ನಾಲಾಯಕರ ನಡುವೆ ನಿಜವಾದ ನಾಯಕನ್ಯಾರು ?

“ಜನಪ್ರತಿನಿಧಿಗಳಿಗೆ ಜಾತಿ, ಧರ್ಮಗಳು ಅದರ ಲೆಕ್ಕಾಚಾರಗಳು ಇರಲೇಬಾರದು ಒಮ್ಮೆ ಗೆದ್ದಮೇಲೆ ಅವರು ಸರ್ವ ಸಮುದಾಯಗಳಿಗೆ ನಾಯಕನಾಗಿಯೇ ಇರಬೇಕು” ಎನ್ನುವುದು ಇವತ್ತಿನ ಕಾಲಕ್ಕೆ ಕೇವಲ ಫಿಲಾಸಫಿಯಷ್ಟೇ. ಯಾಕೆಂದರೆ ಇರುವ ನಾಲಾಯಕ್ ನಾಯಕರಲ್ಲಿ ನಿಜವಾದ ನಾಯಕರು ಯಾರು ಎನ್ನುವುದು ಪ್ರಶ್ನೆ!. ರಾಮಕೃಷ್ಣ ಹೆಗಡೆಯಂತ ಧೀಮಂತ ವ್ಯಕ್ತಿತ್ವಕ್ಕೆ ಚಪ್ಪಲಿಯಲ್ಲಿ ಹೊಡೆದ ಸಿದ್ದರಾಮಯ್ಯ, ದೇವೇಗೌಡ್ರು ಇಬ್ಬರು ಇವತ್ತು ಜಾತ್ಯಾತೀತತೆ, ಎಥಿಕ್ಸ್ ರಾಜಕಾರಣ ಎಂದು ಮಾತನಾಡುವ ಕಾಲವಿದು.

ಈಗ ಇರುವ ಯಾವ ಪಕ್ಷವೂ ಜಾತ್ಯಾತೀತ ಪಕ್ಷವಲ್ಲ. ಯಾವ ನಾಯಕರೂ ಜಾತ್ಯಾತೀತರಲ್ಲ. “ನಾವು ಯಾವುದೇ ಜಾತಿ ಮತಗಳಿಗೆ ಅಂಟಿಕೊಂಡಿಲ್ಲ” ಎಂದು ಬೀಗುವ ಕಾಂಗ್ರೆಸ್ ಮಾಡಿದಷ್ಟು ಜಾತಿ ರಾಜಕಾರಣವನ್ನ ಬೇರೆ ಯಾವ ಪಕ್ಷವೂ ಇದುವರೆಗೆ ಮಾಡಿಲ್ಲ. ಬಿಜೆಪಿ ಕೂಡ ಕಾಂಗ್ರೆಸ್ ನಷ್ಟು ಅಲ್ಲದೆ ಇದ್ದರೂ ಒಂದು ರೇಂಜಿಗೆ ತಕ್ಕ ಹಾಗೆ ಜಾತಿ ರಾಜಕಾರಣಕ್ಕೆ ಕೈ ಹಾಕಿದೆ. ನಿಜವಾಗಿ ಹೇಳಬೇಕೆಂದರೆ ಮೊದಲಿನಿಂದಲೂ ಕರ್ನಾಟಕದ ರಾಜಕೀಯ ಜಾತಿ ರಾಜಕಾರಣವನ್ನೇ ಬೇಡುತ್ತ ಬರುತ್ತಿದೆ. ಕೇರಳ, ತಮಿಳುನಾಡು, ಹೈದ್ರಾಬಾದ್, ತೆಲಂಗಾಣ, ಮಹಾರಾಷ್ಟ್ರ ಈ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದ್ದೇ ಪಾಲಿಟಿಕ್ಸಿನ ವಜನ್ನೇ ಬೇರೆ.

