ಕೇಂದ್ರ ಬಿಜೆಪಿ ಸರ್ಕಾರ ಜನಪರ ಕಾಳಜಿ ಹೊಂದಿಲ್ಲ‌ ; ಮಾಜಿ ಸಚಿವ ಕಿಮ್ಮನೆ ರತ್ನಾಕರ ಆರೋಪ

0 0

ಹೊಸನಗರ: ರಾಜ್ಯ ಸರ್ಕಾರದ ಅನ್ನಭಾಗ್ಯ ಯೋಜನೆಯನ್ನು ಈಡೇರಿಸಲು ಅಕ್ಕಿ ಪೂರೈಕೆಗೆ ಕೇಂದ್ರ ಸರ್ಕಾರ ಒಲವು ತೋರದಿರುವುದು, ರಾಜ್ಯದ ಜನತೆಗೆ ಬಿಜೆಪಿ ಮಾಡುತ್ತಿರುವ ಅನ್ಯಾಯವಾಗಿದೆ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ ಹೇಳಿದರು.


ಅವರು ಇಲ್ಲಿನ ಗಾಂಧಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ, ರಾಜ್ಯ ಸರ್ಕಾರ ಅಕ್ಕಿ ಕೇಳುತ್ತಿರುವುದು ಕಾಂಗ್ರೆಸ್ ಪಕ್ಷಕ್ಕಲ್ಲ, ಬದಲಾಗಿ ರಾಜ್ಯದ ಬಡ ಜನತೆಗೆ ಪಡಿತರ ವಿತರಣೆ ಮಾಡುವ ಉದ್ದೇಶಕ್ಕೆ ಎನ್ನುವುದನ್ನು ರಾಜ್ಯ ಬಿಜೆಪಿ ಮುಖಂಡರು ಅರಿಯಲಿ. ಇಲ್ಲಸಲ್ಲದ ಹೇಳಿಕೆ ನೀಡುತ್ತಿರುವ ಬಿಜೆಪಿ ನಾಯಕರಿಗೆ ಜನತೆಯ ಹಿತ ಬೇಕಿಲ್ಲ. ರಾಜಕಾರಣದಲ್ಲಿ ತಮ್ಮ ಹಿತ ಕಾಯ್ದುಕೊಳ್ಳುವುದೊಂದೆ ಇವರ ಉದ್ದೇಶವಾಗಿದೆ ಎಂದು ಆರೋಪಿಸಿದರು.


ಅಕ್ಕಿ ನೀಡಲು ಕೇಂದ್ರ ಒಪ್ಪದಿದ್ದಲ್ಲಿ ಅದು ದೇಶದ ಏಕತೆಗೆ ಧಕ್ಕೆ ತರಲಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಡುವೆ ಹೊಂದಾಣಿಕೆ ಇರಬೇಕು. ನಾಳೆ ಪ್ರತ್ಯೇಕ ರಾಜ್ಯದ ಪ್ರಸ್ತಾಪ ಏಳಬಹುದು. ಜನಾಂದೋಲನ ಆಗಬಹುದು. ಇದನ್ನು ಕೇಂದ್ರ ಸರ್ಕಾರ ಅರಿಯಬೇಕು. ರಾಜ್ಯದ ಸಚಿವರೊಬ್ಬರು 3 ದಿನ ದೆಹಲಿಯಲ್ಲಿ ಕಾದರೂ ಕೇಂದ್ರ ಸಚಿವರು ಭೇಟಿಗೆ ಅವಕಾಶ ನೀಡಿಲ್ಲ. ರಾಜಕೀಯ ಕಾರಣಕೋಸ್ಕರ ಕೇಂದ್ರ ಇಂತಹ ನೀತಿಯನ್ನು ಅನುಸರಿಸಿದರೆ ಅದು ಬಿಜೆಪಿಗೆ ಮಾರಕ ಆಗಲಿದೆ ಎಂದು ಹೇಳಿದರು.


ಆಶ್ವಾಸನೆ ನೀಡಿದ್ದ ಎಲ್ಲಾ ಗ್ಯಾರಂಟಿಗಳನ್ನೂ ಜಾರಿಗೆ ತರಲಾಗುವುದು. ಯಾವುದೇ ಅನುಮಾನ ಬೇಡ. ಎರಡ್ಮೂರು ತಿಂಗಳುಗಳ ಸಮಯಾವಕಾಶ ಅಗತ್ಯವಿದೆ. 9 ವರ್ಷದ ಹಿಂದೆ ಪ್ರಧಾನಿ ಮೋದಿ ಪ್ರಸ್ತಾಪಿಸಿದ್ದ ಕಪ್ಪುಹಣ ಮರಳಿ ತರುವ ಆಶ್ವಾಸನೆ ಇನ್ನೂ ಈಡೇರಿಲ್ಲ. 2 ಕೋಟಿ ಉದ್ಯೋಗ ಮರೀಚಿಕೆಯಾಗಿದೆ. ಇಲ್ಲಿ ನೋಡಿದರೆ, ಬೆಳಗಾಗುವುದರೊಳಗೆ ಆಶ್ವಾಸನೆಗಳನ್ನು ಈಡೇರಿಸಲಿ ಎಂದು ಬಿಜೆಪಿ ನಾಯಕರು ಒತ್ತಡ ಹಾಕುತ್ತಿರುವುದು ಹಾಸ್ಯಾಸ್ಪದ ಎಂದರು.


