24.3 C
Shimoga
Friday, December 9, 2022

‘ದೀಪಾವಳಿ’ ಇದು ಬರಿ ಹಬ್ಬವಲ್ಲ ಭಾರತೀಯ ಸಂಸ್ಕೃತಿಯ ಪ್ರತೀಕ

ಹೊಸನಗರ : ವಿವಿಧತೆಯಲ್ಲಿ ಏಕತೆಯನ್ನು ಸಾರುವ ನಮ್ಮ ಭಾರತ ದೇಶವು ಅನೇಕ ಜಾತಿ ಧರ್ಮಗಳನ್ನೊಳಗೊಂಡ ದೇಶವಾಗಿದ್ದು, ಎಲ್ಲಾ ಜನಾಂಗದವರು ತಮ್ಮ ತಮ್ಮ ಇಷ್ಟಕನುಗುಣವಾಗಿ ಹಲವು ಶಕ್ತಿ ಸ್ವರೂಪ ದೇವರನ್ನು, ಆರಾಧ್ಯ ದೇವತೆಗಳನ್ನು ಭಕ್ತಿ ಭಾವದಿಂದ ಪೂಜಿಸಲ್ಪಡುವ ಆರಾಧಿಸುವ ಸುಸಂಸ್ಕೃತವುಳ್ಳ ದೇಶವಾಗಿದೆ. ಇಂತಹಾ ಹಲವು ದೇವತೆಗಳ ಆರಾಧನೆಯು ಹಬ್ಬದ ರೀತಿಯಲ್ಲಿ ವಿಜೃಂಭಣೆಯಿಂದ ಆಚರಿಸುತ್ತೇವೆ. ಹೀಗೆ ಹಲವಾರು ರೀತಿಯ ಹಬ್ಬಗಳನ್ನು ಆಚರಿಸುವ ನಮ್ಮ ಹಿಂದೂ ಸಂಪ್ರದಾಯದಲ್ಲಿ ಹಬ್ಬಗಳು ಅದರದ್ದೇ ಆದಂತಹ ವಿಶಿಷ್ಟತೆ ಹಾಗೂ ಪಾವಿತ್ರ್ಯತೆ ಇದೆಯಲ್ಲದೆ, ಸಾಮರಸ್ಯವನ್ನು ಸಮೃದ್ಧಿಯನ್ನು ಪ್ರತಿಬಿಂಬಿಸುವ ಸಂಸ್ಕೃತಿಯನ್ನು ಸಹ ಹೊಂದಿದೆಯಲ್ಲದೆ, ವಿವಿಧ ಧರ್ಮಗಳನ್ನೊಳಗೊಂಡು ಆಚರಿಸುವ ಹಲವು ಹಬ್ಬಗಳಿವೆ. ಇಂತಹಾ ಹಲವು ಹಬ್ಬಗಳಲ್ಲೊಂದಾದ ದೀಪಾವಳಿ ಹಬ್ಬವು ಕೂಡ ಎಲ್ಲಾ ಜಾತಿಯ ಧರ್ಮಗಳನ್ನೊಳಗೊಂಡು ಆಚರಿಸುವ ಹಬ್ಬವಾಗಿದೆ.

ಪ್ರಸಿದ್ಧ ಸಂಸ್ಕೃತ ಕವಿ ರಾಜಶೇಖರನ ಒಂಬತ್ತನೇ ಶತಮಾನದ ಕೃತಿ ಕಾವ್ಯಮೀಮಾಂಸೆದಲ್ಲಿ ದೀಪಾವಳಿಯನ್ನು ದೀಪಮಾಲಿಕಾ ಎಂದು ಉಲ್ಲೇಖಿಸಲಾಗಿದೆ. ಅಲ್ಲಿ ಮನೆಗಳನ್ನು ಸ್ವಚ್ಛಗೊಳಿಸುವ ಹಾಗೂ ದೀಪಗಳಿಂದ ಅಲಂಕರಿಸುವ ಸಂಪ್ರದಾಯವನ್ನು ಉಲ್ಲೇಖಿಸಲಾಗಿದೆ ಈ ರೀತಿ ಅನೇಕರು ಹಬ್ಬವನ್ನು ವಿಭಿನ್ನವಾಗಿ ವಿಜೃಂಭಣೆಯಿಂದ ಆಚರಿಸಲಾಗುತ್ತದೆ.

