ಶಿವಜ್ಞಾನದ ಅರಿವು ಜೀವನ ಸಾಕ್ಷಾತ್ಕಾರಕ್ಕೆ ಸೋಪಾನ ;
ಶ್ರೀ ರಂಭಾಪುರಿ ಜಗದ್ಗುರುಗಳು

0 38

ಎನ್.ಆರ್ ಪುರ: ಭಾವನೆಯ ಮನೆಯಲ್ಲಿ ಭಗವಂತ ನೆಲೆಸಿದ್ದಾನೆ. ಮನೆ ಎಂಬ ಮನದಲ್ಲಿ ನೆಲೆಸಿರುವ ಪರಮಾತ್ಮನನ್ನು ಅರಿಯದೇ ಎಲ್ಲೆಲ್ಲೋ ಹುಡುಕಾಡುವರು. ಶಿವಜ್ಞಾನದ ಅರಿವು ಜೀವನ ಸಾಕ್ಷಾತ್ಕಾರಕ್ಕೆ ಸೋಪಾನವೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕ ಡಾ.ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ಅಭಿಪ್ರಾಯಪಟ್ಟರು.


ಅವರು ಲಕ್ಷ್ಮೇಶ್ವರ ಸಮೀಪದ ಶ್ರೀ ಮುಕ್ತಿಮಂದಿರ ಧರ್ಮಕ್ಷೇತ್ರದಲ್ಲಿ ಶಿವರಾತ್ರಿ ಜಾತ್ರಾ ಮಹೋತ್ಸವ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ಬದುಕು ಸುಖ ದುಃಖ, ನೋವು ನಲಿವು, ಮಾನ ಅಪಮಾನ, ಜಯ ಅಪಜಯ ದ್ವಂದಗಳಿಂದ ಕೂಡಿದೆ. ಹೊನ್ನು ಹೆಣ್ಣು ಮಣ್ಣಿಗಾಗಿ ಮನಸೋತವರು ಬಹಳಷ್ಟು ಜನರು. ಆದರೆ ಶಿವಜ್ಞಾನದ ಅರಿವು ಸಂಪಾದಿಸಿಕೊಳ್ಳಬೇಕೆನ್ನುವವರು ಬಹಳ ಕಡಿಮೆ. ಕ್ಷಣಿಕ ಸುಖದಾಸೆಗಾಗಿ ಶಾಶ್ವತವಾದ ಸುಖ ಕಳೆದುಕೊಳ್ಳಬಾರದು. ತನುವೆಂಬ ತೋಟದಲ್ಲಿ ಆಧ್ಯಾತ್ಮ ಜ್ಞಾನದ ಕೃಷಿಗೈಯಬೇಕು. ಮಂತ್ರ ತೀರ್ಥ ಗುರು ದೇವರು ದೈವ ಮತ್ತು ವೈದ್ಯರಲ್ಲಿ ಯಾವ ಭಾವನೆಗಳನ್ನು ಇಟ್ಟುಕೊಂಡು ನಡೆಯುತ್ತೇವೆಯೋ ಅದಕ್ಕೆ ತಕ್ಕ ಫಲಗಳನ್ನು ಮನುಷ್ಯ ಪಡೆಯುವುದರಲ್ಲಿ ಯಾವುದೇ ಅನುಮಾನವಿಲ್ಲ. ದಾನ ಧರ್ಮ ಕೈಗೆ ಭೂಷಣ ಕಂಠಕ್ಕೆ ಸತ್ಯ ಭೂಷಣ. ಕಿವಿಗಳಿಗೆ ಶಿವಜ್ಞಾನದ ಅರಿವು ಭೂಷಣವೆಂದು ಸಿದ್ಧಾಂತ ಶಿಖಾಮಣಿ ಧರ್ಮ ಗ್ರಂಥದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯರು ನಿರೂಪಿಸಿದ್ದಾರೆ. ಲಿಂ.ಶ್ರೀಮದ್ ರಂಭಾಪುರಿ ವೀರಗಂಗಾಧರ ಜಗದ್ಗುರುಗಳು ಶಿವರಾತ್ರಿ ಸುಸಂದರ್ಭದಲ್ಲಿ ಲೋಕ ಕಲ್ಯಾಣ ಮತ್ತು ಜನ ಮನ ಪರಿಶುದ್ಧತೆಗಾಗಿ ಇಷ್ಟಲಿಂಗ ಮಹಾಪೂಜಾ ನೆರವೇರಿಸಿ ಆಶೀರ್ವದಿಸುತ್ತಿದ್ದ ನೆನಪು ಇಂದಿಗೂ ಸದಾ ಹಸಿರಾಗಿದೆ ಎಂದರು.


