ಪ್ರಯತ್ನ ನಿರಂತರವಾಗಿದ್ದರೆ ಉನ್ನತಿ ಕಟ್ಟಿಟ್ಟ ಬುತ್ತಿ ; ಶ್ರೀ ರಂಭಾಪುರಿ ಜಗದ್ಗುರುಗಳು

0 35

ಎನ್.ಆರ್ ಪುರ: ಬಡತನ ಮನುಷ್ಯನಿಗಿದ್ದರೂ ಮನಸ್ಸಿಗೆ ಇರಬಾರದು. ಶ್ರೀಮಂತಿಕೆ ಮನಸ್ಸಿಗೆ ಇರಬೇಕೆ ಹೊರತು ಮನುಷ್ಯನಿಗಿರಬಾರದು. ಪ್ರಯತ್ನ ಸಣ್ಣದಾಗಿದ್ದರೂ ಪರವಾಗಿಲ್ಲ. ನಿರಂತರವಾಗಿದ್ದರೆ ಜೀವನದಲ್ಲಿ ಉನ್ನತಿ ಕಟ್ಟಿಟ್ಟ ಬುತ್ತಿ ಎಂದು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.


ಅವರು ಶ್ರೀ ರಂಭಾಪುರಿ ಪೀಠದಲ್ಲಿ ಭಾರತ ಹುಣ್ಣಿಮೆ ನಿಮಿತ್ಯ ಜರುಗಿದ ಧರ್ಮ ಸಮಾರಂಭದಲ್ಲಿ ಆಶೀರ್ವಚನ ನೀಡುತ್ತಿದ್ದರು.
ಒಳ್ಳೆಯ ಆಲೋಚನೆ ಮತ್ತು ಉತ್ತಮ ಸಂಸ್ಕಾರಗಳಿAದ ಮನಸ್ಸಿಗೆ ಶಾಂತಿ ಸಿಗುತ್ತದೆ. ಹೆಸರಿನಿಂದ ಮನುಷ್ಯನ ವ್ಯಕ್ತಿತ್ವ ಬೆಳೆಯುವುದಿಲ್ಲ. ಆದರೆ ವ್ಯಕ್ತಿತ್ವದಿಂದ ಹೆಸರು ಬೆಳೆಯಲು ಸಾಧ್ಯ. ಸಂತೋಷ ಮತ್ತು ನಂಬಿಕೆ ಮಾರಾಟಕ್ಕೆ ದೊರಕುವುದಿಲ್ಲ. ಸಂತೋಷ ಮತ್ತು ನಂಬಿಕೆಗಳನ್ನು ಇನ್ನೊಬ್ಬರಿಂದ ಹಂಚಿಕೊಳ್ಳಬೇಕಾಗುತ್ತದೆ. ಮನುಷ್ಯನ ಆಶೆಗಳಿಗೆ ಕೊನೆಯಿಲ್ಲ. ಸಮಸ್ಯೆಗಳಿಗೆ ಸಾವಿಲ್ಲ. ಬೀಗುವುದು ಸದ್ಗುಣವಲ್ಲ. ಬಾಗುವುದು ಸದ್ಗುಣ ಎಂಬುದನ್ನು ಮರೆಯಬಾರದು. ಆತ್ಮ ಗೌರವದ ಪ್ರಾಮಾಣಿಕ ಬದುಕು ಕಟ್ಟಿಕೊಳ್ಳಲು ಪ್ರಯತ್ನಿಸಬೇಕು. ಶ್ರೀ ಜಗದ್ಗುರು ರೇಣುಕಾಚಾರ್ಯರು ಮಾನವೀಯತೆಯ ಆದರ್ಶ ಚಿಂತನೆಗಳನ್ನು ಸಿದ್ಧಾಂತ ಶಿಖಾಮಣಿಯಲ್ಲಿ ನಿರೂಪಿಸಿದ್ದಾರೆ. ಅರಿತು ಆಚರಿಸಿ ಬಾಳುವುದರಿಂದ ಬದುಕು ಉಜ್ವಲಗೊಳ್ಳುವುದೆಂದರು.


ತೊನಸನಹಳ್ಳಿ ರೇವಣಸಿದ್ಧೇಶ್ವರ ಶಿವಾಚಾರ್ಯರು, ಮಳಖೇಡ ವಿರುಪಾಕ್ಷ ಸ್ವಾಮೀಜಿ, ನಿಡಗುಂದ ಉಮೇಶಸ್ವಾಮಿ, ಶಿವಪ್ರಸಾದ ದೇವರು ಉಟಗಿ, ಘನಲಿಂಗ ಸ್ವಾಮೀಜಿ, ಬೆನಕೊಂಡಿ ಸಹೋದರರು, ನ್ಯಾಮತಿ ಬಸವರಾಜ, ದೃವಕುಮಾರ, ಗಿರೀಶ ಮುಂಡ್ರೆ ಮೊದಲಾದ ಗಣ್ಯರು ಪಾಲ್ಗೊಂಡಿದ್ದರು. ಇದೇ ಸಂದರ್ಭದಲ್ಲಿ ಜಯಂತಿ ಜಾತ್ರಾ ಮಹೋತ್ಸವದ ಭಿತ್ತಿಪತ್ರವನ್ನು ಶ್ರೀ ರಂಭಾಪುರಿ ಜಗದ್ಗುರುಗಳು ಬಿಡುಗಡೆಗೊಳಿಸಿದರು.


ಶ್ರೀ ಜಗದ್ಗುರು ರೇಣುಕಾಚಾರ್ಯ ಪ್ರಶಸ್ತಿ:
2023ರ ಶ್ರೀ ಜಗದ್ಗುರು ರೇಣುಕಾಚಾರ್ಯ ಪ್ರಶಸ್ತಿಗೆ ರಾಜಕೀಯ ಮುತ್ಸದ್ದಿಗಳು ಧರ್ಮನಿಷ್ಠರೂ ಮತ್ತು ಪೀಠಾಭಿಮಾನಿಗಳಾದ ಮಾಜಿ ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪನವರನ್ನು ಆಯ್ಕೆ ಮಾಡಲಾಗಿದೆ. ಮಾರ್ಚ 5ರಂದು ಭಾನುವಾರ ಪ್ರಶಸ್ತಿ ಪ್ರದಾನ ಮಾಡಲಾಗುವುದೆಂದು ಶ್ರೀ ರಂಭಾಪುರಿ ಜಗದ್ಗುರುಗಳು ಪ್ರಕಟಪಡಿಸಿದರು.

ಹುಣ್ಣಿಮೆ ನಿಮಿತ್ಯ ಕ್ಷೇತ್ರದ ಎಲ್ಲ ದೇವಾಲಯಗಳಲ್ಲಿ ವಿಶೇಷ ಪೂಜೆ ಜರುಗಿತು.

Leave A Reply

Your email address will not be published.

error: Content is protected !!