ಸಾಗರ : ತಾಲೂಕಿನ ಜೋಗದ ಹೆನ್ನಿ ಬಳಿ ವೃದ್ಧರೊಬ್ಬರ ಮೇಲೆ ಕರಡಿಯೊಂದು ದಾಳಿ ನಡೆಸಿದ್ದು, ಗಂಭೀರ ಗಾಯಗೊಂಡಿದ್ದಾರೆ.
ತಿಮ್ಮನಾಯ್ಕ್ (88) ಕರಡಿ ದಾಳಿಗೊಳಗಾಗಿದ್ದು ಇವರು ಎಂದಿನಂತೆ ಮಧ್ಯಾಹ್ನ ಸಮಯ ಕಟ್ಟಿಗೆ ತರಲೆಂದು ತೋಟಕ್ಕೆ ತೆರಳಿದ್ದಾರೆ. ತೋಟದಲ್ಲಿ ಕೆಲಸ ಮಾಡುತ್ತಿದ್ದಾಗ ಏಕಾಏಕಿ ಬಂದ ಕರಡಿಯೊಂದು ಮೈ ಮೇಲೆ ಎರಗಿದೆ. ಕೂಡಲೇ ಬಿಡಿಸಿಕೊಳ್ಳಲು ಎಷ್ಟೇ ಪ್ರಯತ್ನಿಸಿದರೂ ಆಗದೇ ಇದ್ದಾಗ, ಜೋರಾಗಿ ಕಿರುಚಿಕೊಂಡಿದ್ದಾರೆ. ಈ ವೇಳೆ ಕರಡಿ ಗಾಬರಿಯಾಗಿ ಓಡಿದೆ.
ವೃದ್ಧರ ಕಿರುಚಾಟ ಕೇಳುತ್ತಿದ್ದಂತೆ ಅಕ್ಕ ಪಕ್ಕದ ರೈತರು ಆಗಮಿಸಿದ್ದು, ತೀವ್ರ ಗಾಯಗೊಂಡಿದ್ದವರನ್ನು ಕೂಡಲೇ ಮಧುಗಿರಿ ಸಾಗರ ಉಪವಿಭಾಗೀಯ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿದ್ದಾರೆ. ಕರಡಿ ದಾಳಿಯಿಂದ ವೃದ್ಧ ತಿಮ್ಮನಾಯ್ಕ್ ಮುಖ, ಕಣ್ಣಿನ ಭಾಗ ಪೂರ್ತಿ ಹಾನಿ ಆಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಚಿರತೆ, ಕಾಡಾನೆ ಹಾವಳಿ ಹೆಚ್ಚಾಗುತ್ತಿರುವಾಗಲೇ ಈಗ ಕರಡಿ ದಾಳಿ ನಡೆಸುತ್ತಿರುವುದು ಗ್ರಾಮಸ್ಥರಲ್ಲಿ ಆತಂಕ ಹೆಚ್ಚಿದೆ.