ಅಧಿಕಾರದ ಅಂತಸ್ತು ಬೆಳೆದಂತೆ ನೀತಿಯ ಅಂತಸ್ತು ಬೆಳೆಯಬೇಕು
; ಶ್ರೀ ರಂಭಾಪುರಿ ಜಗದ್ಗುರುಗಳು

0 0

ಎನ್.ಆರ್.ಪುರ: ಮನುಷ್ಯ ಜೀವನದಲ್ಲಿ ಸುಖ ಸಮೃದ್ಧಿಗಳು ಬೆಳೆದಂತೆ ಸತ್ಕೃತಿ ಸಂಸ್ಸೃತಿಗಳು ಬೆಳೆಯಬೇಕು. ವಿದ್ಯಾ ಬುದ್ಧಿ ಬೆಳೆದಂತೆ ಹೃದಯ ವಿಕಾಸಗೊಳ್ಳಬೇಕು. ಅಧಿಕಾರದ ಅಂತಸ್ತು ಏರಿದಂತೆ ನೀತಿಯ ಅಂತಸ್ತು ಬೆಳೆಯುವ ಅವಶ್ಯಕತೆಯಿದೆ ಎಂದು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.


ಅವರು ಶ್ರಾವಣ 3ನೇ ಸೋಮವಾರ ಶ್ರೀ ಜಗದ್ಗುರು ರಂಭಾಪುರಿ ಪೀಠದಲ್ಲಿ ಜರುಗಿದ ಶ್ರೀ ಜಗದ್ಗುರು ರೇಣುಕ ವಿಜಯ ಪುರಾಣ ಪ್ರವಚನ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ಮನುಷ್ಯ ತನ್ನ ಜೀವನವನ್ನು ಸ್ವರ್ಗ ಮತ್ತು ನರಕ ಮಾಡಿಕೊಳ್ಳಲು ಅವನ ಮನಸ್ಸೇ ಮೂಲ ಕಾರಣ. ಮನಸ್ಸು ದುರ್ಬಲ ಮಾಡಿಕೊಳ್ಳದೇ ಛಲದಿಂದ ಸಮತೋಲನದಲ್ಲಿ ಹೆಜ್ಜೆ ಹಾಕಬೇಕಾಗುತ್ತದೆ. ಮನುಷ್ಯ ಜೀವನದಲ್ಲಿ ಹಲವಾರು ಸಮಸ್ಯೆ ಸವಾಲುಗಳನ್ನು ಎದುರಿಸಿ ಬಾಳಬೇಕಾಗುತ್ತದೆ. ಆತ್ಮ ಬಲ, ಗುರು ಕಾರುಣ್ಯ ಮತ್ತು ನಿರಂತರ ಸಾಧನೆಯಿಂದ ಜೀವನದಲ್ಲಿ ಶ್ರೇಯಸ್ಸು ಕಾಣಲು ಸಾಧ್ಯವಾಗುತ್ತದೆ. ಯಾವುದೇ ಧರ್ಮದ ರಹಸ್ಯ ಅಡಗಿರುವುದು ತತ್ವ ಸಿದ್ಧಾಂತಗಳಲ್ಲಿ ಅಲ್ಲ. ಅದರಲ್ಲಿರುವ ವಿಚಾರಗಳನ್ನು ತಿಳಿದು ಅದರಂತೆ ನಡೆದಾಗಲೇ ಜೀವನ ಉನ್ನತಿಗೇರಲು ಸಾಧ್ಯವಾಗುತ್ತದೆ. ಶ್ರೀ ಜಗದ್ಗುರು ರೇಣುಕಾಚಾರ್ಯರು ಮೌಲ್ಯಾಧಾರಿತ ತತ್ವ ಸಿದ್ಧಾಂತಗಳನ್ನು ಬೋಧಿಸುವುದರ ಮೂಲಕ ಬದುಕಿಗೆ ನೆಮ್ಮದಿ ಮತ್ತು ಬಲ ತಂದು ಕೊಟ್ಟಿದ್ದಾರೆ. ಅವರ ಧಾರ್ಮಿಕ ಮತ್ತು ಸಾಮಾಜಿಕ ಚಿಂತನಗಳು ಬದುಕಿ ಬಾಳುವ ಜನಾಂಗಕ್ಕೆ ದಾರಿ ದೀಪ ಎಂದರು.


