ಗೋಪೂಜೆ ಸಂದರ್ಭದಲ್ಲಿ ಚಿನ್ನದ ಸರ ನುಂಗಿದ ಹಸು ! ಮುಂದೇನಾಯ್ತು ?

0 2,570

ಹೊಸನಗರ: ದೀಪಾವಳಿ (Deepavali) ದಿನ ಗೋಪೂಜೆ (Gopooje) ಸಲ್ಲಿಸುವ ಸಮಯದಲ್ಲಿ ಹಸುವೊಂದು‌ (Cow) ಪೂಜೆಗಿಟ್ಟಿದ್ದ ಚಿನ್ನದ ಸರವನ್ನು (Gold Chain) ನುಂಗಿದ್ದ ಘಟನೆ ತಾಲೂಕಿನ ಮತ್ತಿಮನೆಯಲ್ಲಿ (Mattimane) ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಇದೀಗ ಪಶುವೈದ್ಯರು ಹಸುವಿಗೆ ಯಶಸ್ವಿ ಶಸ್ತ್ರಚಿಕಿತ್ಸೆ ಮಾಡುವ ಮೂಲಕ ಆ ಚಿನ್ನದ ಸರವನ್ನು ಹೊರತೆಗೆದಿದ್ದಾರೆ. ಮತ್ತಿಮನೆ ಸತ್ಯವತಿ ಶ್ಯಾಮ ಉಡುಪ ಅವರ ಮನೆಯಲ್ಲಿ ಈ ಘಟನೆ ನಡೆದಿದೆ.

ಗೋಪೂಜೆಯ ನಂತರ ಇಟ್ಟಿದ್ದ ಸರ ನಾಪತ್ತೆಯಾದಾಗ ಕುಟುಂಬದವರು ದಿಗಿಲುಗೊಂಡಿದ್ದರು. ನಂತರ ಪರಿಶೀಲಿಸಿದಾಗ ಪ್ರಸಾದದ ಜೊತೆ ಬಂಗಾರದ ಸರವನ್ನು ಹಸು ನುಂಗಿದೆ ಎಂದು ಮನೆಯವರು ಖಚಿತ ಪಡಿಸಿಕೊಂಡಿದ್ದಾರೆ. ಬಂಗಾರ ಹೋದರೆ ಹೋಗಲಿ ಎಂದು ಸತ್ಯವತಿ ಶ್ಯಾಮ ಉಡುಪ ಸುಮ್ಮನಾಗಿದ್ದರು. ಆದರೆ ಹಲವರ ಬಳಿ ಈ ವಿಚಾರ ಹೇಳಿದಾಗ ಇದು ಹಸುವಿನ ಪ್ರಾಣಕ್ಕೂ ಕುತ್ತು ತರಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದು ಅವರ ಆತಂಕಕ್ಕೆ ಕಾರಣವಾಗಿತ್ತು.

ಅಲ್ಲದೇ ಚಿನ್ನದ ಸರ ನುಂಗಿದ ದಿನದಿಂದ ಹಸು ಮೇವು ತಿನ್ನುವುದನ್ನು ಕಡಿಮೆ ಮಾಡಿತ್ತು. ಹಸುವಿನ ಆರೋಗ್ಯದ ಸ್ಥಿತಿಯ ಬಗ್ಗೆ ಕೋಣಂದೂರಿನ ಹಿರಿಯ ಪಶು ವೈದ್ಯಾಧಿಕಾರಿ ಡಾ. ಆನಂದ್ ಜಿ ಅವರಿಗೆ ಮಾಹಿತಿ ನೀಡಿದ್ದರು. ವೈದ್ಯರು ಭಾನುವಾರ ಯಶಸ್ವಿ ಶಸ್ತ್ರಚಿಕಿತ್ಸೆ ಮಾಡುವ ಮೂಲಕ‌ ಬಂಗಾರದ ಸರವನ್ನು ಹೊರತೆಗೆದಿದ್ದಾರೆ. ಹಸು ಆರೋಗ್ಯವಾಗಿದ್ದು, ಮನೆಯವರು ನಿಟ್ಟುಸಿರು ಬಿಟ್ಟಿದ್ದಾರೆ.

ಡಾ. ಆನಂದ್ ಈ ಬಗ್ಗೆ ಮಾಹಿತಿ ನೀಡಿ, ಹಸು‌ ಮೆಲುಕು‌ ಹಾಕಿ ಮೇವು ಜಗಿಯುವಾಗ ಸರ ತುಂಡಾಗಿ ಚೂಪಾಗಿದ್ದು, ರೆಟಿಕ್ಯುಲಮ್ ಭಾಗದಲ್ಲಿ ಸಿಲುಕಿತ್ತು. ಚೂಪಾಗಿದ್ದರಿಂದ ಗಾಯವಾಗಿ ಅನಾರೋಗ್ಯಕ್ಕೆ ಒಳಗಾಗುವ ಸಾಧ್ಯತೆ ಇತ್ತು. ಯಶಸ್ವಿ ಚಿಕಿತ್ಸೆ ಮೂಲಕ ಸರವನ್ನು ಹೊರತೆಗೆಯಲಾಗಿದೆ ಎಂದು ತಿಳಿಸಿದ್ದಾರೆ. ಕಾರ್ಯಾಚರಣೆ ವೇಳೆ ಮೈತ್ರಿ ಕಾರ್ಯಕರ್ತ ಗಣಪತಿ ಜಿ, ಪಶು ಇಲಾಖೆ ಸಿಬ್ಬಂದಿ ಹಾಜರಿದ್ದರು.

Leave A Reply

Your email address will not be published.

error: Content is protected !!