ಜಲ್ಲಿ ಸಾಗಿಸುತ್ತಿದ್ದ ಟಿಪ್ಪರ್ ಲಾರಿ ಪಲ್ಟಿ ; ಎರಡು ಗಂಟೆಗಳಿಗೂ ಹೆಚ್ಚು ಕಾಲ ಸಂಚಾರ ಸ್ಥಗಿತ !
ಹೊಸನಗರ : ಜಲ್ಲಿ ಸಾಗಿಸುತ್ತಿದ್ದ ಟಿಪ್ಪರ್ ಲಾರಿಯೊಂದು ಬೈಂದೂರು-ರಾಣೆಬೆನ್ನೂರು ರಾಷ್ಟ್ರೀಯ ಹೆದ್ದಾರಿಯ ನಿಟ್ಟೂರು ಬಳಿ ನರ್ಸರಿಯಲ್ಲಿ ಉರುಳಿ ಬಿದ್ದ ಪರಿಣಾಮ ಸುಮಾರು ಎರಡು ಗಂಟೆಗಳಿಗೂ ಹೆಚ್ಚು ಕಾಲ ಸಂಚಾರ ಸ್ಥಗಿತಗೊಂಡು, ವಾಹನ ಸವಾರರು ಪರದಾಡಿದ ಘಟನೆ ಶುಕ್ರವಾರ ಮಧ್ಯಾಹ್ನ ನಡೆದಿದೆ.

ಹೊಸನಗರದಿಂದ ಜಲ್ಲಿ ತುಂಬಿಕೊಂಡು ತುಮರಿ ಕಡೆ ಹೋಗುತ್ತಿದ್ದ ಲಾರಿ, ನರ್ಸರಿ ಬಳಿಯ ತಡೆಗೋಡೆ ಕಳಚಿ ಬಿದ್ದ ಕಿರು ಸೇತುವೆ ಬಳಿ ಆಯ ತಪ್ಪಿ ಬಿದ್ದಿತ್ತು. ಈ ಕಿರು ಸೇತುವೆ ತಡೆಗೋಡೆ ಕಳೆದ 4-5 ತಿಂಗಳ ಹಿಂದೆಯೇ ಕಳಚಿ ಬಿದ್ದಿದ್ದು, ಅನೇಕ ವಾಹನಗಳು ಇದೇ ಸ್ಥಳದಲ್ಲಿ ಅಪಘಾತಕ್ಕೆ ಈಡಾಗಿದ್ದವು. ಹಲವು ಬಾರಿ ಹೆದ್ದಾರಿ ಪ್ರಾಧಿಕಾರಕ್ಕೆ ಕಿರು ಸೇತುವೆಯ ತಡೆಗೋಡೆ ಸರಿಪಡಿಸುವಂತೆ ಮನವಿ ಮಾಡಿದಮಾಡಿದರೂ ಪ್ರಾಧಿಕಾರ ನಿರ್ಲಕ್ಷ್ಯ ವಹಿಸಿರುವುದರಿಂದ ಪದೇ ಪದೆ ಈ ಸ್ಥಳದಲ್ಲಿ ಅಪಘಾತ ಹೆಚ್ಚಾಗಿರುವುದಕ್ಕೆ ಕಾರಣವಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಿಂಗಳಿಂದ ದುರಸ್ತಿ ಹಿನ್ನೆಲೆಯಲ್ಲಿ ಬಾಳೆಬರೆ ಘಾಟಿ ಬಂದಾಗಿ ಅಲ್ಲಿ ಓಡಾಡುತ್ತಿದ್ದ ಎಲ್ಲ ವಾಹನಗಳು ಕೊಲ್ಲೂರು ಮಾರ್ಗದಲ್ಲೇ ಓಡಾಡುತ್ತಿರುವುದರಿಂದ ರಸ್ತೆ ಸದಾಕಾಲ ವಾಹನಗಳಿಂದ ಗಿಜಿಗುಡುತ್ತಿದೆ. ಲಾರಿ ಪಲ್ಟಿಯಾಗಿ ಹೆದ್ದಾರಿ ಬಂದಾದ ಕಾರಣ ಸುಮಾರು 1 ಕಿ.ಮೀ.ಗಳಷ್ಟು ದೂರ ಟ್ರಾಫಿಕ್ ಜಾಮ್ ಉಂಟಾಗಿತ್ತು. ನಂತರ ಸ್ಥಳೀಯರ ಸಹಕಾರದಿಂದ ಜೆಸಿಬಿ ತರಿಸಿ ಟಿಪ್ಪರ್ ಲಾರಿ ತೆರವುಗೊಳಿಸಲಾಯಿತು.