ದೀಪಾವಳಿ ಹಬ್ಬವು ಭಾರತದ ಪ್ರಸಿದ್ಧ ಹಬ್ಬಗಳಲ್ಲೊಂದಾದ ಹಬ್ಬವಾಗಿದೆ. ಭಾರತೀಯರಿಗೆ ದೀಪಾವಳಿ ಎಂದರೆ ಬಹು ದೊಡ್ಡ ಹಬ್ಬವಾಗಿದ್ದು, ಈ ದೀಪಾವಳಿ ಹಬ್ಬವು ದೇಶದೆಲ್ಲೆಡೆ ವಿವಿಧ ಧರ್ಮಗಳಿಂದ ಹೊಸಬಟ್ಟೆ ಧರಿಸಿ ದೀಪಗಳನ್ನು ಬೆಳಗಿಸಿ ಸಿಹಿ ತಿಂಡಿಗಳನ್ನು ಸವಿಯುವುದಷ್ಟೇ ಅಲ್ಲದೇ, ಈಗಿನ ಯುವ ಪೀಳಿಗೆ ಮತ್ತು ಶಾಲಾ ಮಕ್ಕಳು ಕೂಡ ಈ ಹಬ್ಬದ ಇತಿಹಾಸ, ಇದರ ಮಹತ್ವ ಮತ್ತು ಆಚರಣೆಗಳ ಬಗ್ಗೆ ತಿಳಿದುಕೊಳ್ಳಬೇಕಾಗಿದೆ.

ದೀಪಾವಳಿ ಹಬ್ಬವು ಭಾರತದ ಪ್ರಸಿದ್ಧ ಹಬ್ಬವಾಗಿದ್ದು ಇದನ್ನು ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಈ ದೀಪಾವಳಿ ಹಬ್ಬ ದೇಶದ ವಿವಿಧ ಭಾಗಗಳಲ್ಲಿ ವಿವಿಧ ರೀತಿಯಲ್ಲಿ ಅರ್ಥೈಸಿಕೊಂಡು ಆಚರಿಸಲಾಗುತ್ತದೆ. ಇದು ಬರಿ ಹಬ್ಬವಲ್ಲ ಭಾರತೀಯ ಸಂಸ್ಕೃತಿಯ ಪ್ರತೀಕವಾಗಿ ಆಚರಿಸುವ ಹಬ್ಬವಾಗಿದೆ. ಈ ನೆಲದ ಸಿರಿಯ ಜೀವಸತ್ವ, ಸಂಪ್ರದಾಯದ ಸಾರ, ಹಿರಿಯರು ಕಿರಿಯರು ಮೇಲು ಕೀಳು ಜಾತಿ ಧರ್ಮ ಭೇದವಿಲ್ಲದೆ ಎಲ್ಲರೂ ಸೇರಿ ಒಗ್ಗಟ್ಟಿನಿಂದ ಖುಷಿಯಿಂದ ಆಚರಿಸುವಂತಹ ಹಬ್ಬವಾಗಿದೆ.

ಶ್ರೀ ರಾಮನು ರಾವಣನನ್ನು ಜಯಿಸಿ ಸೀತೆ ಮತ್ತು ಲಕ್ಷ್ಮಣರೊಂದಿಗೆ ಮರಳಿ ಅಯೋಧ್ಯೆಗೆ ಬಂದು ರಾಜ್ಯಭಾರ ಮಾಡಿದನೆಂದು ಈ ಗೆಲುವಿನ ಸಂಕೇತವಾಗಿ ದೀಪಾವಳಿ ಹಬ್ಬದ ಆಚರಣೆ ಮಾಡಲಾಗುತ್ತದೆ ಎಂತಲೂ ರಾಮಾಯಣದಲ್ಲಿ, ಶ್ರೀ ಕೃಷ್ಣನು ನರಕಾಸುರನನ್ನು ಸಂಹರಿಸಿದ ದಿನವೆಂದು ನರಕಚತುರ್ದಶಿ ಆಚರಿಸಲಾಗುತ್ತದೆ ಎಂತಲೂ ಒಟ್ಟಿನಲ್ಲಿ ದೀಪಾವಳಿ ಹಬ್ಬವು ಕೇಡಿನ ಮೇಲೆ ಯುದ್ದ ಸಾರಿ ಶುಭದ ವಿಜಯವೆಂತಲೂ ಆಚರಿಸಲಾಗುತ್ತಿದೆ.

