ಎಂಪಿಎಂ ಅಧಿಕಾರಿಗಳ ದರ್ಪಕ್ಕೆ ನಿರ್ಮಾಣ ಹಂತದಲ್ಲಿದ್ದ ಮನೆ ಧ್ವಂಸ, ಲಕ್ಷಾಂತರ ರೂ. ನಷ್ಟ ; ಮನೆ ಧ್ವಂಸದ ಹಿಂದಿದೆ ರಾಜಕೀಯ ದುರ್ಗಂಧ….!? ಮನೆ ಮಾಲೀಕನ ಗಂಭೀರ ಆರೋಪ
ಹೊಸನಗರ : ಯಾವುದೇ ನೋಟಿಸ್ ನೀಡದೆ ನಿರ್ಮಾಣ ಹಂತದಲ್ಲಿದ್ದ ಮನೆಯ ಗೋಡೆಗಳನ್ನು ಎಂಪಿಎಂ ಅರಣ್ಯ ಇಲಾಖೆ ಸಿಬ್ಬಂದಿಗಳು ಜೆಸಿಬಿ ಯಂತ್ರ ಬಳಸಿ ಧ್ವಂಸಗೊಳಿಸಿದ್ದಾರೆ. ಇದರಿಂದ ನನಗೆ ಲಕ್ಷಾಂತರ ಹಣ ನಷ್ಟವಾಗಿದೆ ಎಂಬ ಗಂಭೀರ ಆರೋಪವನ್ನು ಮುಳುಗುಡ್ಡೆ ವಾಸಿ ಮನೆ ಮಾಲೀಕ ಕೆ.ಆರ್. ಸುರೇಶ್ ಮಾಡಿದ್ದಾರೆ.

ತಾಲೂಕಿನ ಕಸಬಾ ಹೋಬಳಿ ಜೇನಿ ಗ್ರಾಮ ಪಂಚಾಯತಿ ಮುಳುಗುಡ್ಡೆ ಗ್ರಾಮದ ವಾಸಿ ಕೆ.ಆರ್. ಸುರೇಶ್ ಇತ್ತೀಚೆಗೆ ಕಳೂರು ಗ್ರಾಮದ ಸರ್ವೆ ನಂಬರ್ 25ರಲ್ಲಿ ನೂತನ ಮನೆ ನಿರ್ಮಾಣಕ್ಕೆ ಮುಂದಾಗಿದ್ದರು. ಇದಕ್ಕಾಗಿ ಜೇನಿ ಗ್ರಾ.ಪಂ. ನಿಂದ ಕಟ್ಟಡ ನಿರ್ಮಾಣಗೆ ಪರವಾನಿಗೆ ಸಹ ಪಡೆದಿದ್ದರು. ಈ ಬಗ್ಗೆ ಸೂಕ್ತ ಶುಲ್ಕ ಸಂದಾಯವಾಗಿತ್ತು. ಈ ಗೋಮಾಳ ಜಾಗಕ್ಕೆ ಪಂಚಾಯತಿಯಿಂದ ಡಿ.ಆರ್. ನಂಬರ್ 4/3-2023 ಅಡಿಯಲ್ಲಿ ಡಿಮಾಂಡ್ ಪಡೆದಿದ್ದರು.
ಕಳೆದ ಮೂರು ತಿಂಗಳ ಹಿಂದೆ ಮನೆ ನಿರ್ಮಾಣಕ್ಕೆ ಮುಂದಾದಾಗ ಸಾಗರ ವಿಭಾಗದ ಎಂಪಿಎಂ ಅಧಿಕಾರಿಗಳ ಸ್ಥಳಕ್ಕೆ ಭೇಟಿ ನೀಡಿ ಈ ಜಾಗ ಎಂಪಿಎಂ ಸರಹದ್ದಿನಲ್ಲಿದೆ ಎಂದು ತಿಳುವಳಿಕೆ ನೀಡಿದ್ದರು. ಅಂದಿನ ಶಾಸಕರ ಸೂಚನೆ ಮೇರೆಗೆ ಅಧಿಕಾರಿಗಳು ಮೌನಕ್ಕೆ ಶರಣಾಗಿದ್ದರು. ಆದರೆ, ಈಗ, ಪರಿಸ್ಥಿತಿಯೇ ಬದಲಾಗಿ, ಏಕಾಏಕೀ ಎಂಪಿಎಂ ಸಿಬ್ಬಂದಿಗಳು ಜೆಸಿಬಿ ಬಳಸಿ ನಿರ್ಮಾಣ ಹಂತದಲ್ಲಿದ್ದ ಮನೆಯ ಗೋಡೆಗಳನ್ನು ಧರಾಶಾಯಿ ಮಾಡಿದ್ದು, ಬಡ ಕೃಷಿಕ ಮನೆ ಮಾಲೀಕರಿಗೆ ರೂ. 6-7 ಲಕ್ಷ ಹಣ ನಷ್ಟವಾಗಿದೆ ಎಂದು ತಿಳಿಸಿದ್ದಾರೆ.
ಈ ದುಷ್ಕೃತ್ಯದ ಹಿಂದೆ ರಾಜಕೀಯದ ದುರ್ಗಂಧ ಬೀಸುತ್ತಿದೆ ಎಂಬ ಅರೋಪವನ್ನು ಸಹ ಸುರೇಶ್ ಮಾಡಿದ್ದು, ಇದೇ ಸರ್ವೆ ನಂಬರ್‌ನಲ್ಲಿ ಈಗಾಗಲೇ ಹಲವು ಮನೆಗಳು ನಿರ್ಮಾಣವಾಗಿದೆ. ಆದರೆ, ನಮ್ಮ ಈ ಮನೆ ನಿರ್ಮಾಣಕ್ಕೆ ಮಾತ್ರವೇ ಅಧಿಕಾರಿಗಳು ತೊಂದರೆ ನೀಡಲು ಮುಂದಾಗಿರುವುದು ಏಕೆ? ಎಂದು ಅವರು ಪ್ರಶ್ನಿಸಿದ್ದಾರೆ.
ಈ ಮನೆ ನಿರ್ಮಾಣಕ್ಕಾಗಿ ಸ್ಥಳೀಯ ನ್ಯಾಯಾಲಯದಿಂದ ಶಾಶ್ವತ ಪ್ರತಿಬಂಧಕ ಆಜ್ಞೆ ಇದ್ದರೂ ಸಹ ಅಧಿಕಾರಿಗಳು ದರ್ಪತೊರಿಸಿ ಮನೆ ಧ್ವಂಸಕ್ಕೆ ಮುಂದಾಗಿರುವುದು ಎಷ್ಟು ಸರಿ?! ಎಂದಿದ್ದು, ಈ ಕೂಡಲೇ ಸಂಬಂಧಪಟ್ಟ ಇಲಾಖೆ, ಜನಪ್ರತಿನಿಧಿಗಳು ತಮಗೆ ಸೂಕ್ತ ನ್ಯಾಯ ಒದಗಿಸಬೇಕೆಂದು ಅವರು ಮನವಿ ಮಾಡಿದ್ದಾರೆ.