ಬದುಕು ಇರುವುದು ಬಾಳುವುದಕ್ಕೆ ಬಳಲುವುದಕ್ಕಲ್ಲ ; ರಂಭಾಪುರಿ ಜಗದ್ಗುರುಗಳು

Written by malnadtimes.com

Published on:

N.R.PURA ; ಬದುಕಿಗೆ ಭಗವಂತ ಕೊಟ್ಟ ಕೊಡುಗೆ ಅಮೂಲ್ಯ. ಬದುಕು ಇರುವುದು ಸಂತಸಪಡಲು ಹೊರತು ಸಂಕಟಪಡಲು ಅಲ್ಲ. ಬದುಕು ಇರುವುದು ಬಾಳುವುದಕ್ಕೆ ಹೊರತು ಬಳಲುವುದಕ್ಕಲ್ಲ ಎಂದು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

WhatsApp Group Join Now
Telegram Group Join Now
Instagram Group Join Now

ಅವರು ಶುಕ್ರವಾರ ರಂಭಾಪುರಿ ಪೀಠದಲ್ಲಿ ಹುಣ್ಣಿಮೆ ದಿನ ಕಾರ್ತೀಕ ದೀಪೋತ್ಸವ ಹಾಗೂ ಕ್ಷೇತ್ರನಾಥ ಶ್ರೀ ವೀರಭದ್ರಸ್ವಾಮಿ ರಥೋತ್ಸವದ ಅಂಗವಾಗಿ ಜರುಗಿದ ಧರ್ಮ ಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.

ಜ್ಞಾನವೆಂಬ ಸಂಪತ್ತು ತಾಳ್ಮೆಯೆಂಬ ಆಯುಧ ಜೊತೆಗೆ ನಗುವಿನಂಥ ಶಕ್ತಿ ಹೊಂದಿರುವವರನ್ನು ಯಶಸ್ಸು ತಾನಾಗಿಯೇ ಬೆನ್ನತ್ತಿ ಬರುತ್ತದೆ. ಒಳ್ಳೆಯ ನಿರ್ಧಾರ ಅರ್ಧ ಗೆಲ್ಲಿಸಿದರೆ ಇನ್ನರ್ಧ ಪ್ರಯತ್ನ ಮತ್ತು ಪರಿಶ್ರಮ ಗೆಲ್ಲಿಸುತ್ತದೆ ಎಂಬುದನ್ನು ನೆನಪಿಡಬೇಕಾಗುತ್ತದೆ. ಸಲಹೆ ಕೊಡುವವರೆಲ್ಲರೂ ಇನ್ನೊಬ್ಬರಿಗೆ ಸಹಾಯ ಮಾಡುವುದಿಲ್ಲ. ಬಳಸಿಕೊಂಡವರನ್ನು ಮರೆತು ಬಿಡಬೇಕು. ಆದರೆ ಬೆಳೆಸಿದವರನ್ನು ಯಾವತ್ತೂ ಮರೆಯಬಾರದು. ಮನುಷ್ಯ ವಿಚಾರಗಳನ್ನು ಬಿತ್ತರಿಸಬೇಕೆ ಹೊರತು ಧ್ವನಿಯನ್ನಲ್ಲ. ಏಕೆಂದರೆ ಮಳೆ ನೀರಿನಿಂದ ಮರಗಳು ಬೆಳೆಯುತ್ತವೆ ಹೊರತು ಗುಡುಗು ಸಿಡಿಲಿನಿಂದಲ್ಲ. ಜೀವನದ ಕೆಟ್ಟ ಘಟನೆಗಳನ್ನು ಮರೆಯಬೇಕು. ಆದರೆ ಅದರಿಂದ ಕಲಿತ ಪಾಠವನ್ನು ಯಾವತ್ತೂ ಮರೆಯಬಾರದು. ಮನುಷ್ಯ ಎಷ್ಟೇ ಉನ್ನತ ಸ್ಥಾನ ಪಡೆದರೂ ದೊಡ್ಡ ಪದವಿಗಳನ್ನು ಪಡೆದರೂ ಮಾತನಾಡುವ ರೀತಿ ನೀತಿ ಮಾನವೀಯತೆ ಕಲಿಯದಿದ್ದರೆ ಮನುಷ್ಯ ಎಂದಿಗೂ ಆದರ್ಶ ವ್ಯಕ್ತಿಯಾಗಿ ಬಾಳಲಾರ. ಶ್ರೀ ಜಗದ್ಗುರು ರೇಣುಕಾಚಾರ್ಯರು ವೀರಶೈವ ಧರ್ಮದಲ್ಲಿ ಉದಾತ್ತ ಮಾನವೀಯ ಮೌಲ್ಯಗಳನ್ನು ಬೋಧಿಸಿದ್ದಾರೆ. ಕತ್ತಲೆಯಿಂದ ಬೆಳಕಿನೆಡೆಗೆ ಸಾಗುವುದೇ ದೀಪೋತ್ಸವ ಸಮಾರಂಭದ ಮೂಲ ಉದ್ದೇಶವಾಗಿದೆ. ದೀಪ ಹೊರಗಿನ ಕತ್ತಲೆ ಕಳೆದರೆ ಜ್ಞಾನದಿಂದ ಅಂತರಂಗದ ಕತ್ತಲೆ ಕಳೆಯಲು ಶ್ರೀ ಗುರುವೇ ಕಾರಣನಾಗಿದ್ದಾನೆ ಎಂದರು.

