ISI ಗುರುತಿನ ಉತ್ಪನ್ನಗಳಿಗೆ ಹೆಚ್ಚಿನ ಆದ್ಯತೆ ನೀಡಿ: ಅಮಿತ್ ರಾಯ್

0
208

ಚಿಕ್ಕಮಗಳೂರು: ಉದ್ದಿಮೆದಾರರು ಉತ್ಪನ್ನಗಳ ಗುಣಮಟ್ಟ ಕಾಯ್ದುಕೊಳ್ಳುವುದು ಬಹು ಮುಖ್ಯವಾಗಿದ್ದು, ಗುಣಮಟ್ಟ ಆಧರಿಸಿ ಭಾರತೀಯ ಮಾನಕ ಬ್ಯೂರೋ (ಬಿ.ಐ.ಎಸ್) ಉತ್ಪನ್ನಗಳಿಗೆ ಐ.ಎಸ್.ಐ ಮಾರ್ಕ್ ನೀಡುತ್ತದೆ. ಆದ್ದರಿಂದ ಗ್ರಾಹಕರು ಸಹ ಖರೀದಿಸುವಾಗ ಐ.ಎಸ್.ಐ ಗುರುತಿನ ಉತ್ಪನ್ನಗಳಿಗೆ ಆದ್ಯತೆ ನೀಡಬೇಕು ಎಂದು ಭಾರತೀಯ ಮಾನಕ ಬ್ಯೂರೋ ಬೆಂಗಳೂರು ಶಾಖೆ ನಿರ್ದೇಶಕ ಅಮಿತ್ ರಾಯ್ ಹೇಳಿದರು.

ನಗರದ ಗ್ರ್ಯಾಂಡ್ ಕೃಷ್ಣ ಹೋಟೆಲ್‍ನಲ್ಲಿ ನಡೆದ ಬಿ.ಐ.ಎಸ್ ಚಟುವಟಿಕೆಗಳು ಮತ್ತು ಗುಣಮಟ್ಟ ನಿಯಂತ್ರಣ ಆದೇಶಗಳ ಕುರಿತು ಜಾಗೃತಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ, ಬಿ.ಐ.ಎಸ್ ಶಾಸನಬದ್ಧ ಸಂಸ್ಥೆಯಾಗಿದ್ದು, ಕೇವಲ ಸರ್ಕಾರದ ಸ್ವಾಮ್ಯಕ್ಕೊಳಪಡದೇ, ತನ್ನದೇ ಕಾರ್ಯೋದ್ದೇಶಗಳಡಿ ಮಾರ್ಗಸೂಚಿಗಳನ್ನು ಅಳವಡಿಸಿಕೊಂಡು ಕಾರ್ಯ ನಿರ್ವಹಿಸುತ್ತದೆ ಎಂದರು.

ಬಿ.ಐ.ಎಸ್ ಹಾಗೂ ಕೈಗಾರಿಕೆಗಳ ನಡುವೆ ಸಂವಹನ ಅಂತರವನ್ನು ದೂರ ಮಾಡಿ ಬಿ.ಐ.ಎಸ್‍ನ ಚಟುವಟಿಕೆಗಳು ಹಾಗೂ ಭಾರತೀಯ ಮಾನಕಗಳ ಅನ್ವಯ ಐ.ಎಸ್.ಐ ಗುರುತನ್ನು ಪಡೆಯುವ ವಿಧಾನದ ಬಗ್ಗೆ ಅರಿವು ಮೂಡಿಸಲು ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಸಿದ್ಧರಾಜು ಮಾತನಾಡಿ, ಸಾಮಾಜಿಕ ಸೌಲಭ್ಯಗಳನ್ನು ಫಲಾನುಭವಿಗಳಿಗೆ ವಿತರಿಸುವಾಗ ಉಪಕರಣಗಳ ಗುಣಮಟ್ಟವನ್ನು ಪರೀಕ್ಷಿಸಿ ನಂತರ ವಿತರಿಸುವ ಕಾರ್ಯ ನಡೆಯಬೇಕು. ಆದ್ದರಿಂದ ಇಲಾಖೆಯ ಅಧಿಕಾರಿಗಳು ಐ.ಎಸ್.ಐ ಗುರುತಿನ ಬಗ್ಗೆ ತಿಳಿವಳಿಕೆ ಹೊಂದಿರಬೇಕು ಎಂದರು.

