ಎಲ್ಲರನ್ನು ಸಂತೈಸಿ, ತೃಪ್ತಿಪಡಿಸಿ ಸಮಾಧಾನ ನೀಡುವವಳು ತಾಯಿ – ಶ್ರೀಗಳು

0 176

ರಿಪ್ಪನ್‌ಪೇಟೆ: ಹಿಂದಿನ ದಿನಮಾನಗಳಲ್ಲಿ ರಾಕ್ಷಸರನ್ನು ಸಂಹಾರ ಮಾಡಲು ಅವತರಿಸಿದವಳನ್ನು ಶಕ್ತಿ ದೇವತೆ ಎಂದು ಕರೆಯುತ್ತಿದ್ದರು. ಬದಲಾದ ಕಾಲಘಟ್ಟದಲ್ಲಿ ಮನೆಯ ಸರ್ವಜವಾಬ್ದಾರಿಯನ್ನು ನಿಭಾಯಿಸುವ ಶಕ್ತಿ ದೇವತೆಯಾಗಿ ‘ತಾಯಿ’ ರೂಪುಗೊಂಡಿದ್ದಾಳೆ ಎಂದು ಆನಂದಪುರದ ಮುರಘರಾಜೇಂದ್ರ ಮಠದ ಶ್ರೀ ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಹೇಳಿದರು.

ವಡಗೆರೆ ಶ್ರೀ ತುಳಜಾ ಭವಾನಿ ದೇವಸ್ಥಾನದ 7ನೇ ವರ್ಷದ ಪ್ರತಿಷ್ಠಾವರ್ಧಂತ್ಯೋತ್ಸವ ಧಾರ್ಮಿಕ ಸಮಾರಂಭದಲ್ಲಿ ಸಾನಿಧ್ಯವಹಿಸಿ ಆಶೀರ್ವಚನ ನೀಡಿ ತುಳಜಾ ಭವಾನಿ, ಚಾಮುಂಡೇಶ್ವರಿ, ದುರ್ಗಾಮಾತ ಎಂದು ದೇವಿಯ ನಾನಾ ರೂಪಗಳಿವೆ. ಸಂದರ್ಭಕ್ಕೆ ಅನುಸಾರವಾಗಿ ವಿವಿಧ ರೂಪವನ್ನು ಪಡೆದುಕೊಂಡಿರುತ್ತಾಳೆ. ಆದರೆ ಎಲ್ಲಾ ದೇವಿಯರ ಶಕ್ತಿ ಒಂದೇ ಆಗಿರುತ್ತದೆ. ಉಗ್ರಸ್ವರೂಪಿ ದೇವಿಯರ ಅವತಾರವೇ ರಾಕ್ಷಸರ ಸಂಹಾರವಾಗಿದ್ದು, ಅಂದಿನಕಾಲದ ಹಾಗೆ ವಿಕಾರ ರೂಪವನ್ನು ಹೊಂದಿರುವ ಅಘಾದಶಕ್ತಿಯ ದುಷ್ಟರಾಕ್ಷಸರು ಈಗಿಲ್ಲ. ಆದರೆ ಹತ್ತು ತಲೆಯವರು ಇದ್ದಾರೆ. ಬೇರೆಬೇರೆ ಯೋಚನೆ, ಇನ್ನೊಬ್ಬರಿಗೆ ತೊಂದರೆ ನೀಡುವುದು, ಅಶಾಂತಿಯನ್ನು ಸೃಷ್ಠಿಸುವುದು ಇವರುಗಳು ಈಗ ನಮ್ಮನಿಮ್ಮ ನಡೆವೆ ಇರುವ ರಾಕ್ಷಸರು. ನಿಜವಾಗಿಯೂ ಮನೆಯ ಒಡತಿ ತಾಯಿ. ಮನೆಯಲ್ಲಿನ ಎಲ್ಲಾ ಕೆಲಸಗಳನ್ನು ಬೆಳಿಗ್ಗೆಯಿಂದ ಸಂಜೆಯವರೆಗೆ ಫಲಾಪೇಕ್ಷೆಯಿಲ್ಲದೆ ಮಾಡಿ ಮನೆಮಂದಿ ಎಲ್ಲರನ್ನು ಸಂತೈಷಿ, ತೃಪ್ತಿ ಪಡಿಸಿ ಸಮಾಧಾನ ನೀಡುವವಳು ತಾಯಿ. ಭೂಮಿ, ನೀರು, ಅನ್ನ ಎಲ್ಲವನ್ನು ತಾಯಿ ಎಂತಲೆ ಸಂಭೋದಿಸುತ್ತೇವೆ. ಹೆಣ್ಣು ಮಕ್ಕಳಿಲ್ಲದ ಮನೆ ಸುಂದರವಾಗಿರಲಾರದು. ಮನೆಯ ನಾಲ್ಕು ಮಕ್ಕಳು ವಿವಿಧ ವ್ಯಕ್ತಿತ್ವನ್ನು ಹೊಂದಿದ್ದರೂ ಎಲ್ಲರನ್ನು ಸಮಾನವಾಗಿ ಪೋಷಿಸುವವಳು ತಾಯಿ. ಆದ್ದರಿಂದ ತಾಯಿಯ ರೂಪವೇ ದೇವಿ. ಬೇರೆಬೇರೆ ಹೆಸರಿನಿಂದ ಕರೆಯಲ್ಪಟ್ಟರು ಸ್ವರೂಪ ಒಂದೇ ಆಗಿದೆ. ದೇವಸ್ಥಾನದಲ್ಲಿ ತುಳಜಾ ಭವಾನಿಯನ್ನು ಆರಾಧಿಸಿ, ತಮ್ಮ ಮನೆಯಲ್ಲಿ ಮಾತೃಸ್ವರೂಪಯವರನ್ನು ಗೌರವಿಸಿದರೆ ಸುಸಂಸ್ಕೃತ ಸಮಾಜ ನಿರ್ಮಾಣವಾಗುತ್ತದೆ.