ದಕ್ಷಿಣ ಭಾರತದಲ್ಲಿ ಅತ್ಯಂತ ಕೆಟ್ಟ ರಾಜಕಾರಣವನ್ನ ಕಂಡ ಯಾವುದಾದರೂ ರಾಜ್ಯವಿದ್ದರೆ ಅದು ಕರ್ನಾಟಕ. ಇಲ್ಲಿ ಕಳೆದ ಒಂದೂವರೆ ದಶಕದಲ್ಲಿ ಅತ್ಯಂತ ಪ್ರಕ್ಷುಬ್ಧ ರಾಜಕಾರಣ ಮಾಡಿದ್ದು ಮುಸ್ಲಿಂ, ದಲಿತ ಹಾಗೂ ವೀರಶೈವ ಬೆಂಬಲಿತ ಕಾಂಗ್ರೆಸ್. ಹಾಗೂ ಅದರ ನಂತರದ ಸ್ಥಾನ ಲಿಂಗಾಯಿತ ಬೆಂಬಲಿತ ಬಿಜೆಪಿ. ಒಕ್ಕಲಿಗರು ಬುಸುಗುಟ್ಟಿದ್ದರೂ ಕೂಡ ಅದು ಜೆಡಿಎಸ್ ಕಾರಣಕ್ಕೆ. ಆದರೆ ಸದ್ಯದ ಮಟ್ಟಿಗೆ ಕಾಂಗ್ರೆಸ್ ಸ್ಟಾಂಡರ್ಡ್ ಗಳು, ಅದರ ನೀಚಾತಿನೀಚ ರಾಜಕಾರಣ ಬೆಳಕಿಗೆ ಬಂದಿದ್ದು ಸಿದ್ದರಾಮಯ್ಯನವರು ಸಿಎಂ ಆದ ಮೇಲೆ.

ಈಗ್ಗೆ 10 ವರ್ಷಗಳ ಹಿಂದೆ ಕಾಂಗ್ರೆಸ್ಸಿಗೆ ಭರ್ತಿ ಮೆಜಾರಿಟಿ ಕೊಟ್ಟಾಗ ಅದರ ಹೀನ ರಾಜಕೀಯ ನೋಡಿದ್ದೇವೆ. ಅದರಲ್ಲೂ ಸಿದ್ದರಾಮಯ್ಯ ತನ್ನ ಸ್ವಾರ್ಥಕ್ಕಾಗಿ ದಲಿತರನ್ನ ಅವರ ನಾಯಕರಾದ ಮುನಿಯಪ್ಪ, ಪರಮೇಶ್ವರ್ ಎಲ್ಲರ ರಾಜಕೀಯ ಜೀವನ ಅಂತ್ಯಗೊಳಿಸಿದ್ದನ್ನ ನೋಡಿದ್ದೇನೆ. ಆಗ ಸಿದ್ದು ಕುರುಬರನ್ನ, ಮುಸ್ಲಿಂರನ್ನ ಎದೆ ಮೇಲೆ ಇಟ್ಟುಕೊಂಡು ಸ್ವಾಮೀಜಿಗಳಿಗೆ, ಬ್ರಾಹ್ಮಣರಿಗೆ, ದೇವಸ್ಥಾನಗಳಿಗೆ ಅವಮಾನ ಮಾಡಿದ್ದು, ವೀರಶೈವರನ್ನ ಎತ್ತಿಕಟ್ಟಿದ್ದು, ಲಿಂಗಾಯಿತರಿಗೆ ಉರಿಸಿದ್ದು ಇವೆಲ್ಲವನ್ನ ಕಂಡ ಮೇಲೆ ಇದಕ್ಕಿಂತ ಕ್ಷುದ್ರ ರಾಜಕಾರಣ ಯಾರೂ ಮಾಡಲು ಸಾಧ್ಯವಿಲ್ಲ ಎನಿಸಿದ್ದು ತೀರಾ ದಿಟ.