ನೇತೃತ್ವ ವಹಿಸಿದ ಮುಕ್ತಿಮಂದಿರ ಕ್ಷೇತ್ರದ ಪಟ್ಟಾಧ್ಯಕ್ಷರಾದ ವಿಮಲ ರೇಣುಕ ವೀರಮುಕ್ತಿಮುನಿ ಶಿವಾಚಾರ್ಯರು ಮಾತನಾಡಿ ಧರ್ಮ ಅರ್ಥ ಕಾಮ ಮೋಕ್ಷ ಎಂಬ ನಾಲ್ಕು ಚತುರ್ವಿಧ ಪುರುಷಾರ್ಥಗಳಲ್ಲಿ ಒಂದನ್ನಾದರೂ ಸಂಪಾದಿಸಿಕೊಳ್ಳದಿದ್ದರೆ ಮಾನವ ಜೀವನ ನಿರರ್ಥಕವಾಗುತ್ತದೆ. ಬಾಳ ಬದುಕು ವಿಕಾಸಗೊಳ್ಳಲು ಆಧ್ಯಾತ್ಮದ ಅನುಸಂಧಾನ ಗುರು ಮಾರ್ಗದರ್ಶನ ಮತ್ತು ಶಿವಸ್ಮರಣೆ ಅಗತ್ಯವೆಂದರು. ಸಮಾರಂಭದಲ್ಲಿ ಹೂಲಿ, ಕಲಾದಗಿ ಶ್ರೀಗಳು ಸೇರಿದಂತೆ ಹಲವಾರು ಮಠಾಧೀಶರು ಪಾಲ್ಗೊಂಡಿದ್ದರು. ಹುಬ್ಬಳ್ಳಿಯ ರಾಜಶೇಖರ ಪಾಟೀಲ, ಎಚ್.ಎಂ.ವಿಶ್ವನಾಥಯ್ಯ, ಗಣೇಶಪ್ಪ ಕಾರಿಗನೂರು, ಸೋಮಣ್ಣ ಜಾಣಗಲ್ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.


ಗದುಗಿನ ಶ್ರೀ ಗುರುಸ್ವಾಮಿ ಕಲಕೇರಿ ಅವರಿಂದ ಭಕ್ತಿಗೀತ ಗಾಯನ ಜರುಗಿತು. ಸವಣೂರಿನ ಡಾ.ಗುರುಪಾದಯ್ಯ ಸಾಲಿಮಠ ನಿರೂಪಿಸಿದರು.
ಪ್ರಾತಃಕಾಲ ಲಿಂ. ಶ್ರೀ ರಂಭಾಪುರಿ ವೀರಗಂಗಾಧರ ಜಗದ್ಗುರುಗಳ ಗದ್ದುಗೆಗೆ ವಿಶೇಷ ಪೂಜೆ, ಪಲ್ಲಕ್ಕಿ ಉತ್ಸವ ಹಾಗೂ ಮಹಾರಥೋತ್ಸವ ಕಡುಬಿನ ಕಾಳಗ ಜರುಗಿದವು. ಮಲೆಬೆನ್ನೂರು ವೀರಶೈವ ಸಮಾಜ ಬಾಂಧವರು ಅನ್ನದಾಸೋಹ ನೆರವೇರಿಸಿದರು.

Leave A Reply

Your email address will not be published.

error: Content is protected !!