ಗ್ರಾಮಾಂತರ ಶಿಕ್ಷಣ ಸಂಸ್ಥೆಗಳು ಸಂಘಟಿತರಾಗದಿದ್ದರೆ ಅಪಾಯ ; ಬಿಳಿಗಲ್ಲೂರು ಕೃಷ್ಣಮೂರ್ತಿ
ಹೊಸನಗರ : ಸರಕಾರದ ಅವೈಜ್ಞಾನಿಕವಾದ ಶಿಕ್ಷಣ ನೀತಿ ಮತ್ತು ಆಡಳಿತಾತ್ಮಕ ನಿರ್ಧಾರಗಳಿಂದ ಗ್ರಾಮೀಣ ಖಾಸಗಿ ಶಿಕ್ಷಣ ಸಂಸ್ಥೆಗಳು ಬಾಗಿಲು ಮುಚ್ಚುವ ಹಂತ ತಲುಪಿವೆ ಎಂದು ಸಿಗಂದೂರೇಶ್ವರಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಬಿಳಿಗಲ್ಲೂರು ಕೃಷ್ಣಮೂರ್ತಿ ಆತಂಕ ವ್ಯಕ್ತಪಡಿಸಿದರು.
ಇಂದು ಪಟ್ಟಣದಲ್ಲಿ ನಡೆದ ಗ್ರಾಮೀಣ ಖಾಸಗಿ ಶಿಕ್ಷಣ ಸಂಸ್ಥೆಗಳ ಸಮಸ್ಯೆ, ಸವಾಲು, ಸಂಘಟನೆ ಕುರಿತ ಆಡಳಿತ ಮಂಡಳಿಗಳ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಸರ್ಕಾರ ಹಾಗೂ ಶಿಕ್ಷಣ ಇಲಾಖೆ ಹೊರಡಿಸುತ್ತಿರುವ ಇಲಾಖಾ ಆದೇಶಗಳು ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಮರಣ ಶಾಸನಗಳಾಗುತ್ತಿವೆ. ಇದು ಹೀಗೇ ಮುಂದುವರೆದರೆ ಇನ್ನು ಐದು ವರ್ಷಗಳಲ್ಲಿ ಶೇ.40ರಿಂದ 50ರಷ್ಟು ಶಾಲೆಗಳನ್ನು ಮುಚ್ಚಬೇಕಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

ಗುರೂಜಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಶಾಂತಮೂರ್ತಿ ಮಾತನಾಡಿ, ಸರಕಾರಿ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳ ನಡುವೆ ಸಾಕಷ್ಟು ತಾರತಮ್ಯ ನಡೆಯುತ್ತಿದ್ದು, ಇದನ್ನು ತಡೆಯಲಾದರೂ ಖಾಸಗಿ ಶಿಕ್ಷಣ ಸಂಸ್ಥೆಗಳು ತಮ್ಮ ವಯಕ್ತಿಕ ಹಿತಾಶಕ್ತಿ ಬದಿಗಿಟ್ಟು ಒಟ್ಟಾಗಬೇಕಿದೆ ಎಂದು ಅಭಿಪ್ರಾಯಪಟ್ಟರು.
ಕೋಡೂರು ಬ್ಲಾಸಂ ಅಕಾಡೆಮಿ ನಿರ್ದೇಶಕ ಹಾಗೂ ಜೆಸಿಐ ಅಂತರಾಷ್ಟ್ರೀಯ ತರಬೇತುದಾರ ಬಿ.ಎಸ್. ಸುರೇಶ್ ಮಾತನಾಡಿ, ಖಾಸಗಿ ಶಿಕ್ಷಣ ಸಂಸ್ಥೆಗಳು ಈ ನಾಡಿಗೆ, ದೇಶಕ್ಕೆ ಬಹುದೊಡ್ಡ ಸೇವೆ ನೀಡುತ್ತಿವೆ. ದೇಶದ ಶಿಕ್ಷಣ ಕಲಿಕೆಯಲ್ಲಿ ಖಾಸಗಿ ಪಾಲೇ ಬಹುದೊಡ್ಡದು. ಅದರಲ್ಲೂ ಗ್ರಾಮೀಣ ಪ್ರದೇಶಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳದ್ದೆ ಅಗ್ರ ಸ್ಥಾನ. ಹೀಗಿದ್ದೂ ಸರಕಾರ ಗ್ರಾಮೀಣ ಶಿಕ್ಷಣ ಸಂಸ್ಥೆಗಳನ್ನು ಉಪೇಕ್ಷಯಿಂದ ನೋಡುವುದು ಸಲ್ಲ ಎಂದರು.
ಗಿಣಿವಾರ ಕೊಡಚಾದ್ರಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ಪ್ರಕಾಶ್ ಮಾತನಾಡಿ, ಇಲಾಖೆ ದೃಷ್ಟಿಯಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳು ಎಂದರೆ ಎಲ್ಲಿಲ್ಲದ ನಿರ್ಲಕ್ಷ್ಯ. ಅಷ್ಟೇ ಅಲ್ಲದೆ, ನಮ್ಮನ್ನು ಇಲಾಖೆ ಮತ್ತು ಸರಕಾರ ಮಲತಾಯಿ ಧೋರಣೆಯಿಂದ ನೋಡುತ್ತಿವೆ. ಸಾಲದ್ದಕ್ಕೆ ಕ್ರೀಡೆ, ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳು ತೀವ್ರ ತರವಾದ ಅವಗಣನೆಗೆ, ತಾರತಮ್ಯಕ್ಕೆ ಒಳಗಾಗುತ್ತಿವೆ. ಹೀಗಾಗಿ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಸೂಕ್ತ ಸ್ಥಾನ ಮತ್ತು ಗೌರವ ಸಿಗಬೇಕಾದರೆ ನಾವು ಒಂದಾಗಬೇಕು ಎಂದರು.
