ಉದ್ಘಾಟನೆಗೂ ಮುನ್ನವೇ ಹಪ್ಪಳದಂತೆ ಕಿತ್ತು ಬಂತು 30 ಲಕ್ಷ ರೂ. ವೆಚ್ಚದ ಡಾಂಬರ್ ರಸ್ತೆ !

0 0

ಹೊಸನಗರ: ತಾಲೂಕಿನ ಮಾರುತಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೆಲಗಳಲೆ ಗ್ರಾಮದಲ್ಲಿ ಇತ್ತೀಚೆಗಷ್ಟೇ ನಿರ್ಮಾಣಗೊಂಡಿದ್ದ ಡಾಂಬರು ರಸ್ತೆ ಕಾಮಗಾರಿ ಕಳಪೆ ಗುಣಮಟ್ಟದಿಂದ ಕೂಡಿದೆ ಎನ್ನುವ ಆರೋಪ ಕೇಳಿಬಂದಿದೆ.


ವಿಜಾಪುರ ಮುಖ್ಯರಸ್ತೆಯಿಂದ ಮುರುಗೇಶಪ್ಪ ಅವರ ಮನೆಯವರೆಗೆ ರೂ. 30 ಲಕ್ಷ ವೆಚ್ಚದಲ್ಲಿ ರಸ್ತೆ ಡಾಂಬರೀಕರಣ ಕಾಮಗಾರಿ ಇತ್ತೀಚೆಗೆ ನಡೆದಿತ್ತು. ಸ್ವತಃ ಶಾಸಕ ಎಚ್.ಹಾಲಪ್ಪ ಅವರೇ ಡಿಸೆಂಬರ್ 10ರಂದು ಕಾಮಗಾರಿಯ ಗುದ್ದಲಿ ಪೂಜೆ ನೆರವೇರಿಸಿದ್ದರು. ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಅಧಿಕೃತವಾಗಿ ಉದ್ಘಾಟನೆಗೊಳ್ಳುವುದು ಬಾಕಿ ಇದೆ.
ಆದರೆ ಈ ನಡುವೆ ಕಾಮಗಾರಿಯ ಗುಣಮಟ್ಟದ ಕುರಿತು ಗ್ರಾಮಸ್ಥರು ಅಪಸ್ವರ ಎತ್ತಿದ್ದಾರೆ. ಡಾಂಬರೀಕರಣ ಕಾಮಗಾರಿಯು ಕಳಪೆ ಗುಣಮಟ್ಟದಿಂದ ಕೂಡಿದೆ. ಇಲಾಖೆಯ ನಿಯಮಾನುಸಾರ ಕಾಮಗಾರಿ ನಡೆಸಿಲ್ಲ. ಡಾಂಬರಿನ ಪದರಗಳು ಈಗಲೇ ಎದ್ದು ಬರುತ್ತಿವೆ. ಬರಿಗೈಯಲ್ಲಿ ತಪಾಸಣೆ ಮಾಡಿದರೆ ಡಾಂಬರು ಜಲ್ಲಿ ಹಪ್ಪಳದಂತೆ ಕಿತ್ತು ಬರುತ್ತಿದೆ. ಇನ್ನು ವಾಹನಗಳು ಓಡಾಡಿದರೆ, ರಸ್ತೆ ಬಾಳಿಕೆ ಬರುವ ಸಾಧ್ಯತೆಯೇ ಇಲ್ಲ. ಸಾರ್ವಜನಿಕರ ಹಣವನ್ನು ಪೋಲು ಮಾಡಲಾಗಿದೆ. ಗುತ್ತಿಗೆದಾರರು ಕಾಟಾಚಾರದ ಕೆಲಸ ಮಾಡಿ ಹೋಗಿದ್ದಾರೆ. ಸಂಬಂಧಪಟ್ಟ ಇಲಾಖೆಯ ಇಂಜಿನಿಯರ್ ಕೂಡಾ ಮುತುವರ್ಜಿ ವಹಿಸುವಲ್ಲಿ ವಿಫಲರಾಗಿದ್ದಾರೆ ಎಂದು ಆಪಾದಿಸಿದ್ದಾರೆ.

ಕೂಡಲೇ ಕಳೆಪೆ ಕಾಮಗಾರಿ ನಿರ್ವಹಿಸಿದ ಗುತ್ತಿಗೆದಾರರ ವಿರುದ್ಧ ಹಾಗೂ ಗುಣಮಟ್ಟವನ್ನು ಗಮನಿಸದ ಇಂಜಿನಿಯರ್ ವಿರುದ್ಧ ಕ್ರಮ ಕೈಗೊಳ್ಳಬೇಕು. ರಸ್ತೆಯನ್ನು ಮರು ಡಾಂಬರೀಕರಣ ನಡೆಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

Leave A Reply

Your email address will not be published.

error: Content is protected !!