ವಿದ್ಯಾರ್ಥಿನಿ ನಿಗೂಢ ಸಾವು ಪ್ರಕರಣ ; ವಿದ್ಯಾ ಸಂಸ್ಥೆಯ ಮುಖ್ಯಸ್ಥ ಪೊಲೀಸ್ ವಶಕ್ಕೆ

0 38

ಸಾಗರ : ಇಲ್ಲಿನ ವನಶ್ರೀ ವಸತಿ ವಿದ್ಯಾಲಯದ ವಿದ್ಯಾರ್ಥಿನಿ ತೇಜಸ್ವಿನಿ (13) ಸಾವಿನ ಪ್ರಕರಣ ಸಂಬಂಧ ಪೊಲೀಸರು ವಿದ್ಯಾಲಯದ ಮುಖ್ಯಸ್ಥ ವನಶ್ರೀ ಮಂಜಪ್ಪ (ಎಚ್‌.ಪಿ.ಮಂಜಪ್ಪ) ಅವರನ್ನು ಶನಿವಾರ ವಶಕ್ಕೆ ಪಡೆದಿದ್ದಾರೆ.

ಸೊರಬ ತಾಲ್ಲೂಕಿನ ಶಿವಪುರ ಗ್ರಾಮದ 8ನೇ ತರಗತಿ ವಿದ್ಯಾರ್ಥಿನಿ ತೇಜಸ್ವಿನಿ, ವಿದ್ಯಾಲಯಕ್ಕೆ ದಾಖಲಾದ 5 ದಿನಗಳಲ್ಲೇ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಳು. ಗುರುವಾರ ವಾಂತಿ ಮಾಡಿಕೊಂಡು ತೀವ್ರವಾಗಿ ಅಸ್ವಸ್ಥಗೊಂಡಿದ್ದ ಆಕೆಯನ್ನು ಶಾಲೆಯ ವಾಹನದಲ್ಲೇ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿ ಆಕೆ ಅಸುನೀಗಿದ್ದಳು.

ಸಾವಿನ ಕುರಿತು ಸಮಗ್ರ ತನಿಖೆ ನಡೆಸುವಂತೆ ಆಗ್ರಹಿಸಿ ವಿದ್ಯಾರ್ಥಿನಿಯ ಪೋಷಕರು ಹಾಗೂ ಶಿವಪುರ ಗ್ರಾಮಸ್ಥರು ಶನಿವಾರ ವರದಹಳ್ಳಿ ರಸ್ತೆಯಲ್ಲಿರುವ ವಿದ್ಯಾಲಯದ ಎದುರು ಪ್ರತಿಭಟನೆ ನಡೆಸಿದರು. ತಪ್ಪಿತಸ್ಥರನ್ನು ಬಂಧಿಸುವಂತೆ ಪಟ್ಟು ಹಿಡಿದರು. ಪ್ರತಿಭಟನಕಾರರು ವಿದ್ಯಾಲಯದ ಒಳಗೆ ನುಗ್ಗಲೂ ಮುಂದಾದರು. ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಪ್ರತಿಭಟನಕಾರರನ್ನು ತಡೆದರು. ವಿದ್ಯಾಲಯದ ಮುಖ್ಯಸ್ಥ ಮಂಜಪ್ಪ ಅವರನ್ನು ವಶಕ್ಕೆ ಪಡೆದು, ವಿಚಾರಣೆಗೆ ಒಳಪಡಿಸಿದರು.

‘ಐದು ದಿನಗಳ ಹಿಂದಷ್ಟೇ ಮಗಳನ್ನು ವಿದ್ಯಾಲಯಕ್ಕೆ ಸೇರಿಸಿದ್ದೆವು. ಅವಳಿಗೆ ಯಾವುದೇ ಆರೋಗ್ಯದ ಸಮಸ್ಯೆ ಇರಲಿಲ್ಲ. ದಿಢೀರನೆ ಆಕೆ ಮೃತಪಟ್ಟಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಪೊಲೀಸರು ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ ನಮಗೆ ನ್ಯಾಯ ಒದಗಿಸಿಕೊಡಬೇಕು’ ಎಂದು ತೇಜಸ್ವಿನಿ ಪಾಲಕರು ಒತ್ತಾಯಿಸಿದರು.

ತೇಜಸ್ವಿನಿ

‘ಕಾಲು ನೋವು ಇರುವುದಾಗಿ ತೇಜಸ್ವಿನಿ ಹೇಳಿದ್ದಳು. ಮಂಜಪ್ಪ, ಮುಲಾಮು ಹಚ್ಚುವ ನೆಪದಲ್ಲಿ ಆಕೆಯನ್ನು ತಮ್ಮ ಕೊಠಡಿಗೆ ಕರೆದುಕೊಂಡು ಹೋಗಿದ್ದಾರೆ. ಇದನ್ನು ವಿದ್ಯಾಲಯದ ಇತರ ವಿದ್ಯಾರ್ಥಿನಿಯರು ನೋಡಿದ್ದಾರೆ. ಬಾಲಕಿಯರು ತಂಗಿರುವ ವಸತಿ ವಿದ್ಯಾಲಯದಲ್ಲಿ ರಾತ್ರಿ ವೇಳೆ ಪುರುಷರು ಇರಲು ಅವಕಾಶ ಕಲ್ಪಿಸಿದ್ದಾದರೂ ಏಕೆ?’ ಎಂದು ಪ್ರತಿಭಟನಕಾರರು ಪ್ರಶ್ನಿಸಿದರು.

‘ಅಸ್ವಸ್ಥಗೊಂಡಾಗಲೇ ಪಾಲಕರಿಗೆ ವಿಷಯ ತಿಳಿಸದೆ, ಮೃತಪಟ್ಟ ನಂತರ ಮಾಹಿತಿ ನೀಡಿರುವುದು ಅನುಮಾನ ಮೂಡಿಸಿದೆ. ಮಂಜಪ್ಪ ಅವರು ಚಿಕಿತ್ಸೆಯ ನೆಪದಲ್ಲಿ ತೇಜಸ್ವಿನಿಗೆ ಬಲವಂತವಾಗಿ ಅಗಾಧ ಪ್ರಮಾಣದಲ್ಲಿ ನೀರು ಕುಡಿಸಿದ್ದಾರೆ. ಇದನ್ನೂ ವಿದ್ಯಾಲಯದ ಇತರ ವಿದ್ಯಾರ್ಥಿನಿಯರು ನೋಡಿದ್ದಾರೆ. ಆಕೆಗೆ ಲೈಂಗಿಕ ಕಿರುಕುಳ ನೀಡಿರುವ ಸಾಧ್ಯತೆ ಹೆಚ್ಚಿದೆ. ಈ ನಿಟ್ಟಿನಲ್ಲಿ ಪೊಲೀಸರು ಸಮಗ್ರ ತನಿಖೆ ನಡೆಸಬೇಕು’ ಎಂದು ಆಗ್ರಹಿಸಿದರು.

ಮಂಜಪ್ಪ ತಮ್ಮ ದೇಹದ ಖಾಸಗಿ ಭಾಗಗಳನ್ನು ಸ್ಪರ್ಶಿಸುವ ಮೂಲಕ ಲೈಂಗಿಕ ಕಿರುಕುಳ ನೀಡಿರುವುದಾಗಿ ವಿದ್ಯಾಲಯದ ಕೆಲ ವಿದ್ಯಾರ್ಥಿನಿಯರು ಪೊಲೀಸರಿಗೆ ದೂರಿದ್ದಾರೆ.

Leave A Reply

Your email address will not be published.

error: Content is protected !!