ವಿಮಾನದಲ್ಲಿ ಬಂದಿಳಿಯುವ ಮೂಲಕ ಫೆ.27 ರಂದು ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟಿಸಲಿದ್ದಾರೆ ಮೋದಿ ; ಬಿವೈಆರ್

0 67

ಶಿವಮೊಗ್ಗ: ಫೆ. 27 ರಂದು ಪ್ರಧಾನಮಂತ್ರಿ ನರೇಂದ್ರಮೋದಿ ಶಿವಮೊಗ್ಗಕ್ಕೆ ಲ್ಯಾಂಡ್ ಆಗುವ ಮೊದಲ ವಿಮಾನದಲ್ಲಿ ಯಾರು, ಎಷ್ಟು ಗಂಟೆಗೆ ಬರಲಿದ್ದಾರೆ? ಮೋದಿಯವರಿಂದ ಯಾವ್ಯಾವ ಕಾಮಗಾರಿಗೆ ಶಂಕುಸ್ಥಾಪನೆ? ಸಂಸದ ಬಿ.ವೈ.ರಾಘವೇಂದ್ರ ಸಂಪೂರ್ಣ ವಿವರ

ಶಿವಮೊಗ್ಗ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೇ ವಿಮಾನದಲ್ಲಿ ಬಂದು ಇಳಿಯುವ ಮೂಲಕ ನೂತನ ವಿಮಾನ ನಿಲ್ದಾಣವನ್ನು ಉದ್ಘಾಟನೆ ಮಾಡಲಿದ್ದಾರೆ ಎಂದು ಸಂಸದ ಬಿ.ವೈ ರಾಘವೇಂದ್ರ ತಿಳಿಸಿದರು.

ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಫೆ. 27 ರಂದು ವಿಮಾನ ನಿಲ್ದಾಣದ ಉದ್ಘಾಟನೆ ಜೊತೆಗೆ ಶಿಕಾರಿಪುರ-ರಾಣೆಬೆನ್ನೂರು ರೈಲ್ವೆ ಮಾರ್ಗದ ಶಂಕುಸ್ಥಾಪನೆ ಕೂಡ ನೆರವೇರಲಿದೆ. ಅಂದು ಒಟ್ಟು 1789 ಕೋಟಿ ರೂ.ಗಳ ಕಾಮಗಾರಿ ಉದ್ಘಾಟನೆಗೊಳ್ಳಲಿದೆ. ಜೊತೆಗೆ 3377 ಕೋಟಿ ರೂ. ಕಾಮಗಾರಿಗಳ ಶಂಕುಸ್ಥಾಪನೆ ನೆರವೇರಲಿದೆ ಎಂದರು.

ವಿಮಾನ ನಿಲ್ದಾಣದ ಉದ್ಘಾಟನೆಗೆ ಸಾರ್ವಜನಿಕರು ಕೂಡ ಪಾಲ್ಗೊಳ್ಳಲು ಅವಕಾಶ ಇದೆ. ಸೋಗಾನೆ ವಿಮಾನ ನಿಲ್ದಾಣದ ಪ್ರದೇಶದಲ್ಲಿಯೇ ಸಮಾರಂಭ ನಡೆಯಲಿದೆ. ಸುಮಾರು 2 ಲಕ್ಷ ಜನರು ಅಂದು ಸೇರುವ ನಿರೀಕ್ಷೆ ಇದೆ. ಅಲ್ಲಿಯೇ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನಡೆಯಲಿದೆ ಎಂದರು.

ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರು ರೈಲ್ವೆ ಮಾರ್ಗಕ್ಕೆ ನಿರ್ಮಾಣಕ್ಕೆ ಶಂಕುಸ್ಥಾಪನೆ ನಡೆಯಲಿದೆ. ಎರಡು ಹಂತದಲ್ಲಿ ಇದಕ್ಕಾಗಿ ಭೂಸ್ವಾಧೀನ ನಡೆದಿದೆ. ಶಿವಮೊಗ್ಗದಿಂದ ಶಿಕಾರಿಪುರವರೆಗೆ ಭೂಸ್ವಾಧೀನ ಮುಗಿದಿದೆ. 68 ಕೋಟಿ ರೂ.ಗಳನ್ನು ರೈತರಿಗೆ ಪರಿಹಾರವಾಗಿ ನೀಡಲಾಗಿದೆ. 612 ಕೋಟಿ ವೆಚ್ಚದಲ್ಲಿ ಮೊದಲ ಹಂತದ ರೈಲ್ವೆ ಮಾರ್ಗ ಕಾಮಗಾರಿ ಆರಂಭವಾಗಲಿದೆ ಎಂದರು.

