ನೇತ್ರ ಶಿಬಿರದಿಂದ ಹಿರಿಯರಿಗೆ ಗೌರವದ ಬದುಕು ; ಮಂಜುನಾಥ್ ಬ್ಯಾಣದ

0 0

ಹೊಸನಗರ : ಉಚಿತ ನೇತ್ರ ಶಿಬಿರಗಳಿಂದ ಹಿರಿಯರಿಗೆ ಸ್ವಾಭಿಮಾನದ ಜೊತೆಗೆ ಗೌರವಾದ ಬದುಕು ನೀಡಲು ಸಾಧ್ಯ ಎಂದು ಸಾಮಾಜಿಕ ಕಾರ್ಯಕರ್ತ ಮಂಜುನಾಥ್ ಬ್ಯಾಣದ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಮಾರುತಿಪುರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಶಂಕರ್ ಕಣ್ಣಿನ ಆಸ್ಪತ್ರೆ ನೇತೃತ್ವದಲ್ಲಿ ಶ್ರೀ ಬಸವನ ಬ್ಯಾಣದ ಅಯ್ಯಪ್ಪ ಮೆಮೋರಿಯಲ್ ಟ್ರಸ್ಟ್, ಶ್ರೀ ವ್ಯಾಸ ಮಹರ್ಷಿ ಗುರುಕುಲ ಬಟ್ಟೆಮಲ್ಲಪ್ಪ ಹಾಗೂ ಗ್ರಾಮ ಪಂಚಾಯಿತಿ ಮಾರುತಿಪುರ ಇವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಉಚಿತ ನೇತ್ರ ಶಿಬಿರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಸಂಬಂಧಗಳು ಶಿಥಿಲಗೊಳ್ಳುತ್ತಿರುವ ಈ ಸಂದರ್ಭದಲ್ಲಿ ಹಿರಿಯರು ಹಲವು ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇದರಲ್ಲಿ ಬಹು ಮುಖ್ಯವಾಗಿ ಅಂದತ್ವ ಕೂಡ ಒಂದು. ಕುಟುಂಬ ಒತ್ತಡ, ತಾತ್ಸಾರ, ಅವಗಣನೆಯಿಂದಾಗಿ ಹಿರಿಯರು ಮಾನಸಿಕ ಯಾತನೆಯಲ್ಲಿ ನರಳುತ್ತಿದ್ದಾರೆ. ಹೀಗಾಗಿ ಇಂತಹ ಅಂದತ್ವ ಶಿಬಿರಗಳಿಂದ ಹಿರಿಯರು ತಾವೇ ಸ್ವತಃ ಭಾಗವಹಿಸಿ ತಮ್ಮ ಅಂದತ್ವ ನಿವಾರಿಸಿಕೊಳ್ಳಬಹುದು. ಆ ಮೂಲಕ ತಮ್ಮ ಸ್ವಾಭಿಮಾನದ ಬದುಕಿನ ಜೊತೆಗೆ ಗೌರವದ ಬದುಕು ಕೂಡ ಕಾಣಬಹುದಾಗಿದೆ ಎಂದು ಮಂಜುನಾಥ್ ಬ್ಯಾಣದ ಹೇಳಿದರು.

ಸಂಘ – ಸಂಸ್ಥೆಗಳು ನೇತ್ರ ಶಿಬಿರ ಸೇರಿದಂತೆ ಜಾನೋಪಯೋಗಿ ಶಿಬಿರಗಳನ್ನು ಹೆಚ್ಚು ಹೆಚ್ಚು ಆಯೋಜಿಸುವುದರಿಂದ ಆರೋಗ್ಯ ಪೂರ್ಣ ಸಮಾಜ ನಿರ್ಮಾಣ ಕೂಡ ಸಾಧ್ಯ. ಹೀಗಾಗಿ ಇಂತಹ ಶಿಬಿರಗಳನ್ನು ಗ್ರಾಮದ ಏಕತೆಗಾಗಿ ಎಲ್ಲರೂ ಒಂದುಗೂಡಿ ಸಾಧ್ಯ ಮಾಡಬೇಕು ಎಂದು ಅವರು ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಾರುತಿಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ಚಿದಂಬರ್ ಮಾತನಾಡಿ, ಮಾರುತಿಪುರ ಗ್ರಾಮದಲ್ಲಿ ರಕ್ತದಾನ ಶಿಬಿರ ಸೇರಿದಂತೆ ಹೆಚ್ಚು ಹೆಚ್ಚು ಆರೋಗ್ಯ ಶಿಬಿರಗಳು ನಡೆಯುತ್ತಿವೆ. ಗ್ರಾಮ ಪಂಚಾಯಿತಿ ಸದಾ ಇಂತಹ ಕಾರ್ಯಗಳಲ್ಲಿ ಜೊತೆಗೆ ನಿಲ್ಲುತ್ತದೆ ಎಂದರು.

ಮುಂದಿನ ದಿನಗಳಲ್ಲಿ ಇಂತಹ ಶಿಬಿರಗಳಿಗೆ ಗ್ರಾಮ ಪಂಚಾಯಿತಿ ಹೆಚ್ಚಿನ ಸಹಕಾರ ನೀಡಲಿದೆ. ಜನರು ಇದರ ಸದುಪಯೋಗ ಪಡೆದು ನಮ್ಮ ಸುತ್ತಲಿನ ಸಮಾಜ ಆರೋಗ್ಯ ಪೂರ್ಣವಾಗಿ ನಿರ್ಮಿಸಲು ಸಹಕಾರ ನೀಡುವಂತೆ ಚಿದಂಬರ್ ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಜಯಮ್ಮ, ಸದಸ್ಯರಾದ ದೀಪಿಕಾ ಕೃಷ್ಣ, ಪ್ರಕಾಶ್, ಗಣೇಶ್ ಚಿಕ್ಕಮಣತಿ, ನಾಗಪ್ಪ ಮಾತನಾಡಿದರು. ನೇತ್ರಾಧಿಕಾರಿ ಕೃಷ್ಣ ರಾಜು ಅವರು ಪ್ರಾಸ್ತವಿಕವಾಗಿ ಮಾತನಾಡಿದರು. ಶಂಕರ್ ಕಣ್ಣಿನ ಆಸ್ಪತ್ರೆಯ ಕಾರ್ಯಕ್ರಮಾಧಿಕಾರಿ ವೆಂಕಟೇಶ್ ಶಿಬಿರದ ಮಾಹಿತಿ ನೀಡಿದರು. ಆರೋಗ್ಯ ಇಲಾಖೆಯ ಶ್ರೀನಿವಾಸ್ ಕಾರ್ಯಕ್ರಮ ನಿರೂಪಿಸಿ, ರೂಪ ಅವರು ಸ್ವಾಗತಿಸಿ ವಂದಿಸಿದರು.

Leave A Reply

Your email address will not be published.

error: Content is protected !!