23.2 C
Shimoga
Sunday, November 27, 2022

ಸಡಗರ ಸಂಭ್ರಮದಿಂದ ಬೂರೆ ಹಬ್ಬ ಆಚರಣೆ

ಸೊರಬ: ಮಲೆನಾಡಿನ ಹಬ್ಬಗಳ ಆಚರಣೆಯಲ್ಲಿ ದೀಪಾವಳಿ ಹಬ್ಬವು ನಮ್ಮ ಪರಂಪರೆಯ ಬಹು ವಿಶಿಷ್ಟವಾದ ಹಬ್ಬವಾಗಿದ್ದು ಚಂದ್ರಗುತ್ತಿ ಹೋಬಳಿಯ ಸುತ್ತಮುತ್ತಲಿನ ಜನತೆ ಸೋಮವಾರ ಬೂರೆ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.

ಈ ಹಬ್ಬವು ನರಕ ಚತುರ್ದಶಿ ಹಬ್ಬದ ದಿನ ಆಚರಣೆ ಮಾಡಲಾಗುತ್ತದೆ. ಇದರ ಹಿಂದಿನ ದಿನ ಸಂಜೆ ಹೆಂಗಳೆಯರು ಮಿಂದು ಮಡಿ ಉಟ್ಟು.ಊರ ಬಾವಿಯಿಂದ ನೀರು ತರುವರು. ಮಳೆಗಾಲದಲ್ಲಿ ಸಹಜವಾಗಿ ಬೇಲಿಯಲ್ಲಿ ಬೆಳೆಯುವ ಮಾಲಿಂಗನ ಬಳ್ಳಿ, ಕಹಿ ಹೀರೆ, ಸವತೆ, ಕಾಗೆ ಹೆಣ್ಣಿನ ಬಳ್ಳಿ ತಂದು ಬಚ್ಚಲು ಹರವಿ, ಹಂಡೆಗಳಿಗೆ ಜೇಡಿಮಣ್ಣು ಹಾಗೂ ಕೆಮ್ಮಣ್ಣಿನಿಂದ ಚಿತ್ರ ಬರೆದು ಅಲಂಕರಿಸಿ ನೀರು ತುಂಬಿ ಹರಿವಾಣ ಮುಚ್ಚಿಡುವ ಪದ್ದತಿ.

ಕಳ್ಳಬೂರೆ ಹಬ್ಬ :

ಇದು ರಾತ್ರಿ ನಡೆಯುವ ಪದ್ದತಿ ಯುವಕರು ಕತ್ತಲು ರಾತ್ರಿಯಲ್ಲಿ ಬೇರೆಯವರ ಮನೆ ಹಿತ್ತಲಿನ ತರಕಾರಿ, ಹೂವು, ಹಣ್ಣು, ಹಂಪಲು, ಎಳನೀರು, ತೆಂಗಿನ ಕಾಯಿ ಕದ್ದು ತಿಂದು ಸಂಭ್ರಮಿಸುತ್ತಾರೆ. ಬೆಳಿಗ್ಗೆ ಸೂರ್ಯ ಉದಯಿಸುವ ಮುನ್ನವೇ ಮಹಿಳೆಯರು ಮಕ್ಕಳು ಮನೆಮಂದಿಯೆಲ್ಲ ಅಭ್ಯಂಜನ ಸ್ನಾನ ಮಾಡುವರು. ಬೂರೆ ಕುಂಬದಲ್ಲಿ ಬಾವಿ ನೀರು ತುಂಬಿ ಪೂಜಿಸಿ ಮನೆಯೊಳಗೆ ದೇವರ ಮುಂದೆ ಕುಡಿಬಾಳೆ ಎಲೆ ಮೇಲೆ ಇಟ್ಟು ಪೂಜಾ ಕೈಂಕರ್ಯಗಳು ನೆರವೇರಿಸಿ, ದನ ಕರುಗಳಿಗೆ ಕವಲು ಮರದ ಬೇರಿನಿಂದ ನಾರು ತೆಗೆದು ಹಗ್ಗ ಮಾಡಿ ದಂಡೆ ಮಾಡುವುದು ಸಂಪ್ರದಾಯವಾಗಿದ್ದು ಇದನ್ನು ಬೂರೆ ಕಣ್ಣಿ ಎನ್ನುವರು. ಈ ದಂಡೆಯನ್ನು ಗೋ ಪೂಜೆಯಲ್ಲಿ ಗೋವಿಗೆ ಕಟ್ಟುವರು. ಮಧ್ಯಾಹ್ನದ ವೇಳೆ ಗೋವುಗಳಿಗೆ ಪೂಜೆ ಸಲ್ಲಿಸಿ ಬೂರೆಕಡುಬಿನ ನೈವೇದ್ಯ ಅರ್ಪಿಸಿ ಎಡೆಮಾಡಿ ಮನೆ ಮಂದಿ ಎಲ್ಲಾ ಸೇರಿ ಭೋಜನ ಸವೆದು ಸಂಭ್ರಮಿಸುವರು.

ಬೂರೆ ಬೂದಿ ತೆಗೆದು ಕಟ್ಟಿಟ್ಟು ಸುಗ್ಗಿ ಕಾಲದಲ್ಲಿ ಫಸಲು ಹುಲುಸಾಗಿ ಬೆಳೆಯಲೆಂದು ರೈತರು ಹೊಲಗದ್ದೆಗಳಲ್ಲಿ ಬೀರುವುದು ಹಳೆಯ ಕಾಲದಿಂದ ನಡೆದು ಬಂದ ಸಂಪ್ರದಾಯವಾಗಿದೆ.

“ಭಾರತೀಯ ಧಾರ್ಮಿಕ ಆಚರಣೆಗಳು ಸಾಂಸ್ಕೃತಿಕ ಪರಂಪರೆಗಳನ್ನು ಉಳಿಸಿಕೊಳ್ಳಲು ಹಬ್ಬ ಹರಿದಿನಗಳ ಆಚರಣೆಯಿಂದ ಮಾತ್ರ ಸಾಧ್ಯ. ಇಂದಿನ ಯುವ ಜನತೆ ಇವುಗಳನ್ನು ಉಳಿಸಿ, ಬೆಳೆಸುವ ರಾಯಭಾರಿಗಳಾಗಬೇಕು.” ‌‌‌‌‌‌‌‌‌ -ಮಂಜಪ್ಪ ಮರಡಿ ಚಂದ್ರಗುತ್ತಿ, ಉಪನ್ಯಾಸಕರು.

- Advertisement -

More articles

LEAVE A REPLY

Please enter your comment!
Please enter your name here

- Advertisement -

Latest article

error: Content is protected !!