ನಿಮ್ಮ ಪ್ರೀತಿ ಮತವಾಗಿ ಪರಿವರ್ತನೆ ಆಗಿ ಬೇಳೂರನ್ನು ಜಯಶಾಲಿ ಮಾಡಲಿ : ಶಿವಣ್ಣ

0 0

ಹೊಸನಗರ : ಬೇಳೂರು ಗೋಪಾಲಕೃಷ್ಣ ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರ ಗರಡಿಯಲ್ಲಿ ಪಳಗಿದವರು. ಮಾತ್ರವಲ್ಲ ಅವರ ಪ್ರೀತಿಯ ಮಾನಸ ಪುತ್ರರಾಗಿದ್ದರು ಎಂದು ಸೊರಬ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಮಧು ಬಂಗಾರಪ್ಪ ಹೇಳಿದರು.

ಹೊಸನಗರದಲ್ಲಿ ಸೋಮವಾರ ಚುನಾವಣೆ ಸಭೆಯಲ್ಲಿ ಮಾತನಾಡಿ, ‘ಬಂಗಾರಪ್ಪಜೀ ಕೊನೆಯ ಚುನಾವಣೆಯಲ್ಲಿ ಸೋಲು ಕಂಡಿದ್ದರು. ಈ ಬಾರಿ ಬೇಳೂರಿಗೆ ನೀಡುವ ಮತ ಬಂಗಾರಪ್ಪ ಅವರಿಗೆ ಸಲ್ಲುತ್ತದೆ’ ಎಂದು ಹೇಳಿದರು.

ಮತ ಪ್ರಚಾರ ಹಾಗೂ ರೋಡ್‌ ಶೋನಲ್ಲಿ ಭಾಗವಹಿಸಿದ್ದ ಚಲನಚಿತ್ರ ನಟ ಶಿವರಾಜ್‌ಕುಮಾರ್ ಮಾತನಾಡಿ, ‘ಸುಡುವ ಬಿಸಿಲಿನಲ್ಲೂ ನನಗಾಗಿ ಕಾದಿದ್ದೀರಿ. ಪ್ರೀತಿ ಅಭಿಮಾನ ತೋರಿದ್ದೀರಿ. ಅದಕ್ಕೆ ಚಿರಋಣಿ. ನಿಮ್ಮ ಪ್ರೀತಿ ಮತವಾಗಿ ಪರಿವರ್ತನೆ ಆಗಿ ಬೇಳೂರು ಗೋಪಾಲಕೃಷ್ಣರನ್ನು ಜಯಶಾಲಿ ಮಾಡಲಿ’ ಎಂದು ಹೇಳಿದರು.

ಸಾಗರ ಕಾಂಗ್ರೆಸ್ ಅಭ್ಯರ್ಥಿ ಬೇಳೂರು ಗೋಪಾಲಕೃಷ್ಣ ಮಾತನಾಡಿ, ‘ಹೊಸನಗರದಲ್ಲಿ ಅಭಿವೃದ್ಧಿ ನಡೆದಿದ್ದರೆ ಅದು ನನ್ನ ಕಾಲದಲ್ಲಿ. ಬಸ್ ನಿಲ್ದಾಣ ಸೇರಿದಂತೆ ದೊಡ್ಡ ದೊಡ್ಡ ಕಟ್ಟಡಗಳು ನಾನು ಶಾಸಕನಾಗಿದ್ದಾಗ ನಿರ್ಮಾಣವಾಗಿವೆ. ಆದರೆ, ಈಗ ನಾನು ಮಾಡಿದ್ದು ಎಂದು ಹೇಳಿಕೊಂಡು ಕೆಲವರು ಓಡಾಡುತ್ತಿದ್ದಾರೆ’ ಎಂದು ಆರೋಪಿಸಿದರು.

ಪ್ರಮುಖರಾದ ಹಕ್ರೆ ಮಲ್ಲಿಕಾರ್ಜುನ್, ಕಲಗೋಡು ರತ್ನಾಕರ್, ಬಿ.ಜಿ.ನಾಗರಾಜ್, ಹಾಲಗದ್ದೆ ಉಮೇಶ್ ಪ್ರಭಾಕರರಾವ್, ಮಹಾಬಲರಾವ್, ಸಣ್ಣಕ್ಕಿ ಮಂಜು, ಅಶ್ವಿನಿಕುಮಾರ್ ಸೇರಿ ಬ್ಲಾಕ್ ಕಾಂಗ್ರೆಸ್ ಪ್ರಮುಖರು ಇದ್ದರು.

ಮಧು ಬೇರೆಯಲ್ಲ, ಬೇಳೂರು ಬೇರೆಯಲ್ಲ : ಗೀತಾ ಶಿವರಾಜ್‌ಕುಮಾರ್‌

‘ನನಗೆ ತಮ್ಮ ಮಧು ಬೇರೆಯಲ್ಲ, ನಮ್ಮ ಅಪ್ಪಾಜಿ ಪ್ರೀತಿಗೆ ಪಾತ್ರರಾಗಿದ್ದ ಬೇಳೂರು ಬೇರೆಯಲ್ಲ. ಬೇಳೂರು ಗೋಪಾಲಕೃಷ್ಣ ಅವರನ್ನು ಅತ್ಯಧಿಕ ಮತಗಳಿಂದ ಗೆಲ್ಲಿಸಿ’ ಎಂದು ಗೀತಾ ಶಿವರಾಜ್‌ಕುಮಾರ್ ಮನವಿ ಮಾಡಿದರು.

ರೋಡ್‌ ಶೋನಲ್ಲಿ ಮಿಂಚಿದ ಶಿವರಾಜ್‌ಕುಮಾರ್‌

ಭರ್ಜರಿ ರೋಡ್ ಶೋ ಮಾವಿನಕೊಪ್ಪದಿಂದ ಹೊಸನಗರದ ಪ್ರಮುಖ ಮಾರ್ಗದಲ್ಲಿ ರೋಡ್ ಶೋ ನಡೆಸಲಾಯಿತು. ಈ ವೇಳೆ ಸಾವಿರಕ್ಕೂ ಹೆಚ್ಚು ಕಾರ್ಯಕರ್ತರಿಂದ ಬೈಕ್ ರ‍್ಯಾಲಿ ನಡೆಯಿತು. ಬಳಿಕ ಬಸ್ ನಿಲ್ದಾಣದ ಆವರಣದಲ್ಲಿ ಸಭೆ ನಡೆಯಿತು. ಚಲನಚಿತ್ರ ನಟ ಶಿವರಾಜ್‌ಕುಮಾರ್ ಪರ ಘೋಷಣೆ ಮುಗಿಲು ಮುಟ್ಟಿತ್ತು. ಅಭಿಮಾನಿಗಳ ಒತ್ತಾಸೆ ಮೇರೆಗೆ ಶಿವಣ್ಣ ‘ಆಡಿಸಿ ನೋಡು.. ಬೀಳಿಸಿ ನೋಡು… ಉರುಳಿ ಹೋಗದು’ ಹಾಡು ಹೇಳಿ ಮತದಾರರನ್ನು ರಂಜಿಸಿದರು.

Leave A Reply

Your email address will not be published.

error: Content is protected !!