ಜೈನರಿಗೆ ಇದು ಮೋಕ್ಷ್ಮ ಲಕ್ಷ್ಮಿ ಪೂಜೆಯಾಗಿದ್ದು, ಇಡೀ ವರ್ಷ ಅವರು ಧನಲಕ್ಷ್ಮಿ ಪೂಜೆ ಮಾಡುತ್ತಾರೆ. ದೀಪಾವಳಿ ಹಬ್ಬದ ಹಿಂದಿನ ದಿನ ಮೋಕ್ಷ್ಮ ಲಕ್ಷ್ಮಿ ಪೂಜೆ ಮಾಡುತ್ತಾರೆ. ವೈರಾಗ್ಯದ ದೃಷ್ಟಿಯಿಂದ ದಾನ, ಉಪವಾಸ, ಮಾಡುತ್ತಾರೆ. ಬೌದ್ಧ ಧರ್ಮದಲ್ಲಿ ಹಲವು ಪಂಗಡಗಳು ದೀಪಾವಳಿ ಹಬ್ಬವನ್ನು ಮೂರು ದಿನಗಳ ಕಾಲ ವಿವಿಧ ರೀತಿಯ ಪೂಜೆ ಮಾಡುವ ಮೂಲಕ ಹಬ್ಬವನ್ನು ಆಚರಿಸಿದರೆ, ಸಿಖರಲ್ಲಿಯೂ ಕೂಡ ಈ ಹಬ್ಬವನ್ನು ವಿಭಿನ್ನವಾಗಿ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಕಾರ್ತಿಕ ಮಾಸದ ಕೃಷ್ಣ ಪಕ್ಷದ ತ್ರಯೋದಶಿಯಂದು ಸಿಖರಿಗೆ ಧನ್ತೇರಸ್, ದಂತೇರಸ್, ಹಬ್ಬವನ್ನಾಗಿ ಆಚರಿಸುತ್ತಾರೆ ಈ ದಿನದಂದು ಯಾರು ಚಿನ್ನ ಬೆಳ್ಳಿ ಆಭರಣ, ಭೂಮಿ ಅಥವಾ ಇನ್ಯಾವುದೋ ರೀತಿಯಲ್ಲಿ ಆಸ್ತಿಗಳನ್ನು ಖರೀದಿಸಿದರೆ ಒಂದಕ್ಕೆ ಹದಿಮೂರು ಪಟ್ಟು ಹೆಚ್ಚಾಗುತ್ತದೆ ಎಂದು ಹೇಳಲಾಗುತ್ತಿದೆ. ಇದು ಅವರಿಗೆ ಸಂಪತ್ತು ಮತ್ತು ಸಮೃದ್ಧಿಯ ಆಚರಣೆಯಾಗಿದೆಯಲ್ಲದೆ, ಬಂದಿಖೋರ್ ದಿವಸ್ ಸಿಖರಿಗೆ ಅತಿ ಮಹತ್ವದ ದಿನವಾಗಿದೆ. ವಿಶೇಷವಾಗಿ ದೀಪಾವಳಿ ಹಬ್ಬದಂದೇ ಇದನ್ನು ಆಚರಿಸಲಾಗುತ್ತದೆ. ಮೊಘಲರ ರಾಜ ಜಹಾಂಗೀರನು ಗ್ವಾಲಿಯರ್ ಕೋಟೆಯಲ್ಲಿ ವಿವಿಧ ಧರ್ಮಗಳ ಅನೇಕ ರಾಜಮಹಾರಾಜರನ್ನು, ಗುರುಗಳನ್ನು ಬಂದಿಸಿಟ್ಟಿರುತ್ತಾನೆ ಆಗ ಸಿಖ್ ಧರ್ಮ ಗುರುವಾಗಿದ್ದ ಬಂದಸಿಟ್ಟಾಗ, ಗುರು ಹರ್ ಗೋಬಿಂದ್ ಸಿಂಗ್ ರವರು ತಮ್ಮನ್ನು ತಾವೇ ಬಿಡುಗಡೆ ಮಾಡಿಕೊಡಿದ್ದಲ್ಲದೇ, ಸೆರೆಯಿಂದ ಹಿಂದೂ ರಾಜರುಗಳನ್ನು ಬಂದಮುಕ್ತ ಗೊಳಿಸಿದ ದಿನವೂ ಇದಾಗಿದೆ.

