ಶಿಕಾರಿಪುರ : ಶಿವಮೊಗ್ಗ ಜಿಲ್ಲೆಯ ಡಿಸಿಸಿ ಬ್ಯಾಂಕ್ (DCC Bank) ನೇಮಕಾತಿ ಸಂದರ್ಭದಲ್ಲಿ ಹೊರಡಿಸಿರುವ ಅಧಿಸೂಚನೆ ಪಾಲಿಸದೆ ನಿಯಮ ಉಲ್ಲಂಘಿಸಿದ ಕಾರಣ ಇಡೀ ಪ್ರಕ್ರಿಯೆ ಕುರಿತು ಐದು ವಾರದಲ್ಲಿ ತನಿಖೆ ನಡೆಸಿ ಸರಕಾರಕ್ಕೆ ವರದಿ ನೀಡುವಂತೆ ಹೈಕೋರ್ಟ್ (High Court) ಆದೇಶಿಸಿದೆ.
ಡಿಸಿಸಿ ಬ್ಯಾಂಕ್ ಪರೀಕ್ಷೆ ಸಂದರ್ಭದಲ್ಲಿ ನಿಯಮ ಪಾಲಿಸದೆ ಉಲ್ಲಂಘಿಸಲಾಗಿದೆ ಪ್ರಶ್ನೆ ಪತ್ರಿಕೆ ವಾಪಸ್ ಪಡೆದಿರುವುದು, ಹಾಜರಾಗದ ಅಭ್ಯರ್ಥಿ ಒಎಂಆರ್ ಶೀಟ್ ಕಿತ್ತು ತೆಗೆದಿರುವುದು ಸೇರಿದಂತೆ ಹಲವು ಉಲ್ಲಂಘನೆ ಕುರಿತು ಶಿಕಾರಿಪುರ ತಾಲ್ಲೂಕಿನಿಂದ ಪರೀಕ್ಷೆಗೆ ಹಾಜರಾಗಿದ್ದವರು ಹೈಕೋರ್ಟ್‌ನಲ್ಲಿ ಆಕ್ಷೇಪಣೆ ಸಲ್ಲಿಸಿದ್ದರು ಈ ಸಂಬಂಧಿಸಿದಂತೆ ಯಾರೂ ಯಾವುದೆ ಉತ್ತರ ನೀಡದೇ, ನೇಮಕಾತಿ ಮುಂದುವರೆಸಿದ್ದನ್ನು ಪ್ರಶ್ನಿಸಿ ನೇಮಕಾತಿಗೆ ಅರ್ಜಿ ಸಲ್ಲಿಸಿದ್ದ ಅಭ್ಯರ್ಥಿಗಳಾದ ಡಿ.ಮಂಜುನಾಥ್, ಜಿ.ಕೆ.ಆಕಾಶ್ ಹೈಕೋರ್ಟ್ ಮೊರೆ ಹೋಗಿದ್ದರು. ಫೆ.16ರಂದು ವಿಚಾರಣೆ ನಡೆಸಿದ ಕೋರ್ಟ್ ಸಮಗ್ರ ತನಿಖೆಗೆ ಆದೇಶಿಸಿದೆ.
ನೇಮಕಾತಿ ಅಧಿಸೂಚನೆ ಉಲ್ಲಂಘನೆ ಸೇರಿ ಯಾವುದೆ ಬಗೆಯ ಆಕ್ಷೇಪಣೆ ಇದ್ದರೂ ಅದನ್ನು ಶಿವಮೊಗ್ಗ ಜಿಲ್ಲಾ ಉಪನಿಬಂಧಕರಿಗೆ ಲಿಖಿತ ಅರ್ಜಿ ಮೂಲಕ ಒಂದು ವಾರದೊಳಗೆ ಸಲ್ಲಿಸಬೇಕು. ಕೋರ್ಟ್‌ಗೆ ಅರ್ಜಿ ಸಲ್ಲಿಸಿದವರನ್ನು ಬಿಟ್ಟು ಬೇರೆ ಯಾರೆ ಇದ್ದರೂ ತಮ್ಮ ದೂರನ್ನು ನೀಡುವುದಕ್ಕೆ ಅವಕಾಶ ನೀಡಲಾಗಿದೆ. ಭ್ರಷ್ಟಾಚಾರಕ್ಕೆ ಅವಕಾಶ ನೀಡದೆ ಅರ್ಹರಿಗೆ ಸ್ಥಾನ ಸಿಗುವುದಕ್ಕೆ ನ್ಯಾಯಾಲಯ ಅವಕಾಶ ಕಲ್ಪಿಸಿದ್ದು ಅದರ ಸದ್ಭಳಕೆ ಮಾಡಿಕೊಳ್ಳಬೇಕು ಎಂದು ಡಿ.ಮಂಜುನಾಥ್, ಆಕಾಶ್ ಮನವಿ ಮಾಡಿದ್ದಾರೆ.
ನೇಮಕಾತಿ ಪ್ರಕ್ರಿಯೆಯಲ್ಲಿ ಅಧಿಸೂಚನೆಯಲ್ಲಿ ತಿಳಿಸಿದಂತೆ ನಡೆದುಕೊಂಡಿಲ್ಲ ಅದನ್ನು ಪ್ರಶ್ನಿಸಿ ಜಿಲ್ಲಾಧಿಕಾರಿಗಳು, ಜಿಲ್ಲಾ ಸಹಕಾರಿ ಉಪನಿಬಂಧಕರು, ಸದಸ್ಯ ಕಾರ‍್ಯದರ್ಶಿ ನೇಮಕಾತಿ ಸಮಿತಿ ಇವರಿಗೆ ಪತ್ರ ಬರೆದು ಸೂಕ್ತ ಕ್ರಮಕ್ಕೆ ಒತ್ತಾಯಿಸಿದ್ದರೂ ಯಾವುದೆ ಪ್ರಯೋಜನ ಆಗಿರಲಿಲ್ಲ. ಸರಿ ಉತ್ತರ (ಕೀ ಆನ್ಸರ್)ಕ್ಕೆ ಆಕ್ಷೇಪಣೆ ಸಲ್ಲಿಸಿದ್ದರೂ ಅದಕ್ಕೂ ಯಾವುದೆ ಉತ್ತರ ನೀಡದೆ ನೇಮಕಾತಿ ಪ್ರಕ್ರಿಯೆ ಮುಂದುವರೆಸಿದ್ದರು ಅದಕ್ಕಾಗಿ ಹೈಕೋರ್ಟ್ ಮೊರೆ ಹೋಗಿದ್ದಾಗಿ ಮಂಜುನಾಥ್, ಆಕಾಶ್ ಹೇಳಿದರು.