ಗುರು ಕರುಣೆಯಿಲ್ಲದೇ ಆತ್ಮ ಸಾಕ್ಷಾತ್ಕಾರವಾಗದು ; ರಂಭಾಪುರಿ ಶ್ರೀಗಳು
ಎನ್.ಆರ್.ಪುರ : ಸಕಲ ಜೀವ ರಾಶಿಗಳಿಗೆ ಒಳಿತನ್ನೇ ಬಯಸುವ ಶ್ರೀ ಗುರು ಕರುಣಾಸಾಗರ. ಆಧ್ಯಾತ್ಮ ಲೋಕದಲ್ಲಿ ಗುರುವಿಗೆ ಅಗ್ರ ಸ್ಥಾನವಿದೆ. ಗುರು ಕರುಣೆಯಿಲ್ಲದೇ ಶಿಷ್ಯನಿಗೆ ಆತ್ಮ ಸಾಕ್ಷಾತ್ಕಾರವಾಗುವುದಿಲ್ಲ ಎಂದು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ಸೋಮವಾರ ಶ್ರೀ ರಂಭಾಪುರಿ ಪೀಠದಲ್ಲಿ ಗುರು ಪೂರ್ಣಿಮಾ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ಸಂಪತ್ತು ಅಂತಸ್ತು ತಂದು ಕೊಡಬಹುದು. ವಿದ್ಯೆ ಅರಿವು ನೀಡಬಹುದು. ಆದರೆ ಶ್ರೀ ಗುರು ಭವ ಬಂಧನದಿಂದ ಜೀವಾತ್ಮರನ್ನು ಮುಕ್ತಗೊಳಿಸುತ್ತಾನೆ. ಬದುಕು ಒಳಿತು ಕೆಡಕುಗಳ ಸಂಮಿಶ್ರಣ. ತುಳಿದು ಬದುಕುವುದಕ್ಕಿಂತ ತಿಳಿದು ಬದುಕುವುದು ಶ್ರೇಯಸ್ಕರ. ಜ್ಞಾನ ಭಾಸ್ಕರನಾದ ಶ್ರೀ ಗುರುವಿನಿಂದ ಜನ್ಮ ಜನ್ಮಾಂತರಗಳ ಪಾಪಗಳು ದೂರವಾಗಿ ಪರಿಶುದ್ಧಾತ್ಮರನ್ನಾಗಿ ಮಾಡುತ್ತಾನೆ. ಪರಶಿವನ ಸಾಕಾರ ರೂಪ ಗುರು ಎಂದು ಶಾಸ್ತç ಹೇಳುತ್ತದೆ. ಗುರು ಶಿಷ್ಯರ ಸಂಬಂಧ ಅಮೋಘವಾದುದು. ಗುರು ಪೂರ್ಣಿಮೆಯ ದಿನ ಪ್ರತಿಯೊಬ್ಬರೂ ಗುರು ದರ್ಶನ ಮಾಡಿ ಪುಣ್ಯ ಜೀವಿಗಳಾಗುತ್ತಾರೆ. ನಾಡಿನ ನಾನಾ ಭಾಗಗಳಿಂದ ಹೆಚ್ಚು ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿದ್ದು ಅವರಲ್ಲಿರುವ ಧರ್ಮನಿಷ್ಠೆ ಮತ್ತು ಗುರುವಿನಲ್ಲಿ ಇಟ್ಟ ನಿಷ್ಠೆಗೆ ಈ ಸಮಾರಂಭ ಸಾಕ್ಷಿಯಾಗಿದೆ ಎಂದರು.

ಗೌರಿಗದ್ದೆ ಅವಧೂತ ಶಕ್ತಿ ಆಶ್ರಮದ ವಿನಯ ಗುರೂಜಿ ಆಗಮಿಸಿ ಜಗದ್ಗುರುಗಳ ಪಾದಪೂಜಾ ನೆರವೇರಿಸಿ ಆಶೀರ್ವಾದ ಪಡೆದರು. ಗುರು ಪೂರ್ಣಿಮೆ ಪವಿತ್ರ ಸಮಾರಂಭದಲ್ಲಿ ಮಳಲಿ ಮಠದ ಡಾ. ನಾಗಭೂಷಣ ಶಿವಾಚಾರ್ಯರು, ಬಿಳಿಕಿ ರಾಚೋಟೇಶ್ವರ ಶಿವಾಚಾರ್ಯರು, ತಾವರೆಕರೆ ಡಾ.ಅಭಿನವ ಸಿದ್ಧಲಿಂಗ ಶಿವಾಚಾರ್ಯರು, ತೊಟ್ನಳ್ಳಿ ತ್ರಿಮೂರ್ತಿ ಶಿವಾಚಾರ್ಯರು, ಮಂಗಲಗಿ ಡಾ.ಶಾಂತ ಸೋಮನಾಥ ಶಿವಾಚಾರ್ಯರು, ಮಳಖೇಡ ಕಾರ್ತಿಕೇಶ್ವರ ಶಿವಾಚಾರ್ಯರು, ಸಂಗೊಳ್ಳಿ ಮಠದ ಗುರುಲಿಂಗ ಶಿವಾಚಾರ್ಯರು, ಕಾರ್ಜುವಳ್ಳಿ ಸದಾಶಿವ ಶಿವಾಚಾರ್ಯರು ಪಾಲ್ಗೊಂಡು ನುಡಿ ನಮನ ಸಲ್ಲಿಸಿದರು. ಆಲ್ದೂರು ಬಿ.ಬಿ.ರೇಣುಕಾರ್ಯರು, ಹಾವೇರಿ ಎಸ್.ಬಿ.ಹಿರೇಮಠ, ಹರಪನಹಳ್ಳಿ ಎಂ.ಕೊಟ್ರೇಶಪ್ಪ, ದಾವಣಗೆರೆ ರುದ್ರಮುನಿ ಹರೀಶ, ಬೆಂಗಳೂರಿನ ಬಾಳಯ್ಯ ಇಂಡಿಮಠ, ಉದಯ ಚಂದ್ರು, ನಂದೀಶ ಮೊದಲಾದ ಗಣ್ಯರು ಪಾಲ್ಗೊಂಡಿದ್ದರು.
ಶ್ರೀ ಜಗದ್ಗುರು ರೇಣುಕಾಚಾರ್ಯ ಗುರುಕುಲದ ಸಾಧಕರಿಂದ ವೇದಘೋಷ, ಪ್ರಾರ್ಥನಾ ಗೀತೆ ಜರುಗಿತು. ಬೇರುಗಂಡಿ ಬೃಹನ್ಮಠದ ರೇಣುಕ ಮಹಾಂತ ಶಿವಾಚಾರ್ಯರು ಸ್ವಾಗತಿಸಿದರು. ದಾನಯ್ಯ ದೇವರು ಕಾರ್ಯಕ್ರಮ ನಿರೂಪಿಸಿದರು.
ಬೆಳಿಗ್ಗೆ ಕ್ಷೇತ್ರದ ಎಲ್ಲ ದೈವಗಳಿಗೆ ಗುರು ಪೂರ್ಣಿಮಾ ನಿಮಿತ್ಯ ವಿಶೇಷ ಪೂಜೆ ಸಲ್ಲಿಸಿ ವಿಶೇಷ ಹೂ ಅಲಂಕಾರ ಮಾಡಲಾಗಿತ್ತು.