ನಮ್ಮಲ್ಲಿ ಅಮಾವಾಸ್ಯೆಯ ದಿನದಂದು ಕೇದಾರೇಶ್ವರ ವ್ರತ ಮಾಡುತ್ತೇವೆ ಕೆಲವರು ಕೇದಾರ ಗೌರಿ ವ್ರತ ಮಾಡುತ್ತಾರೆ. ಶಿವನ ವ್ರತವೇ ಕೇದಾರ ವ್ರತವಾಗಿದೆ. ಇತ್ತೀಚೆಗೆ ದೀಪಾವಳಿ ಹಬ್ಬವನ್ನು ನಾವು ಮೂರು ದಿನಗಳಿಗೆ ಮಾತ್ರ ಸೀಮಿತಗೊಳಿಸಿದ್ದೇವೆ. ಈ ಹಬ್ಬವನ್ನು ಐದು ದಿನಗಳ ಕಾಲ ಆಚರಿಸಲಾಗುವ ಹಬ್ಬವಾಗಿದೆ. ಮೊದಲನೇ ದಿನ ನೀರು ತುಂಬುವ ಹಬ್ಬ, ದೀಪಾವಳಿ ಹಬ್ಬದ ಎರಡನೇ ದಿನ ಎಣ್ಣೆ ನೀರು ಸ್ನಾನ ಮಾಡುವುದು ಏಕೆಂದರೆ ಸಮುದ್ರ ಮಂಥನ ಸಮಯದಲ್ಲಿ ಶ್ರೀ ವಿಷ್ಣುವು ಅಮೃತ ಕಳಶದೊಂದಿಗೆ ಧನ್ವಂತರಿಯಾಗಿ ಅವತಾರವೆತ್ತಿದ ಈ ದಿನದಂದು ಸ್ನಾನದ ನೀರಿನಲ್ಲಿ ಗಂಗೆ ಎಣ್ಣೆಯಲ್ಲಿ ಲಕ್ಷ್ಮಿ ಇರುತ್ತಾರೆ ಈ ದಿನ ಎಣ್ಣೆ ನೀರು ಸ್ನಾನ ಮಾಡುವುದರಿಂದ ಆಯಸ್ಸು ಆರೋಗ್ಯ ಐಶ್ವರ್ಯ ವೃದ್ಧಿಯಾಗುತ್ತದೆ ಹಾಗೂ ಸಕಲ ಪಾಪಗಳು ಕಳೆದುಹೋಗುತ್ತದೆ ಎನ್ನುವ ನಂಬಿಕೆಯಿದೆಯಲ್ಲದೆ, ಪೌರಾಣಿಕ ಇತಿಹಾಸವನ್ನು ಗಮನಿಸಿದರೆ ನರಕಾಸುರನನ್ನು ಕೊಂದ ಪಾಪ ಪರಿಹಾರಕ್ಕಾಗಿ ಶ್ರೀ ಕೃಷ್ಣನೂ ಕೂಡ ಈ ದಿನದಂದು ಎಣ್ಣೆ ನೀರು ಸ್ನಾನ ಮಾಡಿದ್ದಾನೆ ಎಂಬ ನಂಬಿಕೆ ಇದೆ.

