ಸಾಗರ : ಪ್ರಸಿದ್ಧ ಜಾಮಿಯಾ ಮಸೀದಿಯ ಮಜ್ಲಿಸ್-ಇ-ಮುಂತಾಜಿಮಾ ಆಡಳಿತ ಮಂಡಳಿಯ ಆರ್ಥಿಕ ಲೆಕ್ಕಪತ್ರ ಹಾಗೂ ಆಡಳಿತಾತ್ಮಕ ನಿರ್ವಹಣೆ ಕುರಿತು ಸಾರ್ವಜನಿಕರಲ್ಲಿ ಮತ್ತು ಸಮುದಾಯದಲ್ಲಿ ತೀವ್ರ ಚರ್ಚೆಗಳು ಆರಂಭವಾಗಿವೆ. ಸಮಿತಿಯ ಮೇಲಿರುವ ದೂರು-ದುಮ್ಮಾನಗಳ ಹಿಂದಿನ ನೈಜ ಅಂಶಗಳು ಹೊರಬರಬೇಕಿದ್ದು, ಸಾರ್ವಜನಿಕ ಹಿತದೃಷ್ಟಿಯಿಂದ ಈ ಎಲ್ಲಾ ಬೆಳವಣಿಗೆಗಳ ಬಗ್ಗೆ ನಿಷ್ಪಕ್ಷಪಾತ ತನಿಖೆಯಾಗಬೇಕು ಎಂಬ ಕೂಗು ಬಲಗೊಂಡಿದೆ.
ಈ ಸಂಶಯಗಳನ್ನು ನಿವಾರಿಸಿ ಸತ್ಯಾಸತ್ಯತೆಯನ್ನು ಜನರ ಮುಂದಿಡುವ ಸಲುವಾಗಿ, ಸ್ಥಳೀಯ ಯುವ ಮುಖಂಡ ಹಾಗೂ ಸಾಮಾಜಿಕ ಹೋರಾಟಗಾರ ಜಮೀಲ್ ಸಾಗರ್ ಇಂದು (ನ.03ರ ಮಂಗಳವಾರ) ಜಾಮಿಯಾ ಮಸೀದಿ ಆಡಳಿತ ಕಚೇರಿಯ ಮುಂಭಾಗದಲ್ಲಿ ಏಕಾಂಗಿ ಧರಣಿ ನಡೆಸಲು ನಿರ್ಧರಿಸಿದ್ದಾರೆ.
ಪ್ರಮುಖ ಬೇಡಿಕೆಗಳು:
ನಿಷ್ಪಕ್ಷಪಾತ ತನಿಖೆ ಮುಗಿಯುವ ತನಕ ಮಸೀದಿಯ ಹಿಂದಿನ ಅಥವಾ ಹಾಲಿ ಸಮಿತಿಯ ಮಹಾಸಭೆಯನ್ನು (ಜನರಲ್ ಬಾಡಿ ಮೀಟಿಂಗ್) ಕರೆಯಬಾರದು.
ಸಂಬಂಧಪಟ್ಟ ವಕ್ಫ್ ಇಲಾಖೆಯ ಅಧಿಕಾರಿಗಳು ಖುದ್ದಾಗಿ ಸ್ಥಳಕ್ಕೆ ಬಂದು ಅಹವಾಲು ಸ್ವೀಕರಿಸಬೇಕು.
ತನಿಖೆ ವೇಳೆ ಆಡಳಿತ ಮಂಡಳಿ ಮೇಲಿನ ಆರೋಪಗಳು ಸುಳ್ಳೆಂದು ಸಾಬೀತಾದರೆ, ವೃಥಾ ಅಪಪ್ರಚಾರ ನಡೆಸಿ ಸಮಾಜದಲ್ಲಿ ಗೊಂದಲ ಹುಟ್ಟುಹಾಕಿದವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು.
ಸಂಪೂರ್ಣ ಶಾಂತಿಯುತವಾಗಿ ನಡೆಯಲಿರುವ ಈ ಸತ್ಯಾಗ್ರಹದ ಕುರಿತು ಶಿವಮೊಗ್ಗ ಜಿಲ್ಲಾ ವಕ್ಫ್ ಅಧಿಕಾರಿಗಳಿಗೆ ಈಗಾಗಲೇ ಲಿಖಿತ ಮಾಹಿತಿ ನೀಡಲಾಗಿದೆ. ಒಂದು ವೇಳೆ ಅಧಿಕಾರಿಗಳು ಸ್ಥಳಕ್ಕೆ ಬಾರದೆ ನಿರ್ಲಕ್ಷ್ಯ ವಹಿಸಿದರೆ, ಮುಂದಿನ ದಿನಗಳಲ್ಲಿ ಶಿವಮೊಗ್ಗದ ಜಿಲ್ಲಾ ವಕ್ಫ್ ಕಚೇರಿಯ ಮುಂದೆಯೇ ಪ್ರತಿಭಟನೆಯನ್ನು ತೀವ್ರಗೊಳಿಸುವುದಾಗಿ ಎಚ್ಚರಿಸಲಾಗಿದೆ. ಸಂಬಂಧಪಟ್ಟ ಇಲಾಖೆ ಕೂಡಲೇ ಮಧ್ಯಪ್ರವೇಶಿಸಿ ವಿವಾದವನ್ನು ಬಗೆಹರಿಸಬೇಕೆಂದು ಕೋರಲಾಗಿದೆ.

