ಅಂತೂ ಇಂತೂ ಬಂತು ಮಳೆ ತುಸು ತಂಪಾದಳು ಇಳೆ ; ರೈತರ ಮೊಗದಲ್ಲಿ ಮೂಡಿತು ಮಂದಹಾಸ
ರಿಪ್ಪನ್‌ಪೇಟೆ: ಸೋಮವಾರ ಮತ್ತು ಮಂಗಳವಾರ ದಿಢೀರ್ ಗುಡುಗು, ಮಿಂಚು, ಸಿಡಿಲಾರ್ಭಟದೊಂದಿಗೆ ಭಾರಿ ಮಳೆ ಸುರಿದು ಇಳೆ ತಂಪಾಗುವುದರೊಂದಿಗೆ ಚರಂಡಿಯಲ್ಲಿ ತುಂಬಿಕೊಂಡಿದ ಕಸ, ಕಡ್ಡಿಯನ್ನು ಸಂಪೂರ್ಣವಾಗಿ ಸ್ವಚ್ಚಗೊಳಿಸಿದೆ.

ಕಳೆದ ಜುಲೈ ತಿಂಗಳಲ್ಲಿ ಮುಂಗಾರು ಮಳೆಯಾಗಿ ಭತ್ತದ ಸಸಿ ಮಡಿ, ಮೆಕ್ಕೆಜೋಳ ಬಿತ್ತನೆ ಹೀಗೆ ಭತ್ತದ ಗದ್ದೆಗೆ ನಾಟಿಗಾಗಿ ತಯಾರಿಸಿಕೊಂಡು ಮಳೆಗಾಗಿ ಮುಗಿಲು ನೋಡುವಂತಾಗಿದ್ದಾಗ ಜುಲೈ ಅಂತ್ಯದಿಂದ ಆಗಸ್ಟ್ ಮೊದಲ ಮೂರ್ನಾಲ್ಕು ದಿನ ಮಳೆ ಸುರಿದು ರೈತರು ನಾಟಿ ಮಾಡಿಕೊಂಡು ಭತ್ತ ಕಾಳು ಕಟ್ಟುವ ಮುನ್ನವೇ ಮಳೆ ಮಾಯಾವಾಗಿ ತೀವ್ರ ಬರಗಾಲದ ವಾತಾವರಣ ಎದುರಾಗಿರುವಾಗಲೇ ಸೋಮವಾರ ಮತ್ತು ಮಂಗಳವಾರ ಸಂಜೆಯ ಸುಮಾರಿಗೆ ಮಳೆಯ ಮುನ್ಸೂಚನೆ ಕಂಡು ರೈತರ ಮೊಗದಲ್ಲಿ ಮಂದಹಾಸದ ನಗು ಕಾಣುವಂತಾಗಿದ್ದು ಗುಡುಗು, ಮಿಂಚು ಸಿಡಿಲಾರ್ಭಟದೊಂದಿಗೆ ಮಳೆಯಾಗಿ ರೈತರಲ್ಲಿ ಅರೆ ಜೀವ ಬಂದಂತಾಗಿದೆ.
ಕಾದ ಬಾಣಲೆಗೆ ನೀರು ಹಾಕಿದಂತಾಗಿದೆ:
ಕಳೆದ ಮೂರು ತಿಂಗಳಿಂದ ಮಳೆಯಿಲ್ಲದೆ ರೈತರು ಕಂಗಲಾಗುವ ಸ್ಥಿತಿಯಲ್ಲಿದ್ದು ಸೋಮವಾರ ಮತ್ತು ಮಂಗಳವಾರ ಸಂಜೆ ಬಂದ ಮಳೆಯಿಂದಾಗಿ ಕಾದ ಬಾಣಲೆಗೆ ನೀರು ಹಾಕಿದಂತಾಗಿದೆ ಎಂದು ಹಿರಿಯ ರೈತ ಮುಖಂಡ ಮುಡುಬ ಧರ್ಮಪ್ಪ, ರತೇಶ್ವರಪ್ಪಗೌಡ ಗವಟೂರು ಹೇಳಿ, ಅಂತೂ ಕಡೆಗಳಿಗೆಯಲ್ಲಾದರೂ ಮಳೆ ಬಂದು ನಮ್ಮ ಜೀವ ಉಳಿಸಿತಲ್ಲಾ ಎಂಬ ಸಮದಾನವನ್ನು ಮಾಧ್ಯಮದವರಲ್ಲಿ ಹಂಚಿಕೊಂಡರು.
ಭಾನುವಾರದ ದಿನವೇ ಬರಬೇಕಾಗಿದ್ದ ಈ ಮಳೆ ಬೇರೆ ಕಡೆಯಲ್ಲಿ ಸುರಿದಿದ್ದು ಮೂಗುಡ್ತಿ, ತಳಲೆ, ಬೆಳ್ಳೂರು, ಕಳಸೆ, ಹೆದ್ದಾರಿಪುರ, ಕಲ್ಲೂರು ಸುತ್ತಮುತ್ತ ಮಳೆಯಾಗಿತ್ತು. ಆದರೆ, ಸೋಮವಾರ ಮತ್ತು ಮಂಗಳವಾರ ಸಹ ಈ ಮೇಲ್ಕಂಡ ಗ್ರಾಮಗಳು ಸೇರಿದಂತೆ ರಿಪ್ಪನ್‌ಪೇಟೆ, ಕೆಂಚನಾಲ, ಮಾದಾಪುರ, ಆಲವಳ್ಳಿ, ಮಸರೂರು, ಬೆನವಳ್ಳಿ, ಅರಸಾಳು, ಮುಡುಬ, ಹಾರಂಬಳ್ಳಿ, ಮಳವಳ್ಳಿ, ಗವಟೂರು, ಬೆಳಕೋಡು, ಕರಿಗೆರಸು, ಮಲ್ಲಾಪುರ, ಕುಕ್ಕಳಲೇ, ಕೊಳವಳ್ಳಿ, ಗರ್ತಿಕೆರೆ, ಬಸವಾಪುರ, ಕೊಳವಂಕ, ಹಾರೋಹಿತ್ತಲು, ಕಡೆಗದ್ದೆ, ಹರತಾಳು, ಬಾಳೂರು, ನೆವಟೂರು, ಚಂದಳಾದಿಂಬ, ಕೋಡೂರು ಹೀಗೆ ಹಲವು ಕಡೆಯಲ್ಲಿ ಮಳೆಯಾಗಿದ್ದು ಬಿರುಗಾಳಿ ಸಹಿತ ಗುಡುಗು, ಸಿಡಿಲಿನಾರ್ಭಟಕ್ಕೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದ್ದು ಜನರು ಪರದಾಡುವಂತಾಗಿದೆ.