ಆಧಾರ್ ತಿದ್ದುಪಡಿಗಾಗಿ ತಾಲೂಕು ಕಚೇರಿಯಲ್ಲಿ ಸರತಿ ಸಾಲಿನಲ್ಲಿ ಕಾದು ಕಾದು ಹೈರಾಣಾದ ಜನ

0 0

ಹೊಸನಗರ : ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಅವಧಿಯಲ್ಲಿ ದೇಶದ ಎಲ್ಲಾ ಸತ್ಪ್ರಜೆಗಳಿಗೂ ತಮ್ಮ ವಾಸ ಸ್ಥಳ ದೃಢೀಕರಿಸಲು ಆಧಾರ್ ಕಾರ್ಡ್ ಮಾಡಿಸುವ ವ್ಯವಸ್ಥೆ ಜಾರಿಗೆ ತರಲಾಗಿತ್ತು. ಇದನ್ನು ಆಗಿನ ಕಾಲದಲ್ಲಿ ಬಿಜೆಪಿ ಪಕ್ಷದವರು ದೇಶದಾದ್ಯಂತ ಪ್ರತಿಭಟನೆ ಹೋರಾಟ ನಡೆಸುವುದರ ಮೂಲಕ ವಿರೋಧ ವ್ಯಕ್ತಪಡಿಸಿದ್ದರು. ಆದರೀಗ ಅದನ್ನೆ ಬೆಂಬಲಿಸಿ ಯಾವುದೇ ವಿಷಯಕ್ಕೂ ಸಂಬಂಧಿಸಿದಂತೆ ಎಲ್ಲರ ಬಳಿಯಲ್ಲೂ ಕಡ್ಡಾಯವಾಗಿ ಆಧಾರ್ ಕಾರ್ಡ್ ಇರುವ ವ್ಯವಸ್ಥೆ ಮುಂದುವರೆಸಿದ್ದು, ಆಧಾರ್ ಕಾರ್ಡ್‌ಗೆ ಪಾನ್ ಕಾರ್ಡ್, ಬ್ಯಾಂಕ್ ಖಾತೆ ಸಂಖೆಗೆ ಆಧಾರ್ ಕಾರ್ಡ್, ಪಡಿತರ ಚೀಟಿಗೆ ಆಧಾರ್ ಕಾರ್ಡ್ ಹೀಗೆ ವಿವಿಧ ದಾಖಲೆಗಳಿಗೆ ಸಂಪರ್ಕಿಸುವ ವ್ಯವಸ್ಥೆ ಜಾರಿಗೆ ತಂದಿದೆ. ಇದರ ಉದ್ದೇಶ ತೆರಿಗೆದಾರರನ್ನು ಗುರುತಿಸುವುದಕ್ಕೋ ಅಥವಾ ಇನ್ಯಾವ ವಿಚಾರಕ್ಕೋ ತಿಳಿಯದಾಗಿರುವ ಸಂಗತಿ.


ಆದರೀಗ ಇದು ಸಾರ್ವಜನಿಕರಿಗೆ ಬೇಸರತರಿಸುವ ವಿಷಯವಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜನತೆಗೆ ಸೌಲಭ್ಯ ಕಲ್ಪಿಸಲು ಹಲವಾರು ಯೋಜನೆಗಳನ್ನು ಜಾರಿಗೆ ತರಲಾಗುತ್ತಿದ್ದು, ಈ ಆಧಾರ್ ಕಾರ್ಡ್‌ಗಳಲ್ಲಿ ಮೊಬೈಲ್‌ ನಂಬರ್ ಸೇರ್ಪಡೆ, ಮೊಬೈಲ್ ನಂಬರ್ ಬದಲಾವಣೆ, ಹೆಸರು ಬದಲಾವಣೆ, ಇನ್ಶಿಯಲ್ ಬದಲಾವಣೆ, ವಿಳಾಸ ಬದಲಾವಣೆ ಹೀಗೆ ಹಲವು ರೀತಿಯ ಬದಲಾವಣೆಗೆ ಸೇವಾಸಿಂಧು, ಗ್ರಾಮ ಒನ್, ಕರ್ನಾಟಕ ಒನ್ ಇದ್ಯಾವುದರಲ್ಲೂ ಆಗಲಿಲ್ಲವೆಂದಾದರೆ ತಾಲ್ಲೂಕು ಕಛೇರಿಗೆ ಅಲೆದಾಡುವ ವ್ಯವಸ್ಥೆ ಸುಸಜ್ಜಿತವಾಗಿ ನಡೆಯುತ್ತಿರುವ್ಯದರಿಂದ ಜನ ಸಾಮಾನ್ಯರು ಸರ್ಕಾರಗಳಿಗೆ ಹಿಡಿ ಶಾಪ ಹಾಕುತ್ತಿರುವುದಲ್ಲಿ ಸಂದೇಹವಿಲ್ಲ.