ಮೂರನೇ ದಿನ ದೀಪಾವಳಿ ಅಮಾವಾಸ್ಯೆ ಭಕ್ತರು ಲಕ್ಷ್ಮಿ ದೇವಿಯನ್ನು ಭಕ್ತಿಯಿಂದ ಪೂಜಿಸುವ ದಿನವಾಗಿದೆ ಏಕೆಂದರೆ, ಈ ದಿನದಂದು ಶ್ರೀ ಮಾತೆ ಮಹಾದೇವಿ ಲಕ್ಷ್ಮಿ ದೇವಿಯು ಅತ್ಯಂತ ಕರುಣಾಮಯಿಯಾಗಿದ್ದು, ಶಾಂತಚಿತ್ತಳಾಗಿರುತ್ತಾಳೆ ಹಾಗೂ ತನ್ನ ಭಕ್ತರಿಗೆ ಬೇಡಿದ ವರವನ್ನು ನೀಡುತ್ತಾಳೆ. ಈ ಅಮಾವಾಸ್ಯೆಯಂದು ಜನರು ಕುಬ್ಜ ಅವತಾರವನ್ನು ಧರಿಸಿದ ಬಲಿಯನ್ನು ಪಾತಾಳಕ್ಕೆ ತಳ್ಳಿದ ಭಗವಾನ್ ವಿಷ್ಣುವಿನ ಕಥೆಯನ್ನು ಸಹ ಹೇಳಲಾಗುತ್ತಿದೆ. ದೀಪಗಳ ಹಬ್ಬದ ಸಮಯದಲ್ಲಿ ಮಾತ್ರ ಬಲಿಯು ಮತ್ತೆ ಪ್ರಪಂಚವನ್ನು ಸುತ್ತಾಡಲು ಅನುಮತಿಸಲಾಗಿದೆ. ಭಗವಾನ್ ವಿಷ್ಣುವಿನ ಪ್ರೀತಿ ಕರುಣೆ ಮತ್ತು ಜ್ಞಾನದ ಸಂದೇಶವನ್ನು ಹರಡಲು ಮತ್ತು ದಾರಿಯುದ್ದಕ್ಕೂ ದೀಪಾಗಳನ್ನು ಬೆಳಗಿಸಲು ಮೂರನೇ ದಿನ ಕಾರ್ತಿಕ ಶುದ್ಧ ಪಾಡ್ಯದ ದಿನ ಬಲಿ ನರಕದಿಂದ ಹೊರಬಂದು ಭಗವಾನ್ ವಿಷ್ಣುವು ನೀಡಿದ ವರಗಳ ಪ್ರಕಾರ ಭೂಮಿಯನ್ನು ಅಳುತ್ತಾನೆ ಎಂದು ಅನೇಕರ ನಂಬಿಕೆಯಾಗಿದೆ.

ನಾಲ್ಕನೇ ದಿನ ಬಲಿಪಾಡ್ಯಮಿ ದಿನ ನಮ್ಮ ಹಿಂದೂ ಸಂಸ್ಕೃತಿ ಬಿಂಬಿಸುವ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಗೋವು ಪೂಜೆ ಮಾಡುವುದಲ್ಲದೇ ರೈತರು ತಮ್ಮ ಕೃಷಿ ಚಟುವಟಿಕೆಗಳಿಗೆ ಬಳಸಿಕೊಳ್ಳುವ ದನಕರುಗಳಿಗೆ ಒಣಕೊಬ್ಬರಿಗಳ ಮಾಲೆ ಮಾಡಿ ಅವುಗಳ ಕೊರಳಿಗೆ ಕಟ್ಟುವುದಲ್ಲದೇ, ವಿಭಿನ್ನ ರೀತಿಯಲ್ಲಿ ಸಿಂಗರಿಸಿ ಅವುಗಳ ದೇಹಗಳಿಗೆ ವಿಧವಿಧ ಹೆಸರುಗಳನ್ನಿಟ್ಟು, ಹೋರಿಬೆದರಿಸುವ ಹಬ್ಬ ಎಂದು ಕರೆಯಲ್ಪಡುವುದು. ಈ ಹೋರಿಬೆದರಿಸುವ ಹಬ್ಬವು ಗ್ರಾಮೀಣ ಪ್ರದೇಶದ ಜನರಿಂದ ಹಟ್ಟಿಹಬ್ಬವೆಂದು ಸಹ ಕರೆಯಲಾಗುತ್ತದೆ. ಈ ಹಬ್ಬಗಳಲ್ಲಿ ಲಕ್ಷಾಂತರ ಹಣವನ್ನು ವೆಚ್ಚ ಮಾಡಿ ಈ ಹೋರಿ ಬೆದರಿಸುವ ಹಬ್ಬಕ್ಕಾಗಿ ವಿವಿಧ ರಾಜ್ಯಗಳಿಂದ ಬಲಿಷ್ಠವಾದ ಹೋರಿಗಳನ್ನು (ದನಗಳನ್ನು) ತರಲಾಗುತ್ತದೆ. ಒಂದು ಅಂಕಣದಿಂದ ಸ್ಪರ್ದಾರೂಪದಲ್ಲಿ ಓಡಲು ಬಿಡಲಾಗುತ್ತದೆ. ಹೋರಿಗಳು ಜೋರಾಗಿ ಓಡುವ ದಿಕ್ಕಿನಲ್ಲಿ ಇವುಗಳನ್ನು ಹಿಡಿಯಲು ಸಾವಿರಾರು ಜನರು ನಿಂತು ಹಿಡಿಯಲು ಪ್ರಯತ್ನಿಸುತ್ತಾರೆ. ಇಂತಹಾ ಸಂದರ್ಭದಲ್ಲಿ ಅನೇಕ ಸಾವು ನೋವುಗಳು ಉಂಟಾಗುತ್ತದೆ ಅಲ್ಲದೇ ಹಲವು ಹೋರಿಗಳು ಅನಾಹುತಕೊಳಪಡುತ್ತವೆ.

