ಸಾಲಬಾಧೆ ತಾಳಲಾರದೆ ದಂಪತಿ ನೇಣಿಗೆ ಶರಣು ; ಅನಾಥರಾದ ಪುಟ್ಟ ಮಕ್ಕಳು

0 14

ಭದ್ರಾವತಿ: ಇಲ್ಲಿನ ಜನ್ನಾಪುರದಲ್ಲಿ ಸಾಲಬಾಧೆ ತಾಳಲಾರದೆ ದಂಪತಿ ನೇಣಿಗೆ ಶರಣಾದ ಘಟನೆ ವರದಿಯಾಗಿದೆ.

ಮಧು(27), ಮೋನಿಕಾ (21) ಮೃತ ದಂಪತಿ ಆಗಿದ್ದಾರೆ. ಹಣದ ತುರ್ತು ಅವಶ್ಯಕತೆ ಇದ್ದ ಕಾರಣ ಮೈಕ್ರೇ ಫೈನಾನ್ಸ್ ಮೂಲಕ 2 ಲಕ್ಷ ಸಾಲ ಪಡೆದಿದ್ದರು. ಹೀಗೆ ಪಡೆದ ನಂತ್ರ ಫೈನಾನ್ಸ್ ಅಧಿಕಾರಿಗಳು, ಸಿಬ್ಬಂದಿ ಹಣ ವಾಪಾಸ್ ಕಟ್ಟುವಂತೆ ಪೀಡಿಸಿದ್ದಾರೆ. ಈ ಕಾರಣಕ್ಕಾಗಿಯೇ ದಂಪತಿಗಳಿಬ್ಬರು ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವುದಾಗಿ ತಿಳಿದು ಬಂದಿದೆ.

ಪದವಿ ಶಿಕ್ಷಣ ಪಡೆದು ಕೂಲಿ ಕೆಲಸವನ್ನು ಮಧು ಮಾಡುತ್ತಿದ್ದರು. ಫೈನಾನ್ಸ್ ನಿಂದ ಪಡೆದ ಸಾಲಕ್ಕೆ ಸರಿಯಾದ ಸಮಯಕ್ಕೆ ಬಡ್ಡಿ ಕೂಡ ಪಾವತಿಸಿದ್ದರು ಎನ್ನಲಾಗಿದೆ. ಹೀಗಿದ್ದೂ ಪದೇ ಪದೇ ಪಡೆದ ಹಣ ಕಟ್ಟು ಎಂಬುದಾಗಿ ಪೀಡಿಸಿದ ಕಾರಣ ಭದ್ರಾವತಿಯ ಜನ್ನಾಪುರದಲ್ಲಿ ಬುಧವಾರ ರಾತ್ರಿ ಎನ್ ಟಿಬಿ ಕಚೇರಿಯ ಬಳಿಯ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.

ಬೆಳಿಗ್ಗೆ 8 ಗಂಟೆಯಾದರೂ ಮನೆಯಿಂದ ಯಾರೂ ಹೊರಬಾರದ ಹಿನ್ನಲೆಯಲ್ಲಿ ಅನುಮಾನಗೊಂಡು ಸ್ಥಳೀಯರು ಮನೆ ಬಾಗಿಲು ತಟ್ಟಿದರೂ ಸ್ಪಂದಿಸಿಲ್ಲ. ಹೀಗಾಗಿ ನ್ಯೂ ಟೌನ್ ಠಾಣೆಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಬಂದು ಬಾಗಿಲು ಹೊಡೆದು ನೋಡಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ.

ಫೈನಾನ್ಸ್ ಕಿರುಕುಳದಿಂದ ದಂಪತಿ ಆತ್ಮಹತ್ಯೆಗೆ ಶರಣಾದ್ರೇ, ಅವರ 3 ವರ್ಷ ಹಾಗೂ 9 ತಿಂಗಳ ಗಂಡು ಮಕ್ಕಳು ಈಗ ತಂದೆ-ತಾಯಿಗಳಿಲ್ಲದೇ ಅನಾಥರಾಗಿದ್ದಾರೆ.

Leave A Reply

Your email address will not be published.

error: Content is protected !!