ಬಿಜೆಪಿಯವರಿಗೆ ರೈತರ, ಬಡವರ ಕಷ್ಟದ ಅರಿವಿಲ್ಲ. ಇವರ‍್ಯಾರು ರೈತ ಕುಟುಂಬದಿಂದ ಬಂದಿಲ್ಲ. ಹಸಿದವರ ಕಷ್ಟ ಇವರಿಗೇನು ಗೊತ್ತು. ಶಕ್ತಿ ಯೋಜನೆಯಡಿ ಈಗ ಮಹಿಳೆಯರು ಇಷ್ಟು ದೊಡ್ಡ ಸಂಖ್ಯೆಯಲ್ಲಿ ಉಚಿತ ಪ್ರಯಾಣವನ್ನು ಬಳಸಿಕೊಳ್ಳುತ್ತಿರುವುದು, ಇದರ ಅಗತ್ಯತೆ ಹಾಗೂ ವಾಸ್ತವ ಸಂಗತಿಯನ್ನು ಬೆಳಕಿಗೆ ತಂದಿದೆ ಎಂದು ಸರಕಾರದ ಗ್ಯಾರಂಟಿ ಯೋಜನೆಗಳನ್ನು ಸಮರ್ಥಿಸಿಕೊಂಡರು.

“ಮುಂಬರುವ ಲೋಕಸಭೆ ಅಥವಾ ಇನ್ಯಾವುದೇ ಚುನಾವಣೆಗೆ ನಾನು ಸ್ಪರ್ಧಾಕಾಂಕ್ಷಿಯಲ್ಲ. ಲೋಕಸಭೆ ಅಭ್ಯರ್ಥಿ ಸ್ಥಾನಕ್ಕೆ ಗೀತಾ ಶಿವರಾಜ್‍ಕುಮಾರ್ ಅವರ ಹೆಸರನ್ನು ನಾನು ಪ್ರಸ್ತಾಪಿಸಲಿದ್ದೇನೆ. ಆದರೆ ರಾಜಕಾರಣದಿಂದ ಪಲಾಯನ ಮಾಡುವುದಿಲ್ಲ. ಪಕ್ಷದ ಸೂಚನೆ ಮೇರೆಗೆ ಕೆಲಸ ಮಾಡಲಿದ್ದೇನೆ.”
– ಕಿಮ್ಮನೆ ರತ್ನಾಕರ್, ಮಾಜಿ ಸಚಿವ


ಒಂದು ವೇಳೆ 10 ಕೆ.ಜಿ ಅಕ್ಕಿ ವಿತರಿಸಲು ರಾಜ್ಯ ವಿಫಲವಾದಲ್ಲಿ ಇದಕ್ಕೆ ಕೇಂದ್ರ ಸರ್ಕಾರ ಹೊಣೆ ಆಗಲಿದೆಯೇ ? ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಕೇಂದ್ರಕ್ಕೆ ಬೇಡಿಕೆ ಇಟ್ಟಿದ್ದೇವೆ. ರಾಷ್ಟ್ರಹಿತವನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಆಡಳಿತ ನಡೆಸಬೇಕು. ಒಂದು ವೇಳೆ ಕೇಂದ್ರ ಅಕ್ಕಿ ನೀಡದಿದ್ದರೂ, ಪರ್ಯಾಯ ವ್ಯವಸ್ಥೆ ಮಾಡಲಿದ್ದೇವೆ. ಕೊಂಚ ಕಾಲಾವಕಾಶ ಬೇಕಾಗಬಹುದು ಎಂದರು. ಬಿಜೆಪಿಯ ಇಂತಹ ಜನವಿರೋಧ ಧೋರಣೆ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ ನಡೆಸುವುದು ಅನಿವಾರ‍್ಯವಾಗಲಿದೆ ಎಂದರು.

‘ಗ್ಯಾರಂಟಿ ವಿಳಂಬ’ ಹಿನ್ನಲೆಯಲ್ಲಿ ರಾಜ್ಯದ ಜನರನ್ನು ದಿಕ್ಕು ತಪ್ಪಿಸುತ್ತಿರುವ ಬಿಜೆಪಿ ಕ್ರಮವನ್ನು ವಿರೋಧಿಸಿ, ಕೇಂದ್ರ ಸರ್ಕಾರ ನೀಡಿದ್ದ ಭರವಸೆಗಳನ್ನು ಕೂಡಲೇ ಜಾರಿಗೊಳಿಸುವಂತೆ ಒತ್ತಾಯಿಸಿ ಜುಲೈ 8ರಂದು ತೀರ್ಥಹಳ್ಳಿಯಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು, ಈ ಸಭೆಯಲ್ಲಿ ಸಚಿವ ಮಧು ಬಂಗಾರಪ್ಪ ಸೇರಿದಂತೆ ಪಕ್ಷದ ಪ್ರಮುಖ ನಾಯಕರು ಭಾಗವಹಿಸಲಿದ್ದಾರೆ ಎಂದರು.

ಗೋಷ್ಠಿಯಲ್ಲಿ ಪಕ್ಷದ ಪ್ರಮುಖರಾದ ಬಿ.ಜಿ.ನಾಗರಾಜ್, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯರಾದ ಚಂದ್ರಮೌಳಿಗೌಡ, ಎರಗಿ ಉಮೇಶ್, ಶ್ರೀನಿವಾಸ್ ಕಾಮತ್, ಮಹಾಬಲರಾವ್, ಅಶ್ವಿನಿಕುಮಾರ್, ಕರುಣಾಕರ ಶೆಟ್ಟಿ, ಹಾಲಗದ್ದೆ ಉಮೇಶ, ಬೃಂದಾವನ ಪ್ರವೀಣ್, ಜಯನಗರ ಗುರು, ಎಂ.ಪಿ ಸುರೇಶ್, ಪ್ರಭಾಕರ್, ಹರಿದ್ರಾವತಿ ಅಶೋಕ ಗೌಡ, ಮತ್ತಿತರರು ಇದ್ದರು.

Leave A Reply

Your email address will not be published.

error: Content is protected !!