ಐದನೇ ದಿನ ಯಮದ್ವಿತೀಯ ಪ್ರಪಂಚದಾದ್ಯಂತ ಜನರು ಜೂಜಿನಲ್ಲಿ ತಮ್ಮ ಕೈಯನ್ನು ಪ್ರದರ್ಶಿಸುತ್ತಾರೆ. ಏಕೆಂದರೆ ಪಾರ್ವತಿ ದೇವಿಯ ಅನುಗ್ರಹದಿಂದ ಈ ದಿನದಂದು ಯಾರು ಜೂಜಾಡುತ್ತಾರೋ ಅವರು ಮುಂಬರುವ ವರ್ಷವಿಡೀ ಸಮೃದ್ಧಿಯನ್ನು ಸುರಿಸಲ್ಪಡುತ್ತಾರೆ ಎಂದು ನಂಬಲಾಗಿದೆ. ದಂತಕಥೆಯ ಪ್ರಕಾರ ಪಾರ್ವತಿಯು ತನ್ನ ಪತಿ ಪರಮೇಶ್ವರನೊಂದಿಗೆ ಕೈಲಾಸದಲ್ಲಿ ದಾಳಿಗಳನ್ನು ಆಡಿದಳು, ದೀಪಾವಳಿಯ ಆಚರಣೆಯ ಸುತ್ತಲಿನ ಎಲ್ಲಾ ವಿನೋದ ಜೂಜು ಮತ್ತು ಪಟಾಕಿಗಳ ಜೊತೆಗೆ ಇದು ಅಂತರ್ಗತವಾಗಿ ತಾತ್ವಿಕ ಹಬ್ಬವಾಗಿದೆ. ಬೆಳಕು ಮತ್ತು ಕೆಟ್ಟದ್ದಕಿಂತ ಒಳಿತಿನ ಪ್ರಾಬಲ್ಯಕ್ಕೆ ಮಹತ್ತರವಾದ ಪ್ರಾಮುಖ್ಯತೆಯನ್ನು ನೀಡುತ್ತದೆ. ಹೀಗೆ ಐದು ದಿನಗಳ ಕಾಲ ಆಚರಿಸಲಾಗುವುದು. ಒಟ್ಟಿನಲ್ಲಿ ಇದು ಈ ದೇಶದಲ್ಲಿ ಹುಟ್ಟಿದ ಮೂಲತಃ ಭಾರತೀಯರು, ಬುಡಕಟ್ಟು ಜನಾಂಗದಿಂದ ಹಿಡಿದು ಜೈನರು, ಬೌದ್ಧರು ಸಿಖರು, ಹಿಂದೂಗಳು ಕಾಡಿನಿಂದ ಹಿಡಿದು ನಾಡಿನ ಸರ್ವ ಜನಾಂಗದವರು ಆಚರಿಸುವ ಪುರಾತನ ಕಾಲದಿಂದಲೂ ನಡೆದು ಬಂದ ಹಬ್ಬವಾಗಿದೆ.

ಲೇಖನ : ಪುಷ್ಪಾ ಜಾಧವ್, ಹೊಸನಗರ

- Advertisement -

More articles

LEAVE A REPLY

Please enter your comment!
Please enter your name here

- Advertisement -

Latest article

error: Content is protected !!