ಚಲಿಸುತ್ತಿದ್ದ ಖಾಸಗಿ ಬಸ್‌ನಿಂದ ಮಗುವಿನೊಂದಿಗೆ ಬಿದ್ದಿದ್ದ ವ್ಯಕ್ತಿ ಚಿಕಿತ್ಸೆ ಫಲಿಸದೆ ಕೊನೆಯುಸಿರು !
ರಿಪ್ಪನ್‌ಪೇಟೆ : ಚಲಿಸುತ್ತಿದ್ದ ಖಾಸಗಿ ಬಸ್‌ನಿಂದ ಮಗುವಿನೊಂದಿಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೆ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.
ಮೃತನನ್ನು ಕುಮಾರ್ ಆರ್ (62) ಎಂದು ಗುರುತಿಸಲಾಗಿದೆ. ಮೂಲತಃ ಮಡಿಕೇರಿಯವನಾದ ಈತ ಕಳೆದೊಂದು ವರ್ಷದಿಂದ ಚಿಕ್ಕಜೇನಿ ತಮ್ಮ ಪುತ್ರಿಯ ಮನೆಯಲ್ಲಿ ವಾಸವಾಗಿದ್ದರು.

ಕಳೆದ ಮಂಗಳವಾರ ಕೋಡೂರು ಸಮೀಪದ ಶಾಂತಪುರದಲ್ಲಿ ಹೊಸನಗರದಿಂದ ಶಿವಮೊಗ್ಗ ಕಡೆ ಹೊರಟಿದ್ದ ಖಾಸಗಿ ಬಸ್‌ಗೆ ಕೀಳಂಬಿ ಬಸ್ ನಿಲ್ದಾಣದಲ್ಲಿ ಮಗು (ಮೊಮ್ಮಗ) ವಿನೊಂದಿಗೆ ಬಸ್ ಏರಿದ್ದ ಈತ ಕೇವಲ 200 ಮೀ. ದೂರ ಸಾಗುವಷ್ಟರಲ್ಲಿ ಬಸ್‌ನಿಂದ ಕೆಳಗೆ ಬಿದಿದ್ದರು, ಈ ವೇಳೆ ತಲೆ, ಕೈ, ಕಾಲುಗಳಿಗೆ ಗಂಭೀರ ಸ್ವರೂಪದ ಗಾಯಗಳಾಗಿತ್ತು.
ಬಸ್‌ನಲ್ಲಿ ಅಧಿಕ ಜನ ತುಂಬಿದ್ದು ತಿರುವಿನಲ್ಲಿ ಚಾಲಕ ಅಜಾಗರೂಕತೆಯಿಂದ ಅತಿವೇಗದಲ್ಲಿ ಬಸ್ ಚಲಾಯಿಸಿದ್ದರಿಂದ ಈ ಘಟನೆ ನಡೆದಿತ್ತು ಎಂದು ಹೇಳಲಾಗಿದೆ. ಅದೃಷ್ಟವಶಾತ್ ಈ ಘಟನೆಯಲ್ಲಿ ಮಗು ಪ್ರಾಣಾಪಾಯದಿಂದ ಪಾರಾಗಿದೆ.
ಗಾಯಾಳು ವ್ಯಕ್ತಿಗೆ ಕೂಡಲೇ ಕೋಡೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಆ್ಯಂಬುಲೆನ್ಸ್ ಮೂಲಕ ಶಿವಮೊಗ್ಗಕ್ಕೆ ರವಾನಿಸಲಾಗಿತ್ತು. ನಂತರ ಇನ್ನೂ ಉನ್ನತ ಚಿಕಿತ್ಸೆಗಾಗಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ರವಾನಿಸಲಾಗಿತ್ತು. ಅಲ್ಲಿ ವೆಂಟಿಲೇಟರ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಗಾಯಾಳು ಕುಮಾರ್ ಸ್ಥಿತಿ ಗಂಭೀರವಾಗಿದ್ದು ಸಾವು-ಬದುಕಿನ ನಡುವೆ ಹೋರಾಡುತ್ತಿದ್ದರು. ದುರಾದೃಷ್ಟವಶಾತ್ ಚಿಕಿತ್ಸೆ ಫಲಿಸದೆ ಭಾನುವಾರ ಸಂಜೆ ಮೃತಪಟ್ಟಿದ್ದಾರೆ ಎಂದು ‘ಮಲ್ನಾಡ್ ಟೈಮ್ಸ್‘ಗೆ ಮೂಲಗಳು ತಿಳಿಸಿವೆ.

ಮಡಿಕೇರಿಯಲ್ಲಿ ಕುಮಾರ್ ಅಂತ್ಯಕ್ರಿಯೆ ನಡೆಯಿತು ಎಂದು ತಿಳಿದು ಬಂದಿದೆ. ಈ ಘಟನೆ ಸಂಬಂಧ ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.