ಕೋಟೆಗಂಗೂರು –ರಾಮನಗರ –ಮಲ್ಲಾಪುರ –ಕೊರಲಹಳ್ಳಿ –ಶಿಕಾರಿಪುರ –ಮಾಸೂರು -ಹಲಗೇರಿ ಮೂಲಕ ರಾಣೆಬೆನ್ನೂರು ತಲುಪಲಿದೆ. ಅಲ್ಲಿಂದ ಹುಬ್ಬಳ್ಳಿ ಮೂಲಕ ಮಹಾರಾಷ್ಟ್ರ, ಗುಜರಾತ್, ಮಧ್ಯಪ್ರದೇಶ ಮೊದಲಾದ ರಾಜ್ಯಗಳಿಗೆ ಸಂಪರ್ಕ ಹೊಂದಲು ಸುಲಭವಾಗಲಿದೆ. ದಕ್ಷಿಣ-ಉತ್ತರ ಭಾರತಗಳ ನಡುವೆ ಈ ರೈಲ್ವೆ ಮಾರ್ಗ ಸೇತುವೆ ಆಗಲಿದೆ ಎಂದರು.

ಕೋಟೆಗಂಗೂರಿನಲ್ಲಿ 76 ಕೋಟಿ ರೂ. ವೆಚ್ಚದಲ್ಲಿ ಕೋಚಿಂಗ್ ಡಿಪೋ ಸ್ಥಾಪನೆ ಆಗಲಿದೆ. ಅಲ್ಲಿಯೇ 21 ಕೋಟಿ ರೂ. ವೆಚ್ಚದಲ್ಲಿ ಟರ್ಮಿನಲ್ ಡಿಪೋ ಆರಂಭವಾಗಲಿದೆ. ಇವುಗಳಿಗೆ ಪ್ರಧಾನಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. 1000 ಕೋಟಿ ರೂ. ವೆಚ್ಚದ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಶಂಕುಸ್ಥಾಪನೆ ನಡೆಯಲಿದೆ. ಹೊಸನಗರ-ಮಾವಿನಕಟ್ಟೆ-ಆಡುಗೋಡಿ-313.56 ಕೋಟಿ ರೂ., ಬೈಂದೂರು-ನಾಗೋಡಿ ಅಗಲೀಕರಣ-395 ಕೋಟಿ ರೂ., ಶಿಕಾರಿಪುರ ಬೈಪಾಸ್-56 ಕೋಟಿ ರೂ., ತೀರ್ಥಹಳ್ಳಿ-ಮೇಗರವಳ್ಳಿ-ಆಗುಂಬೆ-96.20 ಕೋಟಿ ರೂ., ಭಾರತೀಪುರ ರಸ್ತೆ-56 ಕೋಟಿ ರೂ., ಹೊಳೆಹೊನ್ನೂರು ಭದ್ರಾ ಸೇತುವೆ-4.60 ಕೋಟಿ ರೂ. ವೆಚ್ಚವಾಗಲಿದೆ ಎಂದರು.

ಅದೇ ದಿನ ವಿದ್ಯಾನಗರ ಮೇಲು ಸೇತುವೆಯನ್ನು ಸಾರ್ವಜನಿಕರಿಗೆ ಸಂಚಾರಕ್ಕೆ ಮುಕ್ತ ಮಾಡುವ ಗುರಿ ಹೊಂದಲಾಗಿದೆ ಎಂದ ಅವರು, ಸ್ಮಾರ್ಟ್ ಸಿಟಿಯ 44 ಕಾಮಗಾರಿಗಳನ್ನು ಪ್ರಧಾನ ಮಂತ್ರಿಗಳು ಲೋಕಾರ್ಪಣೆ ಮಾಡಲಿದ್ದಾರೆ. ಜಲಜೀವನ ಮಿಷನ್ ಯೋಜನೆಯಲ್ಲಿ 2,25,700 ಮನೆಗಳಿಗೆ ನಲ್ಲಿ ನೀರಿನ ಸಂಪರ್ಕ ಕಲ್ಪಿಸಲಾಗುತ್ತಿದೆ. ಈ ಹಿಂದೆ ಕೇವಲ 94,359 ಮನೆಗಳಿಗೆ ಮಾತ್ರ ನಲ್ಲಿ ನೀರಿನ ಸಂಪರ್ಕ ಇತ್ತು. ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ 134 ಕೋಟಿ ರೂ. ಕಾಮಗಾರಿ ಲೋಕಾರ್ಪಣೆ ಆಗಲಿದೆ. ಅದೇ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ 13ನೇ ಕಂತನ್ನು ನರೇಂದ್ರ ಮೋದಿ ಅವರು ಶಿವಮೊಗ್ಗದಿಂದಲೇ ರೈತರ ಖಾತೆಗಳಿಗೆ ಜಮಾ ಮಾಡಲಿದ್ದಾರೆ ಎಂದರು.

