೀಶರಾದ ನ್ಯಾ. ಜೆ. ಪ್ರೀತ್ ಅವರು ತಲಾ ಆರು ತಿಂಗಳಂತೆ 4 ವರ್ಷ ಜೈಲು ಶಿಕ್ಷೆ ವಿಧಿಸಿದ್ದಾರೆ.

ಮೇಲ್ಮನವಿಗೆ ಅವಕಾಶ :
ಈ ನಡುವೆ ಈ ತೀರ್ಪಿನ ಬಗ್ಗೆ ಮೇಲ್ಮನವಿ ಸಲ್ಲಿಸಲು ಅವಕಾಶ ನೀಡಬೇಕು ಎಂದು ಎಂ.ಪಿ. ಕುಮಾರಸ್ವಾಮಿ ಅವರ ಪರ ವಕೀಲರು ಮನವಿ ಮಾಡಿದ್ದಾರೆ. ಆಗ ಪ್ರತಿಸ್ಪಂದಿಸಿದ ನ್ಯಾಯಾಧೀಶರು ಹತ್ತು ದಿನಗಳ ಕಾಲಾವಕಾಶ ನೀಡಿದ್ದಾರೆ. ಈ ಕಾಲಾವಧಿಯಲ್ಲಿ ಹಣ ಪಾವತಿ ಮಾಡದೆ ಇದ್ದಲ್ಲಿ ಜೈಲು ಕಾಯಂ ಎಂದು ಹೇಳಲಾಗಿದೆ.

Leave A Reply

Your email address will not be published.

error: Content is protected !!