ಶಿವಮೊಗ್ಗ ಜಿಲ್ಲೆಯಲ್ಲಿ ಅತೀವಿರಳವಾಗಿರುವ ರಜಪೂತ ಜನಾಂಗದವರು ವಡಗೆರೆಯಲ್ಲಿ ಒಂದೆಡೆ ನೆಲೆಸಿದ್ದಾರೆ. ಹಿಂದಿನ ಕಾಲದಲ್ಲಿ ರಾಜಾಸ್ತಾನದಿಂದ ಬಂದ ವಲಸಿಗರಾಗಿದ್ದರೂ ಧೈರ್ಯ, ಸಹಾಸ, ಪೌರುಷ, ದೇಶ ಪ್ರೇಮಗಳು ಇವರಲ್ಲಿ ರಕ್ತಗತವಾಗಿವೆ. ಆದ್ದರಿಂದಲೇ ಈ ಗ್ರಾಮದಲ್ಲಿ ಅನೇಕ ಜನರು ದೇಶದ ಸೇನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಕ್ರೀಡಾ ಚಟುವಟಿಕೆಗಳಲ್ಲಿ ಹೆಸರು ಗಳಿಸಿದ್ದಾರೆ. ಸಾಹಸಮಯ ಬದುಕಿನಿಂದ ಚಿರಪರಿಚಿತರಾಗಿದ್ದಾರೆ. ಶಕ್ತಿ ದೇವತೆ ತುಳಜಾ ಭವಾನಿಯ ಆರಾಧನೆಯಿಂದ ಈ ಗ್ರಾಮ ಸುಭೀಕ್ಷವಾಗಿ ಇಲ್ಲಿನ ಜನರು ಇತರರಿಗೆ ಸದಾ ಮಾದರಿಯಾಗಿರಲಿ ಎಂದು ಶುಭಹಾರೈಸಿದರು.

ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು. ಸಭೆಯಲ್ಲಿ ಸಮಿತಿಯ ಅಧ್ಯಕ್ಷ ಸುರೇಶ್ ಸಿಂಗ್ ವೈ., ನಾಗೇಶ್ವರಿ ಯಕ್ಷಗಾನ ಮಂಡಳಿಯ ಮುಖ್ಯಸ್ಥ ಶ್ರೀವಾಸಭಟ್ ಅಲಸೆ, ಸುರೇಶ್ ಸಿಂಗ್ ಇನ್ನಿತರರಿದ್ದರು.

Leave A Reply

Your email address will not be published.

error: Content is protected !!