ಶಿವಜ್ಞಾನದ ಅರಿವು ಜೀವನ್ಮುಕ್ತಿಗೆ ಸೋಪಾನ ; ಶ್ರೀ ರಂಭಾಪುರಿ ಜಗದ್ಗುರುಗಳು
ಭದ್ರಾವತಿ : ಶಿವಶಕ್ತಿಯಿಂದ ಈ ಜಗತ್ತು ನಿರ್ಮಾಣಗೊಂಡಿದೆ. ಶಕ್ತಿಯುಕ್ತ ಶಿವನ ಪೂಜೆಯಿಂದ ಸಕಲ ದೇವಾನು ದೇವತೆಗಳ ಪೂಜೆಯಿಂದ ಸಿಗುವ ಸತ್ಫಲ ಪ್ರಾಪ್ತವಾಗುವುದೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ಮಂಗಳವಾರ ತಾಲೂಕಿನ ಕೊಪ್ಪದ ಶ್ರೀ ವೀರಭದ್ರೇಶ್ವರ ಸ್ವಾಮಿಗೆ ರುದ್ರಾಭಿಷೇಕ ಅಂಗವಾಗಿ ಜರುಗಿದ ಧರ್ಮ ಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ಬ್ರಹ್ಮ ವಿಷ್ಣು ಮೊದಲ್ಗೊಂಡು ಸಕಲ ದೇವಾನು ದೇವತೆಗಳು ಶಿವನನ್ನು ಪೂಜಿಸಿ ಇಷ್ಟಾರ್ಥ ಫಲಗಳನ್ನು ಪಡೆದಿದ್ದಾರೆ. ಬ್ರಹ್ಮ ಸೃಷ್ಟಿ ಮಾಡುವ ವಿಷ್ಣು ರಾಕ್ಷಸ ಸಮೂಹ ನಾಶ ಮಾಡುವ ಮತ್ತು ಕಳೆದು ಹೋದ ಸಂಪತ್ತು ಪಡೆಯಲು ಇಂದ್ರ ಶಿವನನ್ನು ಪೂಜಿಸಿದ ಇತಿಹಾಸವನ್ನು ಕಾಣಬಹುದು. ಜೀವ ಜಗತ್ತಿಗೆ ಕಾರಣೀಭೂತನಾದ ಭಗವಂತ ಅವ್ಯಕ್ತವಾಗಿದ್ದಾನೆ. ಶಿವನ ಸಾಕಾರ ರೂಪ ಯಾವುದಾದರೂ ಇದ್ದರೆ ಅದುವೇ ಗುರು ರೂಪ. ಅರಿವು ಆದರ್ಶಗಳನ್ನು ಬೆಳೆಸಲು ಗುರುವೇ ಮೂಲ. ಗುರು ಭಕ್ತಿಯಿದ್ದರೆ ಶಿವನೊಲುಮೆ ದೊರಕುತ್ತದೆ. ನಂಬಿಗೆ ವಿಶ್ವಾಸವನ್ನು ದೇವರಲ್ಲಿ ಇಟ್ಟರೆ ಬದುಕಿನಲ್ಲಿ ಶಾಂತಿ ನೆಮ್ಮದಿ ದೊರಕುವುದು. ವೀರಶೈವ ಧರ್ಮದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯರು ಮೌಲ್ಯಾಧಾರಿತ ಬದುಕಿಗೆ ಕೊಟ್ಟ ವಿಚಾರ ಧಾರೆಗಳನ್ನು ಎಂದಿಗೂ ಮರೆಯಬಾರದು. ಶ್ರೀ ರಂಭಾಪುರಿ ಪೀಠದ ಕ್ಷೇತ್ರನಾಥನಾಗಿ ಪೂಜೆಗೊಳ್ಳುವ ಶ್ರೀ ವೀರಭದ್ರಸ್ವಾಮಿ ಕೊಪ್ಪ ಗ್ರಾಮದಲ್ಲಿ ನೆಲೆಸಿರುವುದು ನಿಮ್ಮೆಲ್ಲರ ಸುಕೃತವೆಂದರು.

ಕವಲೇದುರ್ಗದ ಮರುಳಸಿದ್ಧೇಶ್ವರ ಶ್ರೀಗಳು, ಕಡೇನಂದಿಹಳ್ಳಿ-ದುಗ್ಲಿ ರೇವಣಸಿದ್ಧೇಶ್ವರ ಶ್ರೀಗಳು, ಚನ್ನಗಿರಿ ಕೇದಾರ ಶಿವಶಾಂತವೀರ ಶ್ರೀಗಳು, ಹಾರನಹಳ್ಳಿ ಶಿವಯೋಗಿ ಶ್ರೀಗಳು ಪಾಲ್ಗೊಂಡು ನುಡಿ ನಮನ ಸಲ್ಲಿಸಿದರು.
ಮೈದೊಳಲು ಹಾಲಯ್ಯ ಶಾಸ್ತ್ರಿಗಳು ಪ್ರಾಸ್ತಾವಿಕವಾಗಿ ಮಾತನಾಡಿದರು.
ಯಡೇಹಳ್ಳಿ ಕಿರಣಕುಮಾರ ಸ್ವಾಗತಿಸಿದರು. ಹೊಳೆಹೊನ್ನೂರು ವೀರಶೈವ ಸಮಾಜದ ಅಧ್ಯಕ್ಷ ಕಾಂತರಾಜ್ ಭಕ್ತಿ ಕಾಣಿಕೆ ಸಮರ್ಪಿಸಿದರು. ಶಿವಮೊಗ್ಗದ ಶಾಂತಾ ಆನಂದ ನಿರೂಪಿಸಿದರು. ಸಮಾರಂಭದ ನಂತರ ಅನ್ನ ದಾಸೋಹ ಜರುಗಿತು.