ಲ್ಯಾಂಡ್ ಆಗುವ ಮೊದಲ ವಿಮಾನದಲ್ಲಿ ಯಾರು, ಎಷ್ಟು ಗಂಟೆಗೆ ಬರಲಿದ್ದಾರೆ?
ಬಹುನಿರೀಕ್ಷಿತ ಶಿವಮೊಗ್ಗ ವಿಮಾನ ನಿಲ್ದಾಣ ಫೆ.27ರಂದು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಲಿದ್ದು, ಸ್ವತಃ ಅವರ ವಿಮಾನವೇ ಮೊಟ್ಟ ಮೊದಲು ಲ್ಯಾಂಡ್ ಆಗುವ
ಮೂಲಕ ಇತಿಹಾಸ ಬರೆಯಲಿದೆ.

ಫೆ.27ಕ್ಕೆ ಪ್ರಧಾನಿಯವರು ಆಗಮಿಸುವುದು ನಿಶ್ಚಯವಾಗಿದ್ದು, ಇಲ್ಲಿ ಲ್ಯಾಂಡ್ ಆಗುವ ಮೊದಲ ವಿಮಾನ ಅವರದೆ
ಆಗಿದೆ. ಪ್ರಧಾನಿಯವರ ತಮ್ಮ ವಿಶೇಷ ವಿಮಾನದ ಮೂಲಕ ನೂತನ ವಿಮಾನ ನಿಲ್ದಾಣದಲ್ಲೇ ಲ್ಯಾಂಡ್ ಆಗಲಿದ್ದಾರೆ ಎಂದರು.
ಫೆ.27ರಂದು ಬಹುತೇಕ ಮಧ್ಯಾಹ್ನ 12.30ರ ವೇಳೆಗೆ ಪ್ರಧಾನಿಯವರ ವಿಮಾನ ಲ್ಯಾಂಡ್‌ ಆಗುವ ನಿರೀಕ್ಷೆಯಿದ್ದು, ಸಂಜೆ 4.30ರ ಒಳಗಾಗಿ ಎಲ್ಲ ಕಾರ್ಯಕ್ರಮಗಳನ್ನು ಮುಕ್ತಾಯಗೊಳಿಸುವ ಕುರಿತಾಗಿ ಯೋಚನೆಯಿದೆ. ಎಲ್ಲ ಉದ್ಘಾಟನೆ ಹಾಗೂ ಶಂಕು ಸ್ಥಾಪನಾ ಕಾರ್ಯಕ್ರಮಗಳು
ಒಂದೇ ಕಡೆಯಲ್ಲಿ ನಡೆಯಲಿವೆ ಎಂದರು.

ವಿಮಾನ ಹಾರಾಟ ಎಂದಿನಿಂದ?
ಇನ್ನು, ಫೆ.27ಕ್ಕೆ ವಿಮಾನ ನಿಲ್ದಾಣ ಉದ್ಘಾಟನೆಯಾದ 20-30 ದಿನಗಳ ಒಳಗಾಗಿ ದೈನಂದಿನ ಹಾರಾಟ ಆರಂಭವಾಗುವ ಸಾಧ್ಯತೆಯಿದೆ ಎಂದು‌ ಸಂಸದರು ತಿಳಿಸಿದ್ದಾರೆ.
ವಿಮಾನ ಕಂಪೆನಿಗಳ ಜೊತೆಯಲ್ಲಿ ಈಗಾಗಲೇ ಮಾತುಕತೆಗಳು ಅಂತಿಮ ಹಂತದಲ್ಲಿದ್ದು, ಗರಿಷ್ಠ ಒಂದು ತಿಂಗಳ ಒಳಗಾಗಿ ಹಾರಾಟ ಆರಂಭಿಸಿ, ಸಾರ್ವಜನಿಕರ ಸೇವೆಗೆ ಮುಕ್ತವಾಗಲಿದೆ. ಬಹುತೇಕ ಪ್ರಧಾನಿಯವರೇ ವಿಮಾನ ಹಾರಾಟದ‌ ದಿನಾಂಕವನ್ನು ಅಂದು ಘೋಷಣೆ ಮಾಡಲಿದ್ದಾರೆ ಎಂದು ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ಪ್ರಮುಖರಾದ ಗಿರೀಶ್ ಪಟೇಲ್, ಎಸ್.ಎಸ್. ಜ್ಯೋತಿ ಪ್ರಕಾಶ್, ಮೇಯರ್ ಶಿವಕುಮಾರ್, ಉಪಮೇಯರ್ ಲಕ್ಷ್ಮಿಶಂಕರ ನಾಯ್ಕ, ಕೆ.ವಿ.ಅಣ್ಣಪ್ಪ, ಶಿವರಾಜ್ ಇನ್ನಿತರರು ಇದ್ದರು.

Leave A Reply

Your email address will not be published.

error: Content is protected !!