ಗ್ರಾಮೀಣ ಖಾಸಗಿ ಶಾಲೆಗಳು ಅತ್ಯುತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡುವ ಮೂಲಕ ಗ್ರಾಮೀಣ ವಲಸೆ ತಡೆವುದರ ಜೊತೆಗೆ ಗ್ರಾಮೀಣ ಜನರಿಗೆ ಗೌರವದ ಬದುಕು ನೀಡಿವೆ. ಇದನ್ನು ಗ್ರಾಮೀಣ ಜನ ಮತ್ತು ಶಿಕ್ಷಣ ಇಲಾಖೆ ಗುರುತಿಸುವ ಅವಶ್ಯಕತೆ ಇದೆ ಎಂದು ಹೆದ್ದಾರಿಪುರ ಸಾವಿತ್ರಮ್ಮ ರಾಮಕೃಷ್ಣ ಶಿಕ್ಷಣ ಸಂಸ್ಥೆ ಮುಖ್ಯಸ್ಥ ಶಿವರಾಮ್ ಹೇಳಿದರು.
ಪ್ರಸ್ತುತ ಗ್ರಾಮೀಣ ಶಿಕ್ಷಣ ಸಂಸ್ಥೆಗಳು ಅಳಿವು ಉಳಿವಿನ ಹೋರಾಟದಲ್ಲಿ ಇವೆ. ಇಂತಹ ಸಂದರ್ಭದಲ್ಲಿ ಸೇವಾ ಭಾವದಲ್ಲೇ ಹುಟ್ಟಿದ ಗ್ರಾಮೀಣ ಮತ್ತು ಚಿಕ್ಕ ಚಿಕ್ಕ ಶಿಕ್ಷಣ ಸಂಸ್ಥೆಗಳನ್ನು ಉಳಿಸಿಕೊಳ್ಳುವ ಸಲುವಾಗಿ ಸದೃಢ ಸಂಘಟನೆಯ ಅವಶ್ಯಕತೆ ಇದೆ. ಹೀಗಾಗಿ ಎಲ್ಲಾ ಗ್ರಾಮೀಣ ಶಾಲಾ ಆಡಳಿತ ಮಂಡಳಿಗಳು ಒಂದಾಗಿ ಸಂಘಟನೆಗೆ ಮುಂದಾಗಬೇಕು ಎಂದು ಬಟ್ಟೆಮಲ್ಲಪ್ಪ ಶ್ರೀ ವ್ಯಾಸ ಮಹರ್ಷಿ ಗುರುಕುಲದ ಮುಖ್ಯಸ್ಥ ಮಂಜುನಾಥ್ ಬ್ಯಾಣದ ಕರೆ ನೀಡಿದರು.
ಹೊಸನಗರ ಕುವೆಂಪು ವಿದ್ಯಾಸಂಸ್ಥೆಯ ನಾಗೇಂದ್ರ ಮಾತನಾಡಿ, ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ಒಟ್ಟುಗೂಡಿಸುವ ಮೂಲಕ ರಾಜ್ಯದ ಗ್ರಾಮಾಂತರ ಶಾಲೆಗಳನ್ನು ಒಂದೇ ವೇದಿಕೆಗೆ ತರಬೇಕು. ನಾವು ಸಂಘಟಿತರಾಗದಿದ್ದರೆ ಮುಂದಿನ ದಿನಗಳಲ್ಲಿ ಗ್ರಾಮೀಣ ಭಾಗದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳೇ ಇಲ್ಲವಾಗುವ ಅಪಾಯದ ಜೊತೆಗೆ ರಾಜ್ಯ ಕೂಡ ಶಿಕ್ಷಣ ಕ್ಷೆತ್ರದಲ್ಲಿ ಹಿನ್ನಡೆ ಅನುಭವಿಸಬೇಕಾಗುತ್ತದೆ ಎಂದರು.
ಸಭೆಯಲ್ಲಿ ಬ್ಲಾಸಂ ಶಿಕ್ಷಣ ಸಂಸ್ಥೆ ಮುಖ್ಯಸ್ಥ ಸುಧಾಕರ್ ಮಾತನಾಡಿ ಇಡೀ ರಾಜ್ಯದಲ್ಲಿರುವ ಎಲ್ಲಾ ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ಒಂದೇ ವೇದಿಕೆಗೆ ತರುವ ಪ್ರಯತ್ನ ಮಾಡೋಣವೆಂದು ಕರೆ ನೀಡಿದರು.
ಸಭೆಯಲ್ಲಿ ಗ್ರಾಮೀಣ ಖಾಸಗಿ ಶಿಕ್ಷಣ ಸಂಸ್ಥೆಗಳ ರಾಜ್ಯ ಮಟ್ಟದ ಒಕ್ಕೂಟ ರಚನೆಯ ಬಗ್ಗೆ ಸುದೀರ್ಘ ಚರ್ಚೆ ನಡೆಸಲಾಯಿತು. ಇದಕ್ಕಾಗಿ ಬೈಲಾ, ನಿಯಮವಳಿಗಳನ್ನು ರೂಪಿಸುವ ನಿರ್ಧಾರ ಮಾಡಿ, ಮುಂದಿನ ಸಭೆಯನ್ನು ಜುಲೈ 22ರ ಶನಿವಾರ ನಡೆಸಲು ಸಭೆಯಲ್ಲಿ ಒಮ್ಮತದಿಂದ ನಿರ್ಣಯಿಸಲಾಯಿತು.
ಮಂಜುನಾಥ್ ಬ್ಯಾಣದ ಸ್ವಾಗತಿಸಿ, ನಾಗೇಂದ್ರ ವಂದಿಸಿದರು.