ಈ ಪವಿತ್ರ ಸಮಾರಂಭದಲ್ಲಿ ಕೊಟ್ಟೂರು ಯೋಗಿರಾಜೇಂದ್ರ ಶಿವಾಚಾರ್ಯರು, ಬೇರುಗಂಡಿ ಬೃಹನ್ಮಠದ ರೇಣುಕ ಮಹಂತ ಶಿವಾಚಾರ್ಯರು, ಬಿಳಕಿ ರಾಚೋಟೇಶ್ವರ ಶಿವಾಚಾರ್ಯರು, ತಾವರೆಕೆರೆ ಡಾ.ಅಭಿನವ ಸಿದ್ಧಲಿಂಗ ಶಿವಾಚಾರ್ಯರು, ಸಂಗೊಳ್ಳಿ ಗುರುಲಿಂಗ ಶಿವಾಚಾರ್ಯರು, ಹಾರನಹಳ್ಳಿ ಶಿವಯೋಗಿ ಶಿವಾಚಾರ್ಯರು, ತೆಂಡೆಕೆರೆ ಗಂಗಾಧರ ಶಿವಾಚಾರ್ಯರು, ಕಾರ್ಜುವಳ್ಳಿ ಸದಾಶಿವ ಶಿವಾಚಾರ್ಯರು, ಬೀರೂರು ರುದ್ರಮುನಿ ಶಿವಾಚಾರ್ಯರು ಪಾಲ್ಗೊಂಡು ನುಡಿ ನಮನ ಸಲ್ಲಿಸಿದರು.

ಶ್ರೀ ಪೀಠದ ಆಡಳಿತಾಧಿಕಾರಿ ಎಸ್.ಬಿ.ಹಿರೇಮಠ, ಸಂಪರ್ಕಾಧಿಕಾರಿ ಪ್ರಭುದೇವ ಕಲ್ಮಠ, ವೀರೇಶ ಪಾಟೀಲ, ಸಿದ್ಧು ಪಾಟೀಲ, ಶಶಿಧರ ಸುರಗಿಮಠ, ಲಿಂಗಸುಗೂರಿನ ವಾರದ ಮಲ್ಲಪ್ಪ, ಬಸವರಾಜ ನಂದಿಕೋಲಮಠ, ಆಲ್ದೂರು ರಾಜೇಶ ಚಿಕ್ಕಮಗಳೂರಿನ ಎಸ್.ಎಂ.ದೇವಣ್ಣಗೌಡ, ಪ್ರಭುಲಿಂಗ ಶಾಸ್ತಿç, ಕಡವಂತಿ ಹಣ್ಣೇಗೌಡರು, ಜಿ.ಪಂ.ಮಾಜಿ ಉಪಾಧ್ಯಕ್ಷ ಎಮ್.ಎಸ್.ಚನ್ನಕೇಶವ್, ಇಳೆಖಾನ್ ಉಮೇಶ, ಆಲ್ದೂರು ವೀರಶೈವ ಸಮಾಜದ ಅಧ್ಯಕ್ಷ ಮಹೇಶ್ ಮೊದಲಾದ ಗಣ್ಯರು ಉಪಸ್ಥಿತರಿದ್ದರು.

ಬೆಳಿಗ್ಗೆ ಕ್ಷೇತ್ರದ ಎಲ್ಲಾ ದೈವಗಳಿಗೆ ಕಾರ್ತೀಕ ದೀಪೋತ್ಸವದ ಅಂಗವಾಗಿ ವಿಶೇಷ ಪೂಜೆ ಜರುಗಿತು. ಚಿಕ್ಕಮಗಳೂರಿನ ತರಕಾರಿ ವ್ಯಾಪಾರಸ್ಥರಾದ ಶಾಂತಮ್ಮ ಮತ್ತು ಮಕ್ಕಳು ದಾಸೋಹ ಸೇವೆ ಸಲ್ಲಿಸಿದರು.

ಇದೇ ಸಂದರ್ಭದಲ್ಲಿ ಕ್ಷೇತ್ರನಾಥ ಶ್ರೀ ವೀರಭದ್ರಸ್ವಾಮಿ ರಥೋತ್ಸವ ಸಹಸ್ರಾರು ಭಕ್ತರ ಸಹಯೋಗದಲ್ಲಿ ವಿಜೃಂಭಣೆಯಿಂದ ಜರುಗಿತು.

Leave a Comment