ಹೌದು, ಹೊಸನಗರ ತಾಲ್ಲೂಕಿನ ತಾಲ್ಲೂಕು ಕಛೇರಿಯಲ್ಲಿ ರೈತರು, ಕೂಲಿಕಾರ್ಮಿಕರು, ಜನಸಾಮಾನ್ಯರು ತಮ್ಮ ತಮ್ಮ ಆಧಾರ್ ಕಾರ್ಡ್ ತಿದ್ದುಪಡಿ ಮಾಡಿಸಿಕೊಳ್ಳಲು ತಿಂಡಿ ಊಟ ಬಿಟ್ಟು ಬಿಸಿಲು ಮಳೆ ಲೆಕ್ಕಿಸದೆ ಸರತಿ ಸಾಲಿನಲ್ಲಿ ಕಳೆದೆರಡು ದಿನಗಳಿಂದ ಬೆಳಿಗ್ಗೆ 8-00 ಗಂಟೆಯಿಂದ ಸಂಜೆ 6-00 ಗಂಟೆಯವರೆಗೆ ಕಾದು ಕಾದು ಹೈರಾಣಾಗಿ ಮನೆಗೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ.

ಮುಂದಿನ ಜನುಮವೇನಾದರೂ ಮಾನವನಾಗಿ ಹುಟ್ಟಿದರೆ ತನಗೂ ಆಧಾರ್ ಕಾರ್ಡ್ ಪಡೆಯಲು ಸರತಿ ಸಾಲಿನಲ್ಲಿ ನಿಲ್ಲುವಂತಾಗಬಹುದು. ಆದ್ದರಿಂದ ಈ ಜನ್ಮದಲ್ಲಿಯೇ ಒಂದು ಆಧಾರ್ ಕಾರ್ಡ್ ಪಡೆದುಕೊಳ್ಳುತ್ತೇನೆಂದು ಹಸುವೊಂದು ತಾಲ್ಲೂಕು ಕಛೇರಿಯೊಳಗೆ ಹಿಂದಿನ ದ್ವಾರದಿಂದ ತಹಶೀಲ್ದಾರ್ ಕೊಠಡಿ ಎದುರಿಗೆ ಸರತಿ ಸಾಲಿನಲ್ಲಿ ನಿಂತಿದ್ದ ಜನರ ಬಳಿ ತೆರಳಿದ ದೃಶ್ಯ ಇಂದು ತಾಲ್ಲೂಕು ಕಛೇರಿಯಲ್ಲಿ ಕಂಡುಬಂದಿತು.

ಈ ಮೊದಲು ಹೊಸ ಆಧಾರ್ ಕಾರ್ಡ್ ಮಾಡಿಸಲು ಮೊಬೈಲ್ ನಂಬರ್ ಸೇರಿಸುವುದು ಅಥವಾ ಬದಲಾಯಿಸುವುದನ್ನು ಆಯಾಯ ತಾಲ್ಲೂಕು ಕಛೇರಿಗಳಿಗೆ ನೀಡಲಾಗಿತ್ತು. ಇದನ್ನು ಹೊರತು ಪಡಿಸಿ ಉಳಿದೆಲ್ಲಾ ತಿದ್ದುಪಡಿಗೆ ಗ್ರಾಹಕ ಸೇವಾ ಕೇಂದ್ರಗಳಿಗೆ ಅವಕಾಶ ಕಲ್ಪಿಸಲಾಗಿತ್ತು. ಕಳೆದ ರಾಜ್ಯ ಬಿಜೆಪಿ ಸರ್ಕಾದ ಅವಧಿಯ ಸರ್ಕಾರದಲ್ಲಿ ಇದನ್ನ ಕೈ ಬಿಡಲಾಗಿದ್ದರ ಪರಿಣಾಮ ರೈತರು, ಕೂಲಿಕಾರ್ಮಿಕರು, ಜನ ಸಾಮಾನ್ಯರು ತಾಲ್ಲೂಕು ಕಛೇರಿಗಳಲ್ಲಿ ಸರತಿ ಸಾಲಿನಲ್ಲಿ ನಿಲ್ಲುವ ಅಥವಾ ಅಲೆದಾಡುವ ಸ್ಥಿತಿ ನಿರ್ಮಾಣವಾಗಿದ್ದು, ಏನೇ ಆದ್ದರೂ ಜನಸಾಮಾನ್ಯರಿಗೆ ಇದು ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದೆ ಎಂದರೆ ತಪ್ಪಾಗಲಾರದು.


ವರದಿ : ಪುಷ್ಪಾಜಾಧವ್ ಹೊಸನಗರ

Leave A Reply

Your email address will not be published.

error: Content is protected !!