ಶರನ್ನವರಾತ್ರಿ ಆಯುಧ ಪೂಜೆಯೊಂದಿಗೆ ಸಂಪನ್ನ | ಆಯುಧ-ವಾಹನಗಳನ್ನು ನ್ಯಾಯೋಚಿತವಾಗಿ ಬಳಸಿ ; ಹೊಂಬುಜ ಶ್ರೀಗಳು

0 112

ರಿಪ್ಪನ್‌ಪೇಟೆ : ಆಯುಧ ಪೂಜೆಯ ಸಂಸ್ಕೃತಿ ಅನಾದಿ ಕಾಲದಿಂದಲೂ ಧಾರ್ಮಿಕ ಆಚರಣೆಯ ಅವಿಭಾಜ್ಯ ಅಂಗವಾಗಿದೆ. ಆಯುಧಗಳನ್ನು ರಾಜಮಹಾರಾಜರು ಪೂಜಿಸುವ ಮೂಲಕ ಯುದ್ಧಗಳಿಂದ ರಕ್ಷಿಸಲು ಪ್ರಾರ್ಥಿಸಿಕೊಳ್ಳುತ್ತಿದ್ದರು. ಆಯುಧಗಳ ಸದ್ಬಳಕೆ ಆಗಬೇಕಲ್ಲದೇ ಹಿಂಸಾಕೃತ್ಯಗಳಿಗೆ, ಯುದ್ಧಗಳಿಗೆ ಬಳಸುವುದು ನ್ಯಾಯೋಚಿತವಾಗಿರಬೇಕು ಎಂದು ಹೊಂಬುಜ ಜೈನ ಮಠದ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಗಳವರು ನವರಾತ್ರಿಯ ನವಮಿಯಂದು ಆಯುಧ ಪೂಜೆಯ ಪರಂಪರೆಯನ್ನು ವಿವರಿಸಿದರು.

ವೈಯುಕ್ತಿಕವಾಗಿ, ಸಮುದಾಯವನ್ನು ರಕ್ಷಿಸಬಲ್ಲ ಆಯುಧಗಳನ್ನು ಪೂಜಿಸುವ ಮೂಲಕ ಸ್ವರಕ್ಷಣೆ, ದೇಶರಕ್ಷಣೆಯ ಮಹತ್ವ ತಿಳಿಸಬೇಕು. ವಾಹನಗಳು, ಯಂತ್ರಗಳು ತಂತ್ರಜ್ಞಾನದ ಆವಿಷ್ಕಾರ ಆಗಿದ್ದು ಸುರಕ್ಷಿತವಾಗಿ ಅಪಾಯ ತಂದೊಡ್ಡದಿರಲಿ ಎಂಬ ಜಾಗೃತ ಪ್ರಜ್ಞೆಯಿರಲಿ ಎಂದು ನವರಾತ್ರಿಯ ಆಧ್ಯಾತ್ಮಿಕ ಚಿಂತನೆಯನ್ನು ಜೀವನದಲ್ಲಿ ಅನುಷ್ಠಾನ ಮಾಡೋಣ ಎಂದು ಶುಭಾಶೀರ್ವಾದ ನೀಡಿದರು.


ಪ್ರಾತಃಕಾಲ ಐಶ್ವರ್ಯ ಆನೆಯೊಂದಿಗೆ ಅಗ್ರೋಧಕವನ್ನು ಕುಮದ್ವತಿ ತೀರ್ಥದಿಂದ ವಾದ್ಯಗೋಷ್ಠಿಯೊಂದಿಗೆ ತರಲಾಯಿತು. ಶ್ರೀಕ್ಷೇತ್ರದ ಶ್ರೀ ಪಾರ್ಶ್ವನಾಥ ಸ್ವಾಮಿ, ಶ್ರೀ ನೇಮಿನಾಥ ಸ್ವಾಮಿ, ವರಪ್ರಸಾದಪ್ರದಾಯಿನಿ ಶ್ರೀ ಪದ್ಮಾವತಿ ದೇವಿಯವರಿಗೆ ಇಷ್ಟಾರ್ಥ ಉಡಿ ತುಂಬಿಸಿ, ಪ್ರಾರ್ಥನೆ ಸಲ್ಲಿಸಿದ ಭಕ್ತ ಸಮೂಹವು ನವರಾತ್ರಿಯ ನವಮಿಯಂದು ಧನ್ಯರಾದರು. ಶ್ರೀಮಠದ ವಾಹನ, ಕೃಷಿ ಉಪಕರಣಗಳನ್ನು ಪೂಜಿಸಲಾಯಿತು.

ಸೇವಾಕರ್ತೃರಾದ ದೆಹಲಿಯ ರೇಣು ಜೈನ್ ಶ್ರೀ ಕೆ.ಕೆ. ಜೈನ್ ಕುಟುಂಬದವರನ್ನು ಪೂಜ್ಯ ಶ್ರೀಗಳವರು ಗೌರವಿಸಿ ಹರಸಿದರು. ರಾತ್ರಿ ಸಂಗೀತ, ಭಜನೆ, ಸಾಮೂಹಿಕ ಜಿನನಾಮ ಸ್ತುತಿಯೊಂದಿಗೆ ಸ್ವಸ್ತಿಶ್ರೀಗಳ ಪಾವನ ಸಾನಿಧ್ಯದಲ್ಲಿ ಭಕ್ತವೃಂದದವರು ಭಾಗಿಯಾದರು.

Leave A Reply

Your email address will not be published.

error: Content is protected !!