ಈ ನಡುವೆ ಇನ್ನು ಲಿಂಗಾಯಿತರು ರಾಜಕೀಯದಲ್ಲಿ ಭದ್ರವಾಗಿ ಪ್ರಾಬಲ್ಯ ಸಾಧಿಸಿದ್ದು ಯಡಿಯೂರಪ್ಪನವರು ಅಧಿಕಾರಕ್ಕೆ ಬಂದಮೇಲೆಯೇ. ಬಿಜೆಪಿಯ ಚುನಾವಣಾ ಅಭ್ಯರ್ಥಿಗಳ ಪಟ್ಟಿಯಿಂದ ಹಿಡಿದು ಅವರು ಗೆದ್ದ ಬಳಿಕ ಸಿಎಂ ಸ್ಥಾನ, ಸಚಿವ ಸ್ಥಾನಗಳ ಆಯ್ಕೆಯಲ್ಲೂ ಲಿಂಗಾಯಿತರು ಕೈಯಾಡಿಸುವಷ್ಟರ ಮಟ್ಟಿಗೆ ಬಿಜೆಪಿ ವಲಯದಲ್ಲಿ ತಳವೂರಿದ್ದಾರೆ.

ಮೊನ್ನೆ ಶೆಟ್ಟರ್ ಹಾಗೂ ಸವದಿ ಪಕ್ಷಾಂತರ ಮಾಡಿ ತೀರಾ ಹೊಲಸು ರಾಜಕೀಯ ಮಾಡಿದಾಗಲೂ ಲಿಂಗಾಯಿತರು ಮತ್ತೆ ಬಿಜೆಪಿ ವಿರುದ್ಧ ಭುಗಿಲೆದ್ದರು. ಯಾವ ಪಕ್ಷವೂ ಯಾವ ಸರ್ಕಾರವೂ ಒಂದು ಪಕ್ಷದ ಏಜೆಂಟರಾಗಬಾರದು. ಹಾಗೆಯೇ ಯಾವ ಜಾತಿಗಳು ತಮ್ಮ ಸ್ವಾರ್ಥಕ್ಕಾಗಿ ಇಡೀ ಸರ್ಕಾರವನ್ನ ಇಡೀ ವ್ಯವಸ್ಥೆಯನ್ನ ಬಲಿ ಪಡೆಯಬಾರದು. ಆದರೆ ನೆಲದಲ್ಲಿ ಇದೆ ಆಗುತ್ತಿದೆ ಇದು ನಿಜಕ್ಕೂ ಕರ್ನಾಟಕದ ಪಾಲಿಗೆ ಒಳ್ಳೆಯ ಲಕ್ಷಣಗಳಲ್ಲ.

ಕಳೆದ 2017ರ ಚುನಾವಣೆಯಾದ ಮೇಲೆ ಜೆಡಿಎಸ್ ಮತ್ತು ಕಾಂಗ್ರೆಸ್ ಅನೈತಿಕ ಸಂಬಂಧ, ಅದರ ಒಳ ಬೇಗುಧಿಗಳು, ಹೊಟ್ಟೆಯುರಿಯ ಹುಳಿತೇಗುಗಳು ಇವೆಲ್ಲಾ ಕರ್ನಾಟಕದ ರಾಜಕಾರಣದ ಅತ್ಯಂತ ದುರಂತ ದಿನಗಳಾಗಿ ಕಂಡವು. ಅದನ್ನ ಕಂಡ ಮೇಲೂ ಮತ್ತೆ ಆ ಎರಡು ಪಕ್ಷಗಳನ್ನ ಓಲೈಸುವುದಿದೆಯಲ್ಲ ಅದು ಥೇಟು ಪಶ್ಚಿಮ ಬಂಗಾಳದ ದೀದಿ ಸರ್ಕಾರವನ್ನ ಕರ್ನಾಟಕದಲ್ಲಿ ಎಳೆದುಕೊಂಡಂತೆ.