ಕೈಗಾರಿಕಾ ನೀತಿ ಅನ್ವಯ ಉತ್ಪನ್ನಗಳಿಗೆ ಐ.ಎಸ್.ಐ ಗುರುತು ಪಡೆಯುವವರಿಗೆ 1 ಲಕ್ಷದವರೆಗೆ ಶೇ.25 ರಷ್ಟು ನೋಂದಣಿ ಶುಲ್ಕವನ್ನು ಮರುಪಾವತಿಸಲಾಗುವುದು ಎಂದರು.

ಭಾರತೀಯ ಮಾನಕ ಬ್ಯೂರೋ ವಿಜ್ಞಾನಿ ಶ್ರೀನಿವಾಸ್ ಮಾತನಾಡಿ, ಬಿ.ಐ.ಎಸ್ ನಿಗದಿಪಡಿಸಿರುವ 380 ಉತ್ಪನ್ನ ಹಾಗೂ ಉಪಕರಣಗಳು ಕಡ್ಡಾಯವಾಗಿ ಐ.ಎಸ್.ಐ ಗುರುತು ಹೊಂದಿರಬೇಕು. ಇನ್ನುಳಿದ ಉತ್ಪನ್ನಗಳು ಸ್ವಯಂ ಪ್ರೇರಿತರಾಗಿ ಅರ್ಜಿ ಸಲ್ಲಿಸಿ ಐ.ಎಸ್.ಐ ಗುರುತು ಪಡೆಯಬಹುದು ಎಂದರು.

ಪ್ರಾತ್ಯಕ್ಷಿಕೆ ಮೂಲಕ ನೋಂದಣಿ ವಿಧಾನವನ್ನು ಸಂಕ್ಷಿಪ್ತವಾಗಿ ವಿವರಿಸಿದ ಅವರು, ಐ.ಎಸ್.ಐ ಗುರುತನ್ನು ಪಡೆಯಲು ಎರಡು ಆಯ್ಕೆಗಳಿದ್ದು, ನಿಗದಿಪಡಿಸಲಾದ ಪ್ರಯೋಗಾಲಯದಲ್ಲಿ ಗುಣಮಟ್ಟ ಪರೀಕ್ಷೆಗೆ ಒಳಪಟ್ಟ ಉತ್ಪನ್ನಗಳು ಸರಳೀಕೃತ ವಿಧಾನದ ಮೂಲಕ 30 ದಿನಗಳಲ್ಲಿ ಐ.ಎಸ್.ಐ ಗುರುತನ್ನು ಪಡೆಯಬಹುದು. ಪರೀಕ್ಷೆಗೆ ಒಳಪಡದ ಉತ್ಪನ್ನಗಳು ಸಾಮಾನ್ಯ ವಿಧಾನದ ಮೂಲಕ 90 ದಿನಗಳಲ್ಲಿ ಐ.ಎಸ್.ಐ ಗುರುತನ್ನು ಪಡೆಯಬಹುದು ಎಂದರು.

ಹೆಚ್ಚಿನ ಮಾಹಿತಿಗೆ ನರೇಂದ್ರ ರೆಡ್ಡಿ (ದೂ. ಸಂಖ್ಯೆ: 9176182868), ಶ್ರೀನಿವಾಸ್ (9441674904) ಇವರನ್ನು ಸಂಪರ್ಕಿಸಬಹುದು ಎಂದರು.

ಜಾಹಿರಾತು

LEAVE A REPLY

Please enter your comment!
Please enter your name here