ಜ್ಞಾನ ಸಂಸ್ಕಾರ ಜೀವನದ ನಿಜವಾದ ಆಸ್ತಿ ; ಶ್ರೀ ರಂಭಾಪುರಿ ಜಗದ್ಗುರುಗಳು

0 39

ಎನ್.ಆರ್ ಪುರ: ದೀರ್ಘ ಕಾಲ ಜೊತೆಗಿದ್ದವರೆಲ್ಲ ಒಳ್ಳೆಯ ಸ್ನೇಹಿತರಲ್ಲ. ಕಷ್ಟ ಕಾಲದಲ್ಲಿ ಜೊತೆಗಿದ್ದವರೆ ನಿಜವಾದ ಸ್ನೇಹಿತರು. ಜ್ಞಾನ ಮತ್ತು ಸಂಸ್ಕಾರ ಮನುಷ್ಯ ಜೀವನದ ನಿಜವಾದ ಆಸ್ತಿಯೆಂದು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.


ಅವರು ಶ್ರೀ ರಂಭಾಪುರಿ ಪೀಠದಲ್ಲಿ ಹುಣ್ಣಿಮೆ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ಮನುಷ್ಯ ಬದುಕಲು ಹಣದ ಅವಶ್ಯಕತೆಯಿದೆ. ಆದರ್ಶ ವ್ಯಕ್ತಿಯಾಗಿ ಬಾಳಲು ಸದ್ಗುಣ ಬೇಕು. ಕರುಣೆ ಇದ್ದವರಿಗೆ ಕಷ್ಟ ಒಳ್ಳೆಯವರಿಗೆ ದುಃಖ ಜಾಸ್ತಿಯಿರುತ್ತದೆ. ನೋವಿರದ ವ್ಯಕ್ತಿ ಯಾರೂ ಇಲ್ಲ. ಒಬ್ಬೊಬ್ಬರಿಗೆ ಒಂದು ರೀತಿ ನೋವು ಇರುವುದು ಸಹಜ. ನೋವಿನಲ್ಲೂ ಛಲದಿಂದ ಬಾಳುವುದೇ ನಿಜವಾದ ಜೀವನವಾಗಿದೆ. ಒಳ್ಳೆಯ ಕೆಲಸಗಳು ಎಂದಿಗೂ ವ್ಯರ್ಥವಾಗುವುದಿಲ್ಲ. ಅದರ ಫಲ ಇದ್ದೇ ಇರುತ್ತದೆ. ದೇಹ ಶುದ್ದಿ, ನುಡಿ ಶುದ್ಧಿ ಮತ್ತು ಮನಃ ಶುದ್ಧಿಯಿಂದ ಬಾಳಿದರೆ ಜೀವನದಲ್ಲಿ ಸುಖ ಶಾಂತಿ ಪ್ರಾಪ್ತವಾಗುವುದೆಂದು ಶ್ರೀ ಜಗದ್ಗುರು ರೇಣುಕಾಚಾರ್ಯರು ಜೀವಾತ್ಮರನ್ನು ಎಚ್ಚರಿಸಿದ್ದಾರೆ ಎಂದರು.

ಇದೇ ಸಂದರ್ಭದಲ್ಲಿ “ರಂಭಾಪುರಿ ಬೆಳಗು” ಮಾಸ ಪತ್ರಿಕೆಯನ್ನು ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಣ ಸಚಿವ ಬಿ.ಸಿ.ನಾಗೇಶ ಬಿಡುಗಡೆ ಮಾಡಿ ಮಾತನಾಡಿ, ಜನ ಸಮುದಾಯದಲ್ಲಿ ಜಾಗೃತಿ ಮತ್ತು ಅರಿವು ಮೂಡಿಸಲು ಪತ್ರಿಕೆಗಳ ಅವಶ್ಯಕತೆಯಿದೆ. ಧಾರ್ಮಿಕ ಸಾಮಾಜಿಕ ಅರಿವು ಹಾಗೂ ರಾಷ್ಟ್ರ ಭಕ್ತಿ ಮೂಡಿಸುವ ನಿಟ್ಟಿನಲ್ಲಿ ರಂಭಾಪುರಿ ಬೆಳಗು ಪ್ರಮುಖ ಪಾತ್ರ ವಹಿಸಿದೆ ಎಂದು ಹರುಷ ವ್ಯಕ್ತಪಡಿಸಿದರು.


ಹುಲಿಕೆರೆ ದೊಡ್ಡಮಠದ ವಿರೂಪಾಕ್ಷ ಶಿವಾಚಾರ್ಯ ಸ್ವಾಮಿಗಳು, ಕರ್ಪುರವಳ್ಳಿ ಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು, ಬಬಲಾದ ದಾನಯ್ಯ ದೇವರು, ಶ್ರೀ ಪೀಠದ ಆಡಳಿತಾಧಿಕಾರಿ ಎಸ್.ಬಿ.ಹಿರೇಮಠ, ಬೆಂಗಳೂರಿನ ಹಾಲ್ಜೇನು ವೀರಭದ್ರಯ್ಯ, ನ್ಯಾಮತಿ ಬಸವರಾಜ, ಬೆಂಗಳೂರಿನ ಬಾಳಯ್ಯ ಇಂಡಿಮಠ, ಬ್ಯಾಡಿಗಿ ರವೀಂದ್ರ ಮತ್ತು ಹುಬ್ಬಳ್ಳಿ ವೀರೇಶ ಪಾಟೀಲ ಉಪಸ್ಥಿತರಿದ್ದರು.

Leave A Reply

Your email address will not be published.

error: Content is protected !!