ಅವತ್ತು ಸಮ್ಮಿಶ್ರ ಸರ್ಕಾರದ ಪತನದ ಸಮಯದಲ್ಲಿ ಅಲ್ಲಿನ ತಟವಟಗಳನ್ನ ಮೇಲ್ನೋಟಕ್ಕೆ ಎನ್ಕ್ಯಾಶ್ ಮಾಡಿಕೊಂಡಿದ್ದು ಬಿಜೆಪಿ. ಆದರೆ ಬಿಜೆಪಿ ಆಗ ಇದ್ದ ಪರಿಸ್ಥಿತಿಗೆ ಹಾಗೆ ಮಾಡಿದ್ದು ತಪ್ಪಲ್ಲ. 100 ಚಿಲ್ಲರೆ ಸ್ಥಾನ ಗೆದ್ದರೂ ಅಧಿಕಾರ ಪಡೆಯದಿದ್ದಾಗ, ಆ ಕಡೆ ಕಾಂಗ್ರೆಸ್ ಮತ್ತು ಜೆಡಿಎಸ್ ನ ನಾಯಕರು ಅಧಿಕಾರಕ್ಕಾಗಿ ಬಂಡಾಯವೆದ್ದು ಹಪಹಪಿಸುತ್ತಿರುವಾಗ ಅಂತಹ ಸಮಯವನ್ನ ಇಂದಿನ ಮಾಡರ್ನ್ ಯುಗದ ಯಾವ ರಾಜಕೀಯ ಪಕ್ಷಗಳು ಸುಮ್ಮನೆ ಬಿಡುವುದಿಲ್ಲ. ಅದೊಂಥರಾ ನಾಯಿ ಹಸಿದಿತ್ತು ರೊಟ್ಟಿ ಹಳಸಿತ್ತು ಅನ್ನೋ ತರದ ರಾಜಕಾರಣ.

ಆದರೆ ನಿಜವಾಗಿ ಹೇಳಬೇಕೆಂದರೆ ಅಲ್ಲಿ ಮತದಾರರಾಗಿ ನಮ್ಮದು ತಪ್ಪಿದೆ. ಆ ಚುನಾವಣೆಯ ರಿಸಲ್ಟನ್ನೇ ನಾವು ಕಲಗಚ್ಚು ಕೊಟ್ಟಾಗ ಅದಕ್ಕೆ ಸರಿಯಾದ ಕಲಗಚ್ಚು ಆಡಳಿತಕ್ಕೆ ಹೊಂದಿಕೊಳ್ಳಬೇಕಾದ್ದು ನಮ್ಮ ಕರ್ಮವೇ ಎಂದು ಅಂದುಕೊಳ್ಳೋದೇ ಉತ್ತಮ. ಆದರೆ ಇವೆಲ್ಲದರ ನಡುವೆ ಕಳೆದ ಕೆಲವು ದಿನಗಳಿಂದ ಸಾಕಷ್ಟು ಜನ “ಇದುವರೆಗೂ ಒಮ್ಮೆಯೂ ಬಿಜೆಪಿಗೆ ಕರ್ನಾಟಕದಲ್ಲಿ ಮೆಜಾರಿಟಿ ಕೊಟ್ಟಿಲ್ಲ. ಅವರು ಮೊದಲಿನಿಂದಲೂ ತಂತಿಯ ಮೇಲೆ ನಿಂತು ರಾಜಕಾರಣ ಮಾಡುತ್ತಿದ್ದಾರೆ ಈ ಬಾರಿ ಅವರಿಗೆ ಮೆಜಾರಿಟಿ ಕೊಟ್ಟು ನೋಡೋಣ ಏನಾದರೂ ಬದಲಾವಣೆ ಆಗುತ್ತದೆನೋ, ನೋಡುವ” ಎಂದು ನನ್ನ ಕಣ್ಣೆದುರೇ ಹೇಳಿದವರನ್ನ ಕಂಡಿದ್ದೇನೆ. ಇನ್ನು ಉಳಿದದ್ದು ಏನಾಗುತ್ತದೆ ಮೇ 10 ಕ್ಕೆ ಗೊತ್ತಿರ್ತಕಂತದ್ದು.

ಬರಹ : ಶ್ರೀನಾಥ್ ಅಂಬ್ಲಾಡಿ, ಹೊಸನಗರ

Related Articles

LEAVE A REPLY

Please enter your comment!
Please enter your name here

Stay Connected

0FansLike
3,803FollowersFollow
0SubscribersSubscribe
- Advertisement -spot_img

Latest Articles

error: Content is protected !!