ಪುರಾಣ ಪ್ರವಚನ ಮಾಡಿದ ಮಾದನ ಹಿಪ್ಪರಗಿ ಹಿರೇಮಠದ ಶಾಂತವೀರ ಶಿವಾಚಾರ್ಯ ಸ್ವಾಮಿಗಳು ಜೀವನ ಶ್ರೇಯಸ್ಸಿಗೆ ಧರ್ಮವೇ ಮೂಲ. ಅರಿವು ಆದರ್ಶಗಳ ದಾರಿಯಲ್ಲಿ ಮುನ್ನಡೆಯಲು ಗುರು ಕಾರುಣ್ಯ ಅವಶ್ಯಕ. ಶಿವ ಪಥವನರಿಯಲು ಮೊದಲು ಗುರು ಪಥ ಬಹಳ ಮುಖ್ಯ. ಶ್ರೀ ಜಗದ್ಗುರು ರೇಣುಕಾಚಾರ್ಯರ ಜನ ಹಿತಾತ್ಮಕ ಸಾಧನೆ ಬೋಧನೆಗಳು ಉಜ್ವಲ ಬದುಕಿಗೆ ಕಾರಣವಾಗಿವೆ ಎಂದರು.


ಶ್ರಾವಣ ಪವಿತ್ರ ಧರ್ಮ ಸಮಾರಂಭದಲ್ಲಿ ಚನ್ನಗಿರಿ ಹಿರೇಮಠದ ಕೇದಾರ ಶಿವಶಾಂತವೀರ ಶಿವಾಚಾರ್ಯರು, ಕೂಡ್ಲಿಗಿ ತಾಲೂಕ ಅಲೂರು ಹಿರೇಮಠದ ಸಿದ್ಧಲಿಂಗ ಸ್ವಾಮಿಗಳು, ಉಟಗಿ ಶಿವಪ್ರಸಾದ ದೇವರು, ರೇವತ್‌ಗಾವ್ ವಿಶ್ವನಾಥ ದೇವರು, ಬಬಲಾದಿ ದಾನಯ್ಯ ದೇವರು ಪಾಲ್ಗೊಂಡು ನುಡಿನಮನ ಸಲ್ಲಿಸಿದರು.


ಲಕ್ಷ್ಮೇಶ್ವರದ ಆನಂದ ಗಡ್ಡದ್ದೇವರಮಠ, ವಿರೂಪಾಕ್ಷಯ್ಯ ಅಗಡಿ, ಬಸವಕಲ್ಯಾಣದ ಪ್ರೊ.ದಯಾನಂದ ಶೀಲವಂತರ, ಬೀದರ ಮಂಜುನಾಥ, ಬೀರೂರು ಗಂಗಾಧರ, ಸೊರಬ ತಾಲೂಕಿನ ಸದ್ಭಕ್ತ ಮಂಡಳಿ ಮೊದಲ್ಗೊಂಡು ಹಲವಾರು ಗಣ್ಯರು ಪಾಲ್ಗೊಂಡು ಶ್ರೀ ರಂಭಾಪುರಿ ಜಗದ್ಗುರುಗಳಿಂದ ಗುರುರಕ್ಷೆ ಸ್ವೀಕರಿಸಿದರು.
ಶ್ರೀ ಜಗದ್ಗುರು ರೇಣುಕಾಚಾರ್ಯ ಗುರಕುಲ ಸಾಧಕರಿಂದ ವೇದಘೋಷ, ಗಂಗಾಧರ ಹಿರೇಮಠ ಇವರಿಂದ ಭಕ್ತಿ ಗೀತೆ ಜರುಗಿತು. ಶಿಕ್ಷಕ ವೀರೇಶ ಕುಲಕರ್ಣಿ ನಿರೂಪಿಸಿದರು.


ಪ್ರಾತಃಕಾಲ ಲೋಕ ಕಲ್ಯಾಣಕ್ಕಾಗಿ ಶ್ರೀ ರಂಭಾಪುರಿ ಜಗದ್ಗುರುಗಳು ಇಷ್ಟಲಿಂಗ ಮಹಾಪೂಜಾ ನೆರವೇರಿಸಿ ಭಕ್ತ ಸಮುದಾಯಕ್ಕೆ ಶುಭ ಹಾರೈಸಿದರು. ಶ್ರೀ ಪೀಠದ ಎಲ್ಲ ದೈವಗಳಿಗೆ ವಿಶೇಷ ಪೂಜೆ ಹಾಗೂ ಹೂವಿನ ಅಲಂಕಾರ ನಡೆಯಿತು.

Leave A Reply

Your email address will not be published.

error: Content is protected !!